ಜ.20: ವಿಠಲ ವಿದ್ಯಾ ಸಂಘದ ಹಿರಿಯ ವಿದ್ಯಾರ್ಥಿಗಳ ‘ಸಕುಟುಂಬ ಸ್ನೇಹಮಿಲನ’ ಕಾರ್ಯಕ್ರಮ

Update: 2019-01-15 13:47 GMT

ಬಂಟ್ವಾಳ, ಜ. 15: ವಿಟ್ಲದ ವಿಠಲ ವಿದ್ಯಾ ಸಂಘದ ಹಿರಿಯ ವಿದ್ಯಾರ್ಥಿಗಳನ್ನು ಒಂದೇ ಸೂರಿನಡಿ ಸೇರಿಸುವ ಉದ್ದೇಶದಿಂದ ಜ.20ರಂದು ‘ಸಕುಟುಂಬ ಸ್ನೇಹಮಿಲನ-2019’ ಎಂಬ ಕಾರ್ಯಕ್ರಮವನ್ನು ವಿದ್ಯಾಸಂಸ್ಥೆಯ ವಠಾರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಸಂಚಾಲಕ ಎಲ್.ಎನ್ ಕೂಡೂರು ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ವಿಠಲ ಪದವಿ ಪೂರ್ವ ಕಾಲೇಜು, ವಿಠಲ ಪ್ರೌಢಶಾಲೆ, ವಿಠಲ ಸುಪ್ರಜಿತ್ ಐಟಿಐನ ಹಿರಿಯ ವಿದ್ಯಾರ್ಥಿಗಳು, ತಮ್ಮ ಬದುಕು ರೂಪಿಸಿದ ನಿವೃತ್ತ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಯ ಉಪಸ್ಥಿತಿಯಲ್ಲಿ ಅಂದು ದಿನವಿಡೀ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ವಿಠಲ ಹೈಸ್ಕೂಲ್‌ನ ಹಳೆ ವಿದ್ಯಾರ್ಥಿ ಸಂಘದ ಪ್ರಥಮ ಅಧ್ಯಕ್ಷ, ಜಿಲ್ಲಾ ನಿವೃತ್ತ ನ್ಯಾಯಾಧೀಶ ಪದ್ಮನಾಭ ಕೆದಿಲಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.

ಬೆಳಗ್ಗೆ ಸ್ನೇಹಮಿಲನ, ಬದುಕು ರೂಪಿಸಿದ ಹಿರಿಯರಿಗೆ ನಮನ ಸಲ್ಲಿಕೆ, ಸಾಧಕರ ಅನಿಸಿಕೆ, ಸಂವಾದ, ಭೋಜನದ ಬಳಿಕ ಮನೋರಂಜನಾ ಕಾರ್ಯಕ್ರಮ ಹಾಗೂ ಫನ್ ಗೇಮ್ಸ್ ಕಾರ್ಯಕ್ರಮ ನಡೆಯಲಿದೆ.

ಸಭಾ ಕಾರ್ಯಕ್ರಮದಲ್ಲಿ ಬೆಂಗಳೂರು ಸುಪ್ರಜಿತ್ ಎಂಜಿನಿಯರ್ ಲಿಮಿಟೆಡ್‌ನ ಆಡಳಿತ ನಿರ್ದೇಶಕ ಅಜಿತ್ ಕುಮಾರ್ ರೈ, ಬೆಂಗಳೂರು ಕೆಇಬಿ ನಿವೃತ್ತ ಎಂಜಿನಿಯರ್ ಪದ್ಮನಾಭ ಭಟ್, ಚಲನಚಿತ್ರ ಸಂಗೀತ ನಿರ್ದೇಶಕ ವಿ.ಮನೋಹರ್, ನಿವೃತ್ತ ಪ್ರಾಧ್ಯಾಪಕಿ ಡಾ.ಪಾರ್ವತಿ ಜಿ. ಐತಾಳ್, ಮುಂಬಾಯಿ ಮೆಝ್‌ಗಾನ್ ಡಾಕ್‌ಶಿಪ್ ಬಿಲ್ಡರ್ಸ್‌ನ ನಿವೃತ್ತ ಜನರಲ್ ಮ್ಯಾನೇಜರ್ ಅಲ್ಫೋನ್ಸ್ ಸಿಲೆಸ್ಟರ್, ಪಣಂಬೂರು ಪೊಲೀಸ್ ಇನ್‌ಸ್ಪೆಕ್ಟರ್ ರಫೀಕ್ ಭಾಗವಹಿಸಲಿದ್ದಾರೆ ಎಂದು ಎಲ್.ಎನ್.ಕೂಡೂರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಠಲ ವಿದ್ಯಾ ಸಂಘದ ಅಧ್ಯಕ್ಷ ಮುಗುಳಿ ತಿರುಮಲೇಶ್ವರ ಭಟ್, ಕಾಲೇಜು ಪ್ರಾಂಶುಪಾಲ ಆದರ್ಶ ಚೊಕ್ಕಾಡಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರವಿಪ್ರಕಾಶ್, ಸಂಚಲನ ಸಮಿತಿಯ ಗೌರವಾಧ್ಯಕ್ಷ ಎಚ್.ಸುಬ್ರಹ್ಮಣ್ಯ ಭಟ್, ಅಧ್ಯಕ್ಷ ರಾಧಾಕೃಷ್ಣ ನಾಯಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News