ದ.ಕ.: 21,292 ಯುವ ಮತದಾರರ ಸೇರ್ಪಡೆ: ಸಸಿಕಾಂತ್ ಸೆಂಥಿಲ್

Update: 2019-01-16 09:46 GMT

ಮಂಗಳೂರು, ಜ.16: ಭಾರತ ಚುನಾವಣಾ ಆಯೋಗದ ಸೂಚನೆಯಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ನವೆಂಬರ್ ತಿಂಗಳಲ್ಲಿ ಜಿಲ್ಲೆಯ ಎಲ್ಲಾ ಮತಗಟ್ಟೆ ಹಾಗೂ ಕಾಲೇಜುಗಳಲ್ಲಿ ಹಮ್ಮಿಕೊಂಡ ಮಿಂಚಿನ ನೋಂದಣಿ ಹಾಗೂ ವಿಶೇಷ ನೋಂದಣಿ ಸೇರಿದಂತೆ ಪರಿಷ್ಕೃತ ಮತದಾರರ ಪಟ್ಟಿಗೆ 21,292 ಯುವ ಮತದಾರರು ಸೇರ್ಪಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ. 

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮತದಾರರ ಪಟ್ಟಿಗೆ ಸೇರ್ಪಡೆಯಾದ ಎಲ್ಲಾ ಯುವ ಮತದಾರರಿಗೆ ಜ.25ರಂದು ನಗರದ ಪುರಭವನದಲ್ಲಿ ನಡೆಯಲಿರುವ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಮತದಾರರ ಚೀಟಿಯನ್ನು ನೀಡಲಾಗುವುದು ಎಂದರು.

ಇಂದು ಪ್ರಕಟಿಸಲಾದ ಅಂತಿಮ ಮತದಾರರ ಪಟ್ಟಿಯಂತೆ ದ.ಕ. ಜಿಲ್ಲೆಯಲ್ಲಿ ಒಟ್ಟು 16,97417 ಮತದಾರರಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 16,98,868 ಮತದಾರರಿದ್ದು, ಪ್ರಸಕ್ತ ಮತದಾರರ ಪಟ್ಟಿಯಲ್ಲಿ 1,451 ಮತದಾರರು ಕಡಿಮೆಯಾಗಿದ್ದಾರೆ ಎಂದು ಅವರು ಹೇಳಿದರು.

ಮತದಾರರ ಸೇರ್ಪಡೆ ಹಾಗೂ ಪಟ್ಟಿಯಿಂದ ಹೆಸರನ್ನು ಕೈಬಿಡುವ ಪ್ರಕ್ರಿಯೆ ಮುಂದಿನ ಚುನಾವಣೆ ಘೋಷಣೆವರೆಗೆ ಮುಂದುವರಿಯಲಿದ್ದು, ಅರ್ಜಿ ಸಲ್ಲಿಸಲು ಅಥವಾ ಆಕ್ಷೇಪ ಸಲ್ಲಿಸಲು ಅವಕಾಶವಿರುತ್ತದೆ ಎಂದು ಜಿಲ್ಲಾಧಿಕಾರಿ ಈ ಸಂದರ್ಭ ತಿಳಿಸಿದರು.

ಪ್ರಸಕ್ತ ಒಟ್ಟು ಮತದಾರರ ಪಟ್ಟಿಯಂತೆ ಜಿಲ್ಲೆಯಲ್ಲಿ 8,33,719 ಪುರುಷರು ಹಾಗೂ 8,63,698 ಮಹಿಳಾ ಮತದಾರರಿದ್ದಾರೆ. ಜಿಲ್ಲೆಯ ಒಟ್ಟು ಜನಸಂಖ್ಯೆಗೆ ಅನುಸಾರವಾಗಿ ಶೇ.75ರಷ್ಟು ಮತದಾರರಾಗಿದ್ದು, ಇದು ರಾಜ್ಯದ ಸರಾಸರಿಗೆ ಸಮವಾಗಿದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದರು.

ಜಿಲ್ಲೆಯ ವಿಧಾನಸಭಾ ಕ್ಷೇತ್ರವಾರು ಈ ಹಿಂದೆ 1,790 ಮತಗಟ್ಟಿಗಳಿದ್ದು, ಹಾಲಿ 71 ಹೊಸ ಮತಗಟ್ಟೆಗಳ ಸೇರ್ಪಡೆಯೊಂದಿಗೆ ಒಟ್ಟು ಮತಗಟ್ಟೆಗಳ ಸಂಖ್ಯೆ 1,861 ಆಗಿರುತ್ತದೆ. ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿದ್ದ ಹೆಚ್ಚುವರಿ ಮತಗಟ್ಟೆಗಳನ್ನು ನೂತನ ಮತಗಟ್ಟೆಗಳಾಗಿ ಸೇರ್ಪಡೆಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ನವೆಂಬರ್ 17 ಮತ್ತು 18ರಂದು ನಡೆದ ಮಿಂಚಿನ ನೋಂದಣಿಯಲ್ಲಿ ಹೆಸರು ಸೇರ್ಪಡೆ (ಫಾರಂ -6), ತೆಗೆದುಹಾಕುವುದು (ಫಾರಂ- 7, ತಿದ್ದುಪಡಿ (ಫಾರಂ- 8)ಹಾಗೂ ಕ್ಷೇತ್ರ ಬದಲಾವಣೆ(ಫಾರಂ -8ಎ)ಗೆ ಕೋರಿ ಒಟ್ಟು 6118 ಅರ್ಜಿಗಳು ಹಾಗೂ ಹಾಗೂ 23ರಿಂದ 25ರವರೆಗೆ ನಡೆದ ವಿಶೇಷ ನೋಂದಣಿಯಲ್ಲಿ 4,544 ಅರ್ಜಿಗಳು ಸ್ವೀಕೃತವಾಗಿದ್ದವು. ಇದು ಸೇರಿದಂತೆ ವಿಶೇಷ ಪರಿಷ್ಕರಣೆಗೆ ಸಂಬಂಧಿಸಿ ಒಟ್ಟು 34,857 ಅರ್ಜಿಗಳು ವಿವಿಧ ನಮೂನೆಗಳಲ್ಲಿ ಸ್ವೀಕೃತವಾಗಿವೆ. ಇದರಲ್ಲಿ ಹೆಸರು ಸೇರ್ಪಡೆಗೆ 14,211 ಅರ್ಜಿಗಳು ಸ್ವೀಕರಿಸಲಾಗಿದ್ದರೆ, ಹೆಸರು ಡಿಲೀಟ್ ಮಾಡಲು 15,069 ಅರ್ಜಿಗಳು ಸ್ವೀಕೃತವಾಗಿವೆ. ಅದರಲ್ಲಿ 18 ಅರ್ಜಿಗಳನ್ನು ಹೊರತುಪಡಿಸಿ ಉಳಿದೆಲ್ಲಾ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News