ಬಂಧಿತ ಬಿಜೆಪಿ ಮುಖಂಡ ತಸ್ಲೀಂ ವಿರುದ್ಧ ಹಲವು ಪ್ರಕರಣ: ಪೊಲೀಸ್

Update: 2019-01-15 14:28 GMT

#ಸಂಘ ಪರಿವಾರ ನಾಯಕರ ವಿರುದ್ಧ ಸಂಚು ಆರೋಪ

ಕಾಸರಗೋಡು, ಜ.15: ದಿಲ್ಲಿ ಪೊಲೀಸರಿಂದ ಇತ್ತೀಚೆಗೆ ಬಂಧಿತನಾದ ಬಿಜೆಪಿ ಮುಖಂಡ, ಕಾಸರಗೋಡು ಚೆಂಬರಿಕದ ತಸ್ಲೀಮ್ ಅಲಿಯಾಸ್ ಮುಹತಿಸಂ(38) ಹಲವು ಪ್ರಕರಣಗಳಿಗೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಆರೋಪಿ. ಈತನ ವಿರುದ್ಧ ಸಂಚು, ವಂಚನೆ ಸೇರಿದಂತೆ ಹಲವು ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಶನಿವಾರ ರಾತ್ರಿ ತಸ್ಲೀಮ್‌ ನನ್ನು ದಿಲ್ಲಿಯಿಂದ ಆಗಮಿಸಿದ್ದ ಪೊಲೀಸರು ಅಲ್ಲಿನ ಪ್ರಕರಣವೊಂದಕ್ಕೆ ಸಂಬಂಧಿಸಿ ಬಂಧಿಸಿ ಕರೆದೊಯ್ದಿದ್ದಾರೆ. ವಿದ್ಯಾನಗರ ಠಾಣಾ ಪೊಲೀಸರ ಸಹಾಯದಿಂದ ಈತನನ್ನು ವಶಕ್ಕೆ ಪಡೆದಿದ್ದ ಪೊಲೀಸರು ರಾತ್ರಿಯೇ ಮ್ಯಾಜಿಸ್ಟ್ರೇಟ್ ಎದುರುಹಾಜರುಪಡಿಸಿ ದಿಲ್ಲಿಗೆ ಕರೆದೊಯ್ದಿದ್ದಾರೆ.

ತಸ್ಲೀಮ್ ಬಿಜೆಪಿಯ ಸಕ್ರಿಯ ಮುಖಂಡನಾಗಿದ್ದಾನೆ. ಅದರ ಪೋಷಕ ಸಂಘಟನೆಯಾದ ಅಲ್ಪಸಂಖ್ಯಾತ ಮೋರ್ಚಾದ ಕಾಸರಗೋಡು ಜಿಲ್ಲಾ ಸಮಿತಿಯ ಸದಸ್ಯ ಹಾಗೂ ಉದುಮ ಮಂಡಲ ಸಂಚಾಲಕನಾಗಿದ್ದಾನೆ.

ತಸ್ಲೀಂ ವಿರುದ್ಧ ಕಾಸರಗೋಡು ಜಿಲ್ಲೆಯ ಠಾಣೆಗಳಲ್ಲೇ ಹಲವು ಪ್ರಕರಣಗಳು ದಾಖಲಾಗಿವೆ. ಬೇಕಲ ಠಾಣಾ ವ್ಯಾಪ್ತಿಯಲ್ಲಿ ನಕಲಿ ಪಾಸ್ ಪೋರ್ಟ್ ಬಗ್ಗೆ ಎರಡು ಪ್ರಕರಣ, ಮನೆಗೆ ಮೇಲೆ ದಾಳಿ ನಡೆಸಿದ ಎರಡು ಪ್ರಕರಣಗಳಿವೆ. ಇದಲ್ಲದೆ ಪೊಲೀಸ್ ಅಧಿಕಾರಿಗಳ ಹೆಸರು ಹೇಳಿ ಉದ್ಯಮಿಗಳನ್ನು ಬೆದರಿಸಿ ಹಣ ಲೂಟಿ ಮಾಡಿದ ಬಗ್ಗೆಯೂ ಈತನ ವಿರುದ್ಧ ಆರೋಪಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಉಗ್ರರೊಂದಿಗಿನ ನಂಟು ಹೊಂದಿರುವ ಸಂಶಯದ ಹಿನ್ನಲೆಯಲ್ಲಿ ಈತನನ್ನು ಗುಪ್ತಚರ ಇಲಾಖಾಧಿಕಾರಿಗಳು ಇತ್ತೀಚೆಗೆ ವಶಕ್ಕೆ ಪಡೆದಿದ್ದಾರೆ.

ತಸ್ಲೀಂನನ್ನು ಇತ್ತೀಚೆಗೆ ದಿಲ್ಲಿ ಪೊಲೀಸರು ಬಂಧಿಸಲು ಕಾರಣವಾಗಿರುವ ಪ್ರಕರಣ ಏನೆಂಬುದನ್ನು ದಿಲ್ಲಿ ಪೊಲೀಸರು ಕಾಸರಗೋಡು ಪೊಲೀಸರಿಗೆ ಸ್ಪಷ್ಟ ಮಾಹಿತಿ ನೀಡಿಲ್ಲ ಎಂದು ತಿಳಿದುಬಂದಿದೆ.

ಉಗ್ರರೊಂದಿಗೆ ನಂಟು, ಸಂಘ ಪರಿವಾರ ನಾಯಕರ ವಿರುದ್ಧ ಸಂಚು, ಮೊದಲಾದ ಪ್ರಕರಣಕ್ಕೆ ವಶಕ್ಕೆ ತೆಗೆದುಕೊಂಡಿರುವುದಾಗಿ ದಿಲ್ಲಿ ಪೊಲೀಸರು ಹೇಳಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ ಎಂದು ಕಾಸರಗೋಡು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News