ಬೈಂದೂರು: ನಾಗೂರು ಮಸೀದಿ ಆವರಣದೊಳಗೆ ಹಂದಿ ಮಾಂಸ ಎಸೆದ ಕಿಡಿಗೇಡಿಗಳು

Update: 2019-01-15 13:31 GMT

ಬೈಂದೂರು, ಜ.15: ಬೈಕಿನಲ್ಲಿ ಬಂದ ಕಿಡಿಗೇಡಿಗಳಿಬ್ಬರು ಹಂದಿಯ ಕಿವಿ ಹಾಗೂ ಕಾಲಿನ ಭಾಗವನ್ನು ಕಿರಿಮಂಜೇಶ್ವರ ಸಮೀಪದ ನಾಗೂರು ನೂರು ಜಾಮೀಯ ಜುಮಾ ಮಸೀದಿಯ ಆವರಣದಲ್ಲಿ ಎಸೆದು ಹೋಗಿರುವ ಘಟನೆ ಜ.14ರಂದು ರಾತ್ರಿ ವೇಳೆ ನಡೆದ ಬಗ್ಗೆ ವರದಿಯಾಗಿದೆ.

ಮಸೀದಿಯ ಮುಅಝ್ಝಿನ್ ಸಲೀಂ ಎಂಬವರು ಇಂದು ಬೆಳಗಿನ ಜಾವ 5:30ರ ಸುಮಾರಿಗೆ ನಮಾಝ್‌ ಗೆಂದು ಮಸೀದಿಗೆ ಬಂದಾಗ ಆವರಣದಲ್ಲಿ ಹಂದಿಯ ಕಿವಿ ಹಾಗೂ ಕಾಲಿನ ಭಾಗ ಬಿದ್ದಿರುವುದನ್ನು ನೋಡಿದ್ದಾರೆ. ಬಳಿಕ ಅವರು ಈ ವಿಚಾರವನ್ನು ಆಡಳಿತ ಸಮಿತಿಗೆ ತಿಳಿಸಿದ್ದಾರೆನ್ನಲಾಗಿದೆ.

ಮಸೀದಿಗೆ ಆಳವಡಿಸಲಾದ ಸಿಸಿ ಕ್ಯಾಮೆರಾವನ್ನು ಪರಿಶೀಲಿಸಿದಾಗ ಇಬ್ಬರು ಯುವಕರು ರಾತ್ರಿ 10:55ಕ್ಕೆ ಬೈಕಿನಲ್ಲಿ ಬಂದು ಹಂದಿಯ ಕಿವಿ ಮತ್ತು ಕಾಲುಗಳನ್ನು ಆವರಣದೊಳಗೆ ಎಸೆದು ಪರಾರಿಯಾಗುವ ದೃಶ್ಯ ಕಂಡುಬಂದಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಸಿಸಿಟಿವಿ ದೃಶ್ಯಗಳನ್ನು ಮಸೀದಿಯವರು ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ ನಾಗೂರು, ಗಂಗೊಳ್ಳಿ ಸೇರಿ ದಂತೆ ಹಲವು ಕಡೆಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ನಾಗೂರು ಪರಿಸರದಲ್ಲಿ ಎಲ್ಲರೂ ಕೋಮು ಸಾಮರಸ್ಯದಲ್ಲಿ ಬಾಳುತ್ತಿದ್ದು, ಈ ಸೌಹಾರ್ದತೆಯನ್ನು ಹಾಳುಗೆಡವಲು ಕೆಲವು ಶಕ್ತಿಗಳು ಶ್ರಮಿಸುತ್ತಿದೆ. ಇದರಲ್ಲಿ ಶಾಮಿಲಾಗಿರುವವರನ್ನು ಹಾಗೂ ಇದರ ಹಿಂದೆ ಇರುವ ಶಕ್ತಿಯನ್ನು ಕಾನೂನು ಪ್ರಕಾರ ಶಿಕ್ಷಿಸಿ ಪರಿಸರದಲ್ಲಿ ಶಾಂತಿ ನೆಲೆಸಲು ಅನುವು ಮಾಡಿಕೊಡಬೇಕು ಎಂದು ಮಸೀದಿ ಆಡಳಿತ ಕಮಿಟಿ ಆಗ್ರಹಿಸಿದೆ.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕುಂದಾಪುರ ತಾಲೂಕು ಅಧ್ಯಕ್ಷ ಹನೀಫ್ ಗಂಗೊಳ್ಳಿ ನೇತೃತ್ವದ ನಿಯೋಗ ಸ್ಥಳಕ್ಕೆ ಭೇಟಿ ನೀಡಿದ್ದು, ಬಳಿಕ ಪೊಲೀಸರ ಜೊತೆ ಮಾತುಕತೆ ನಡೆಸಿ, ಪ್ರಕರಣದ ಆರೋಪಿಗಳನ್ನು ಶೀಘ್ರವೇ ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಜರಗಿಸಬೇಕು ಎಂದು ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News