ಜ.18: ಮಂಗಳೂರಿನಲ್ಲಿ ‘ಸುಹಾನಿ ಶಾಮ್’ ಸಂಗೀತ ಕಾರ್ಯಕ್ರಮ

Update: 2019-01-16 12:35 GMT

ಮಂಗಳೂರು, ಜ.16: ಖ್ಯಾತ ಸಂಗೀತಕಾರ ಮುಹಮ್ಮದ್ ರಫಿ ಖ್ಯಾತಿಯ ಮಂಗಳೂರಿನ ಮುಹಮ್ಮದ್ ಹನೀಫ್ (ಉಪ್ಪಳ) ಜ.18ರಂದು ಸಂಜೆ 5:30ಕ್ಕೆ ನಗರದ ಪುರಭವನದಲ್ಲಿ ‘ರಫಿ-ಹನೀಫ್’ ಬ್ಯಾನರ್‌ನಡಿ ‘ಸುಹಾನಿ ಶಾಮ್’ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.

ಕಳೆದ 35 ವರ್ಷದಿಂದ ಹಾಡು-ಸಂಗೀತದಲ್ಲಿ ತೊಡಗಿಸಿಕೊಂಡಿರುವ ಮುಹಮ್ಮದ್ ಹನೀಫ್ ಈ ಸಂಗೀತ ರಸಮಂಜರಿ ಕಾರ್ಯಕ್ರಮದಿಂದ ಸಂಗ್ರಹವಾದ ಹಣವನ್ನು ಕಿಡ್ನಿ, ಕ್ಯಾನ್ಸರ್ ಮತ್ತಿತರ ರೋಗದಿಂದ ಬಳಲುವರಿಗೆ ನೆರವು ನೀಡಲು ನಿರ್ಧರಿಸಿದ್ದಾರೆ. ಈಗಾಗಲೆ ಈ ವಿನೂತನ ಯೋಜನೆಗೆ ಉದ್ಯಮಿಗಳ ಸಹಿತ ದಾನಿಗಳು ಸಹಾಯ ಮಾಡುವ ಭರವಸೆಯನ್ನೂ ನೀಡಿದ್ದಾರೆ. ಈ ಕಾರ್ಯಕ್ರಮ ವೀಕ್ಷಣೆ ಮತ್ತು ಸಂಗೀತ ಆಸ್ವಾದಿಸಲು ನಿರ್ದಿಷ್ಟ ಪ್ರವೇಶಧನವಿಲ್ಲ. ಆದರೆ ಅಶಕ್ತ ರೋಗಿಗಳಿಗೆ ನೆರವು ನೀಡಲು ಬಯಸುವ ಪ್ರೇಕ್ಷಕರು ಸಹಾಯಧನ ನೀಡಲು ಬಯಸಿದರೆ ಅದನ್ನು ಸ್ವೀಕರಿಸಲು ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಮುಹಮ್ಮದ್ ಹನೀಫ್ ತಿಳಿಸಿದ್ದಾರೆ.

ಮುಹಮ್ಮದ್ ಹನೀಫ್ ಬಾಲ್ಯದಿಂದಲೇ ಮುಹಮ್ಮದ್ ರಫಿಯ ಹಾಡು ಕೇಳಿ ಬೆಳೆದವರು. ಶಾಲೆ-ಹೈಸ್ಕೂಲ್‌ನಲ್ಲಿರುವಾಗಲೆ ರಫಿಯ ಶೈಲಿಯಲ್ಲಿ ಹಾಡುಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದವರು. ಬಿಲ್ಡರ್ ಆದ ಬಳಿಕವೂ ಹಾಡುವ ಹವ್ಯಾಸ ಮುಂದುವರಿಸಿದರು. ವರ್ಷಂಪ್ರತಿ ಕನಿಷ್ಠ 25ಕ್ಕೂ ಅಧಿಕ ಸ್ಟೇಜ್‌ಶೋಗಳನ್ನು ನೀಡಿ ಗಮನ ಸೆಳೆದವರು. ‘ಇದು ಎಂತಹ ಪ್ರೇಮವಯ್ಯಾ?’ ಮತ್ತು ‘ಚೆಲ್ಲಾಟ’ ಕನ್ನಡ ಚಿತ್ರ್ಕೆ ಹಾಡಿದ್ದಾರೆ. ಖ್ಯಾತ ನಟ ಡಾ.ರಾಜ್‌ಕುಮಾರ್ ಅವರೊಂದಿಗೂ ಜೊತೆಗೂಡಿ ಹಾಡಿದ್ದಾರೆ. ‘ದಬಕ್ ದಬ ಐಸಾ’ ತುಳುಚಿತ್ರದಲ್ಲೂ ಹಾಡಿದ್ದಾರೆ. ಕೊಂಕಣಿ ಕ್ಯಾಸೆಟ್‌ಗೂ ಹಾಡಿದ್ದಾರೆ. ಅದರೊಂದಿಗೆ ಹಿಂದಿ, ಉರ್ದು ಎಂದೆಲ್ಲಾ ಕರ್ನಾಟಕ, ಕೇರಳ, ಮುಂಬೈಯಲ್ಲದೆ ಗಲ್ಫ್ ರಾಷ್ಟ್ರಗಳಲ್ಲೂ ಸಾವಿರಾರು ಹಾಡುಗಳನ್ನು ಹಾಡಿ ಪ್ರೇಕ್ಷಕರ ಮನಸೂರೆಗೊಳಿಸಿದ್ದಾರೆ.

‘ನನ್ನ ಈ ಹವ್ಯಾಸಕ್ಕೆ ಮುಹಮ್ಮದ್ ರಫಿಯೇ ಸ್ಫೂರ್ತಿ. ಹಾಡಿನೊಂದಿಗೆ ಅಶಕ್ತರಿಗೆ ಏನಾದರೊಂದು ನೆರವು ನೀಡಬೇಕು ಎಂದು ಅದೆಷ್ಟೋ ವರ್ಷದಿಂದ ಆಶಿಸುತ್ತಿದ್ದೆ. ಕೆಲವು ಕಾರಣದಿಂದ ಸಾಧ್ಯವಾಗಲಿಲ್ಲ. ಇದೀಗ ಸಹೃದಯಿಗಳ ಸಹಕಾರದಿಂದ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದ್ದೇನೆ. ಅಲ್ಲಿ ಸಂಗ್ರಹವಾದ ಹಣವನ್ನು ಸಂಪೂರ್ಣವಾಗಿ ಅಶಕ್ತ ರೋಗಿಗಳಿಗೆ ನೀಡಲು ನಿರ್ಧರಿಸಿದ್ದೇನೆ. ಜೊತೆಗೆ ಚಾರಿಟೆಬಲ್ ಟ್ರಸ್ಟ್ ರಚಿಸಲು ಮುಂದಾಗಿದ್ದೇನೆ. ಎಲ್ಲಕ್ಕಿಂತ ಮುಖ್ಯವಾಗಿ ಡಯಾಲಿಸಿಸ್ ಯಂತ್ರವನ್ನು ಆಸ್ಪತ್ರೆಯೊಂದಿಗೆ ಉಚಿತವಾಗಿ ನೀಡುವ ಇಚ್ಛೆಯೂ ಇದೆ’ ಎಂದು ಮುಹಮ್ಮದ್ ಹನೀಫ್ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.

ಜ.18ರ ಕಾರ್ಯಕ್ರಮದಲ್ಲಿ ನಾಡಿನ ಖ್ಯಾತ ಸಂಗೀತಕಾರರಾದ ಗುರುಕಿರಣ್, ಪಪ್ಪನ್ ಕ್ಯಾಲಿಕಟ್, ರಂಜನ್‌ದಾಸ್, ಜಗದೀಶ್ ಶೆಟ್ಟಿ, ಶ್ರೀಕಾಂತ್ ಕಾಮತ್, ಇಕ್ಬಾಲ್ ಕಾಟಿಪಳ್ಳ, ಎಸ್.ಎಂ. ಖಾಲಿದ್, ಖಾಲಿದ್ ಅಕ್ತರ್, ದಿ್ಯಾ ರಮೇಶ್ಚಂದ್ರ, ಶರ್ಮಿಲಾ, ಸಹನಾ, ಸಂಗೀತಾ, ಸುರೇಖಾ, ಮಲ್ಲಿಕಾ ಶೆಟ್ಟಿ ಮತ್ತಿತರರು ಕೂಡ ಸಂಗೀತ ನೀಡಲಿದ್ದಾರೆ.

ಸಭಾ ಕಾರ್ಯಕ್ರಮದಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಬಿ.ಎಂ.ಫಾರೂಕ್, ಶಾಸಕರಾದ ವೇದವ್ಯಾಸ ಕಾಮತ್, ರಾಜೇಶ್ ನಾಯಕ್, ಮಂಗಳೂರು ಉಪಮೇಯರ್ ಮುಹಮ್ಮದ್ ಕೆ., ಕಾರ್ಪೊರೇಟರ್ ಅಬ್ದುಲ್ಲತೀಫ್ ಕಂದಕ್, ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್, ಮನಪಾ ಆಯುಕ್ತ ಮುಹಮ್ಮದ್ ನಝೀರ್, ಉದ್ಯಮಿಗಳಾದ ಝಕರಿಯಾ ಜೋಕಟ್ಟೆ, ಶರೀಫ್ ಜೋಕಟ್ಟೆ, ಅಬ್ದುರ್ರವೂಫ್ ಪುತ್ತಿಗೆ, ಮುಕುಂದ್ ಕಾಮತ್ ಎಸ್., ಗಣೇಶ್ ಶೆಟ್ಟಿ, ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಅಧ್ಯಕ್ಷ ಜಗದೀಶ್ ಶೆಟ್ಟಿ ಮತ್ತಿತರರು ಭಾಗವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News