ಜ.23: ಕಾಪು ಮಾರಿಗುಡಿ ಜೀರ್ಣೋದ್ಧಾರಕ್ಕೆ ನಿಧಿಕುಂಭ ಸ್ಥಾಪನೆ

Update: 2019-01-15 14:27 GMT

ಕಾಪು, ಜ.12: ಕಾಪು ಶ್ರೀಹೊಸಮಾರಿಗುಡಿ ದೇವಸ್ಥಾನವು ಸುಮಾರು 35 ಕೋಟಿರೂ.ವೆಚ್ಚದಲ್ಲಿ ಸಮಗ್ರವಾಗಿ ಜೀರ್ಣೋದ್ಧಾರಗೊಳ್ಳಲಿದ್ದು, ಮಾರಿಯಮ್ಮ ದೇವಿಯ ಗುಡಿಯು ಭವ್ಯ ಶಿಲಾಮಯ ದೇವಾಲಯವಾಗಿ ಅಭಿವೃದ್ಧಿ ಗೊಳ್ಳಲಿದೆ. ಇದಕ್ಕೆ ಪೂರ್ವಭಾವಿಯಾಗಿ ಜ.23ರಂದು ನಿಧಿಕುಂಭ ಸ್ಥಾಪನೆಯ ಧಾರ್ಮಿಕ ವಿಧಿಗಳು ನೆರವೇರಲಿವೆ ಎಂದು ಕಾಪು ಶ್ರೀಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ ತಿಳಿಸಿದ್ದಾರೆ.

ದೇವಸ್ಥಾನದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸುಮಾರು 30 ಕೋಟಿ ರೂ. ವೆಚ್ಚದಲ್ಲಿ ನೂತನ ದೇವಾಲಯ ಸಮುಚ್ಚಯ ನಿರ್ಮಾಣಗೊಳ್ಳಲಿದ್ದು, ಪ್ರಥಮ ಹಂತದಲ್ಲಿ ಸಂಪೂರ್ಣ ಶಿಲಾಮಯವಾಗಿ ಮಾರಿಯಮ್ಮ ದೇವಿಯ ನವೀಕೃತ ಗರ್ಭಗುಡಿ, ಉಚ್ಚಂಗಿ ಗುಡಿ, ನಾಲ್ಕು ದಿಕ್ಕಿನ ಸುತ್ತುಪೌಳಿ, ರಾಜಗೋಪುರವನ್ನೊಳಗೊಂಡ ಮುಖ ಮಂಟಪ, ಒಳ ಪ್ರಾಂಗಣ ಗೋಡೆ, ಪ್ರವೇಶ ದ್ವಾರ, ಸುಸಜ್ಜಿತ ಸಭಾಭವನ ನಿರ್ಮಾಣಗೊಳ್ಳಲಿದೆ ಎಂದು ಅವರು ತಿಳಿಸಿದರು.

ನವೀಕೃತ ಗರ್ಭಗುಡಿ ಸಂಪೂರ್ಣವಾಗಿ ಕೆಂಪು ಶಿಲೆಯಿಂದ ನಿರ್ಮಾಣ ಗೊಳ್ಳಲಿದೆ. ಇದಕ್ಕಾಗಿ ವಿಜಯಪುರ ಜಿಲ್ಲೆಯ ಹಿಲ್‌ಕಲ್‌ನಿಂದ ಕೆಂಪುಶಿಲೆಯನ್ನು ತರಿಸಲಾಗುವುದು ಎಂದರು.

ಗರ್ಭಗುಡಿ ನಿಧಿಕುಂಭ ಸ್ಥಾಪನೆಯ ಧಾರ್ಮಿಕ ವಿಧಿವಿಧಾನಗಳು ಜ.23ರ ಬುಧವಾರ ಬೆಳಗ್ಗೆ 8:00ಗಂಟೆಗೆ ಪ್ರಾರಂಭಗೊಳ್ಳಲಿದೆ. ನಿಧಿಕುಂಭ ಸ್ಥಾಪನೆಗೆ ಪೂರ್ವಭಾವಿಯಾಗಿ ಈಗಾಗಲೇ ದೇಶದ ಪ್ರಮುಖ 9 ದೇವಿ ಕ್ಷೇತ್ರಗಳಿಂದ ತರಿಸಲಾದ ತೀರ್ಥ ಮತ್ತು ಪ್ರಸಾದವನ್ನು, ಕರಾವಳಿಯ ದೇವಿ ಕ್ಷೇತ್ರಗಳ ಪ್ರಸಾದವನ್ನು ಸಂಗ್ರಹಿಸಿ, ಅದನ್ನು ಕಾಪು ಜನಾರ್ದನ ದೇವಸ್ಥಾನದಿಂದ ಮೆರವಣಿಗೆಯಲ್ಲಿ ಹೊಸ ಮಾರಿಗುಡಿಗೆ ತರಲಾಗುವುದು ಎಂದು ವಾಸುದೇವ ಶೆಟ್ಟಿ ವಿವರಿಸಿದರು.

ಉಡುಪಿ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಬೆಳಗ್ಗೆ 9:30ಕ್ಕೆ ನಿಧಿಕುಂಭವನ್ನು ಸ್ಥಾಪಿಸಲಿದ್ದಾರೆ. ಸಮಾರಂಭದಲ್ಲಿ ಧಾರ್ಮಿಕ ದತ್ತಿ ಸಚಿವ ಪರಮೇಶ್ವರ ನಾಯ್ಕಿ, ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ ಉಪಸ್ಥಿತರಿರುವರು. ಜಿಲ್ಲೆಯ ಸಂಸದರು, ಶಾಸಕರು ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.

ಮೊದಲ ಹಂತದಲ್ಲಿ ಸುಮಾರು 20 ಕೋಟಿ ರೂ.ವೆಚ್ಚ ಮಾಡಲಾಗುವುದು. ಎರಡನೇ ಹಂತದಲ್ಲಿ ಯಾಗ ಶಾಲೆ, ಭೋಜನ ಶಾಲೆ ಹಾಗೂ 800 ಮಂದಿ ಸಾಮರ್ಥ್ಯದ ಸಭಾಭವನ ನಿರ್ಮಾಣಗೊಳ್ಳಲಿದೆ ಎಂದವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಪು ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ, ಉಪಾಧ್ಯಕ್ಷರಾದ ಕಾಪು ದಿವಾಕರ ಶೆಟ್ಟಿ, ಮಾಧವ ಆರ್.ಪಾಲನ್, ಗಂಗಾಧರ ಸುವರ್ಣ, ಪ್ರಚಾರ ಸಮಿತಿಯ ಅಧ್ಯಕ್ಷ ಕಾಪು ಯೋಗೀಶ್ ಶೆಟ್ಟಿ, ಕೋಶಾಧಿಕಾರಿ ಹಾಗೂ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ಗೌರವಾಧ್ಯಕ್ಷರಾದ ಅನಿಲ್ ಬಲ್ಲಾಳ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News