ಸಾಹಿತ್ಯ ಸಮ್ಮೇಳನಗಳು ಸಂಬಂಧಗಳ ಬೆಸುಗೆಯನ್ನು ಬಲಪಡಿಸಬೇಕು: ರಾಮಕೃಷ್ಣ ಶಾಸ್ತ್ರಿ

Update: 2019-01-16 12:41 GMT

ಬೆಳ್ತಂಗಡಿ, ಜ. 16: ಸಾಹಿತ್ಯ ಸಮ್ಮೇಳನಗಳು ಸಂಬಂಧಗಳ ಬೆಸುಗೆಯನ್ನು ಬಲಪಡಿಸಬೇಕು. ವೈಷಮ್ಯದ ಬೆಂಕಿಯನ್ನು ಶೀತಲಗೊಳಿಸುವ ಅಮೃತಕಲಶವಾಗಬೇಕು. ಜಾತಿ, ಮತಗಳ ನಡುವಣ ಬಿಗಿಬಂಧವನ್ನು ಸಡಿಲಿಸಿ ಸೌಹಾರ್ದ ಬದುಕಿನ ಸೇತುವೆಯಾಗಬೇಕು. ಎಳೆತನದಲ್ಲೇ ನಮ್ಮ ನಡುವಿನ ತಾರತಮ್ಯವನ್ನು ದೂರಗೊಳಿಸಿ ಸಮಾನತೆಯ ಪಕ್ವಫಲದ ಬೀಜವನ್ನು ಮನಸ್ಸಿನಲ್ಲಿ ಗಾಢವಾಗಿ ಒತ್ತಲು ಕಾರಣವಾಗಿದ್ದ ಸರಕಾರಿ ಶಾಲೆಗಳು ಅವನತಿಯ ಅಂಚು ಸೇರುತ್ತಿದೆ, ಕನ್ನಡವನ್ನು ಕಾಪಾಡಬೇಕಾದ ಸರಕಾರಿ ಶಾಲೆಗಳಲ್ಲಿ ಹಾಜರಾತಿ ವಿರಳವಾಗುವುದಕ್ಕೆ ಸೂಕ್ತ ಪರಿಹಾರ ಇನ್ನೂ ಸಾಧ್ಯವಾಗಿಲ್ಲ. ಇಂತಹ ಸಂದರ್ಭದಲ್ಲಿ ಸಾಹಿತ್ಯ ಸಮ್ಮೇಳನ ಕನ್ನಡ ಪ್ರೀತಿಯನ್ನು ಬೆಳೆಸುವ ಸಮ್ಮೇಳನವಾಗಬೇಕಿದ್ದರೆ ಕನ್ನಡ ಕಲಿಕೆಗೆ ಕನ್ನಡ ಶಾಲೆಗಳ ಉಳಿವಿಗೆ ಎಲ್ಲರೂ ಮುಂದಾಗಬೇಕು ಎಂದು ಹಿರಿಯ ಸಾಹಿತಿ ಪ.ರಾಮಕೃಷ್ಣ ಶಾಸ್ತ್ರಿ ಹೇಳಿದರು.

ಅಳದಂಗಡಿಯಲ್ಲಿ ಬುಧವಾರ ನಡೆದ ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಖಾಸಗಿ ಶಾಲೆಗಳಲ್ಲಿ ಸಿಗುವ ಸವಲತ್ತುಗಳನ್ನು ಸರಕಾರಿ ಶಾಲೆಗಳಲ್ಲಿಯೂ ನೀಡುವ ಮೂಲಕ ಹೆಚ್ಚು ಮಕ್ಕಳು ಅಲ್ಲಿಗೇ ಬರುವಂತೆ ಮಾಡುವ ಇಚ್ಛಾಶಕ್ತಿ ಸರಕಾರಕ್ಕೆ ಬೇಕು. ಕನ್ನಡ ಸಂರಕ್ಷಣೆಯ ಚಳವಳಿಗಳು ನಾಟಕೀಯವಾಗಬಾರದು. ಕನಿಷ್ಠ ಕನ್ನಡಕ್ಕಾಗಿ ವೇದಿಕೆಗಳಲ್ಲಿ ದನಿಯೆತ್ತುವವರಾದರೂ ತಮ್ಮ ಮಕ್ಕಳಿಗೆ ಆರಂಭದ ಶಿಕ್ಷಣ ಮಾತೃಭಾಷೆಯಲ್ಲೇ ಸಿಗುವಂತೆ ಮಾಡುವ ಮೂಲಕ ಅನುಕರಣೀಯರೂ ಅನುಸರಣೀಯರೂ ಆಗಬೇಕು ಎಂದು ಅವರು ಒತ್ತಾಯಿಸಿದರು.

ಮಕ್ಕಳಿಗೆ ಆಂಗ್ಲ ಭಾಷೆಯ ಶಿಕ್ಷಣ ಕೊಡುವುದೆಂದರೆ ಅದರಿಂದ ಕನ್ನಡದ ಕೊಲೆಯಾಗಬಾರದು. ಮಾತೃಭಾಷೆಯ ಸ್ಪಷ್ಟ ಕಲಿಕೆಗೆ ಅವಕಾಶ ಸಿಗಬೇಕೆಂಬುದು ಚಳವಳಿಯಾಗಿ ಸರಕಾರದ ಬಾಗಿಲು ತಟ್ಟಬೇಕು, ಭಾಷೆಯರಕ್ಷಣೆ ನಮ್ಮ ಮನೆಯಿಂದಲೇ ಆರಂಭವಾಗಬೇಕಾಗಿದೆಎಂದು ಆಗ್ರಹಿಸಿದರು.  

ಇಂದು ಸಾಹಿತ್ಯ ಜನ ಸಾಮಾನ್ಯರಕಣ್ಣಿಗೆ ಬೀಳುತ್ತಿಲ್ಲ ಎಂದರೆ ಸಾಹಿತ್ಯದ ಒಲವು ಜನರತನಕತಲುಪಿದ ಲಕ್ಷಣವೂಕಾಣಿಸುತ್ತಿಲ್ಲ. ಹಿಂದಿನ ಕುಮಾರವ್ಯಾಸ, ಪುರಂದರದಾಸರ ರಚನೆಗಳು ಈಗಲೂ ಎಲ್ಲರ ಬಾಯಲ್ಲಿ ನಲಿದಾಡುತ್ತಿರುವಷ್ಟು ಸಲೀಸಾಗಿ ಆಧುನಿಕ ಸಾಹಿತ್ಯ ಎಲ್ಲ ವರ್ಗದವರನ್ನೂ ಯಾಕೆ ತಲುಪಿಲ್ಲ ಎಂದು ಚಿಂತನೆ ನಡೆಸಬೇಕಾಗಿದೆ. ಸಮ್ಮೇಳನಗಳು ಅಂತಹ ಕೃತಿಗಳನ್ನು, ಬರಹಗಾರರನ್ನು ಎಲ್ಲ ಜನರ ಮುಂದಿಡಲು ಸಮರ್ಥವಾಗಿರಬೇಕು. ಮನದಲ್ಲಿ ಅಚ್ಚೊತ್ತುವ ದಶಕಗಳ ಹಿಂದಿನ ಸಾಹಿತ್ಯಕ್ಕೆ ಹೋಲಿಸಿದರೆ ಗಾಢವಾಗಿ ಪ್ರಭಾವ ಬೀರಬಲ್ಲ ಸಾಹಿತ್ಯರಚನೆಯ ಜವಾಬ್ದಾರಿಯನ್ನು ಇಂದಿನ ಬರಹಗಾರರ ಬಳಗ ನಿರ್ವಹಿಸುತ್ತಿಲ್ಲವೆ ಎಂಬ ಪ್ರಶ್ನೆ ಮೂಡುತ್ತದೆ. ಸಮಗ್ರ ಸಮಾಜವನ್ನು ಗಮನವಿರಿಸಿಕೊಂಡು ಅಲ್ಲಿರುವ ಸಮಸ್ಯೆಗೆ ಸುಲಭದ ಪರಿಹಾರವನ್ನು ಹೇಳಬೇಕಾದ ಕೃತಿಕರ್ತ ಒಂದು ವರ್ಗವನ್ನು ತುಷ್ಟೀಕರಿಸುತ್ತ ಇನ್ನೊಂದು ವರ್ಗವನ್ನು ತುಚ್ಛೀಕರಿಸುವ ಬರಹಗಳನ್ನು ಕೊಡುಗೆಯಾಗಿ ನೀಡಲು ಮುಂದಾದರೆ ಸಾಹಿತ್ಯವನ್ನು ಓದುವ ವರ್ಗಕ್ಕಿಂತಲೂ ದೂರವಿಡುವ ವರ್ಗದ ಬೆಳವಣಿಗೆ ಹೆಚ್ಚಾಗುವ ಅಪಾಯವನ್ನು ನಿರಾಕರಿಸುವಂತಿಲ್ಲ. ಸಾಹಿತ್ಯವನ್ನು ಕೇವಲ ಸಾಹಿತ್ಯವಾಗಿಯಾರೂ ಸ್ವೀಕರಿಸುವುದಿಲ್ಲ. ಅದರಿಂದ ಮಾನಸಿಕ ಪರಿಣಾಮಗಳಾಗುವುದು ಅನಿರೀಕ್ಷಿತವೂಅಲ್ಲ. ಸಮಾಜದ ಹಿತಕ್ಕೆ ಪರಿವರ್ತನೆಗೆ ಪೂರಕವಾಗುವ ಬರಹಗಳನ್ನು ಹೆಚ್ಚು ಬರೆಯುವ ಮೂಲಕ ಜನಮನಕ್ಕೆ ಸನ್ನಿಹಿತವಾಗುವ ಸೂತ್ರವನ್ನು ಬರಹಗಾರ ಕಂಡುಕೊಳ್ಳುವುದು ಇಂದಿನ ತೀರ ಅಗತ್ಯಗಳಲ್ಲಿ ಒಂದೆನಿಸುತ್ತದೆ ಎಂದರು 

ಸಾಹಿತ್ಯ ಎಂಬ ಪದಕ್ಕೆ ಸಂಸ್ಕೃತದಲ್ಲಿ ಮಿಲನ ಹೊಂದುವುದು, ಜೊತೆಗೂಡುವುದು ಎಂಬ ಅರ್ಥಗಳೂ ಇವೆ. ಹಿತಕರವಾದಕೂಡುವಿಕೆಯ ಸೇತುವಾಗಿ ಸಾಹಿತ್ಯವುಓದುಗ ಮತ್ತು ಬರಹಗಾರನ ನಡುವಣ ಸಂಬಂಧವಾಗಬೇಕು. ಆದರೆ ಈ ಕಾಲದಲ್ಲಿ ಸಾಹಿತಿಯ ಬರಹಗಳು ಜಾತಿಯ ಪಟ್ಟಿಗೆ ಸೇರುತ್ತಿವೆ. ಒಂದು ಪತ್ರಿಕೆಯಲ್ಲಿ ಬರುವ ಸಾಹಿತ್ಯವನ್ನು ಓದಿ ಆಸ್ವಾದಿಸುವ ಬದಲು ಬರಹಗಾರನ ಜಾತಿಯಿಂದ ವಿಂಗಡನೆಯಾಗುವ ಸಾಹಿತ್ಯವೇ ಸಮಾಜದಲ್ಲಿ ಬಿರುಕು ಮೂಡಿಸುವ ಕಾರ್ಯ ಮಾಡುತ್ತದೆ.  ಇಂತಹ ಸಮ್ಮೇಳನಗಳು ಜಾತಿಯೊಡೆಯುವ ಮನಗಳನ್ನು ಪರಿವರ್ತಿಸುವ ಜೊತೆಗೆ ಜಾತಿಭೇದವಿಲ್ಲದೆ ಎಲ್ಲರಿಗೂ ಸಮೀಪವಾಗಿ ಸಂಬಂಧಗಳನ್ನು ಬೆಸೆಯುವಂತಾಗಬೇಕು ಎಂಬ ಇಚ್ಛೆಯನ್ನು ಅವರು ವ್ಯಕ್ತಪಡಿಸಿದರು.

ಈಗ ಪತ್ರಿಕೆಗಳ ಸಂಖ್ಯೆ ಹೆಚ್ಚಾಗಿಯೇ ಇದೆ. ಬರಹಗಾರರ ಸಂಖ್ಯೆಯೂ ನೂರ್ಮಡಿಸಿದೆ. ಆದರೆ ವರದಿಗಾರರು ಮತ್ತು ಬರಹಗಾರರ ಬರಹಗಳಲ್ಲಿ ಪ್ರಬುದ್ಧತೆಯನ್ನಾಗಲಿ, ಭಾಷೆಯ ಹಾಗೂ ವ್ಯಾಕರಣದ ಬಗೆಗೆ ಕಾಳಜಿಯನ್ನಾಗಲಿ ಕಾಣುವುದು ಕಷ್ಟವಾಗುತ್ತಿದೆ. ನಮ್ಮಲ್ಲಿ ಪ್ರಸಾರ ಮಾಧ್ಯಮಗಳು ಪ್ರಕಟಣಾ ಮಾಧ್ಯಮಗಳನ್ನು ಮೂಲೆಗೆ ಸೇರಿಸುತ್ತಿರುವುದು ಒಂದೆಡೆಯಾದರೆ ನೆರೆಯ ಕೇರಳದಲ್ಲಿ ಮನೆಯಲ್ಲಿರುವ ಪ್ರತಿಯೊಬ್ಬ ಅಕ್ಷರಸ್ಥನೂ ಒಂದು ಪತ್ರಿಕೆ ಕೊಳ್ಳುತ್ತಾನೆ. ನಮ್ಮಲ್ಲಿ ಒಂದು ಪತ್ರಿಕೆಯನ್ನು ಹತ್ತು ಮಂದಿ ಓದುತ್ತೇವೆ. ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಮಹತ್ತ್ವದ ಪಾತ್ರವನ್ನು ಅಲ್ಲಗಳೆಯಲಾಗದು. ಪತ್ರಿಕೆಗಳ ಉಳಿವಿನ ತೀರ್ಮಾನ ಇಂದು ನಮ್ಮ ಕೈಯಲ್ಲಿ ಮಿಡಿಯುತ್ತಿದೆ. ಕೊಂಡು ಓದುವ ಓದುಗರೇ ಅದರ ಜೀವದಾನಿಗಳಾಗುತ್ತಾರೆ ಎಂದರು. 

ಸಾಹಿತ್ಯದಲ್ಲಿ ಹಾಗೂ ಆಡುಮಾತಿನಲ್ಲಿ ಭಾಷೆ ಎಷ್ಟು ಸಾಧ್ಯವೋ ಅಷ್ಟು ಹಾಳಾಗುತ್ತಿದೆ. ನಿಜದ ಸೊಬಗು ನಿಸ್ತೇಜವಾಗುತ್ತಿದೆ. ಶುದ್ಧವಾದ ಕನ್ನಡ ಬಳಕೆಯಿಂದ ದೂರವಾಗುತ್ತಿದೆ. ಅನಿವಾರ್ಯವಾಗಿ ಕೆಲವು ಆಂಗ್ಲ ಪದಗಳು ಇದು ಕನ್ನಡದ ಪದಗಳೇ ಎಂದು ಭಾಸವಾಗುವ ರೀತಿಯಲ್ಲಿ ಬಳಕೆಯಾಗುತ್ತಿರುವುದನ್ನು ಬದಲಿಸಲಾಗದಷ್ಟುದೂರ ಬಂದಿದ್ದೇವೆ ನಿಜ. ಕನ್ನಡದ ನೀರುಕುಡಿದು ಬೆಳೆದ ವಾಹಿನಿಗಳ ಮತ್ತು ಚಲನಚಿತ್ರಗಳ ಕಲಾವಿದರು ಉದ್ದೇಶಪೂರ್ವಕವಾಗಿ ಮಾತನಾಡುವ ಸಂಮಿಶ್ರ ಭಾಷೆಯನ್ನು ನೋಡಿದರೆ ಇಂತಹ ಸಮ್ಮೇಳನಗಳು ಅವರನ್ನು ಸರಿಗನ್ನಡದದಾರಿಯಲ್ಲಿ ಮುನ್ನಡೆಸಲು ಶ್ರಮಿಸಬೇಕಾದ ಅಗತ್ಯಕಾಣುತ್ತದೆ. ಪರಿಪಕ್ವವಾದ ಶುದ್ಧ ಭಾಷೆಯ ಬಳಕೆ ಶಾಲೆಗಳಲ್ಲಿ ಆರಂಭವಾಗಿ ಸಾಹಿತ್ಯದ ಮೂಲಕ ನಡೆಯಬೇಕು. ಒಂದು ಸಮಾಧಾನವೆಂದರೆ ಪತ್ರಿಕೆಗಳು. ಶುದ್ಧ ಭಾಷೆಯ ಉಳಿವು ಇಂದು ಪತ್ರಿಕೆಗಳ ಮೂಲಕ ಸಾಧ್ಯವಿರುವಷ್ಟಾದರೂ ನಡೆಯುತ್ತಿದೆ ಎಂದರು.

ಓದುವ ಸಂಸ್ಕೃತಿ ಮಕ್ಕಳಿಂದಲೇ ಆರಂಭವಾಗಬೇಕು. ಸಾಹಿತ್ಯದ ಆಸಕ್ತಿಗೆ ಮೂಲವಾಗುವ ಕಥೆ ಹೇಳುವ ಪ್ರವೃತ್ತಿ ಹೆತ್ತವರಿಂದ ಮಾಯವಾಗಿದೆ. ತಾಯಿ-ತಂದೆಇಬ್ಬರೂ ಬದುಕಿನಎರಡು ಗಾಲಿಗಳಾಗಿ ಕಚೇರಿಗೆದುಡಿಯಲು ಹೋಗುವ ಆಧುನಿಕಕುಟುಂಬ ವ್ಯವಸ್ಥೆಯಲ್ಲಿ ಮಕ್ಕಳಿಗೆ ಕಥೆ ಹೇಳುವ ವ್ಯವಧಾನ ವಾದರೂ ಹೇಗೆ ಇರಲು ಸಾಧ್ಯ? ಮನೆಮನೆಯಲ್ಲಿಯೂ ಭವಿಷ್ಯದ ಪೀಳಿಗೆಯ ಕೈಗಿಡಲುಒಂದುಗ್ರಂಥಾಲಯಇರುವಂತಾಗುವುದುಕೂಡ ಸಾಹಿತ್ಯದ ಬದುಕಿಗೆ ಪ್ರೇರಕವಾಗಬಹುದು.

ಸಾಹಿತ್ಯ ಸಮ್ಮೇಳನಗಳು ಕೇವಲ ಜನ ಜಾತ್ರೆಗಳಾಗುತ್ತಿವೆ, ಭಾಷೆಯ ಸಂವರ್ಧನೆಗೆ ಅಲ್ಲಿ ಕೈಗೊಳ್ಳುವ ಯಾವ ನಿರ್ಣಯಗಳೂ ಜಾರಿಗೆ ಬರುವುದಿಲ್ಲ ಎಂಬ ಅಪಶ್ರುತಿಗಳೂ ಇವೆ. ಆದರೂ ಈ ಸಮ್ಮೇಳನದಲ್ಲಿ ಭಾಗವಹಿಸಿದ ಕೆಲವೇ ಕೆಲವು ಮಂದಿಯ ಹೃದಯದಲ್ಲಿಯಾದರೂ ಭಾಷೆಯ ಜ್ಯೋತಿ ಉರಿದರೆ, ಕನ್ನಡ ಸಾಹಿತ್ಯ ಕೃತಿಗಳ ಓದಿಗೆ ಪ್ರೇರಕವಾದರೆ ಸಮ್ಮೇಳನದ ಆಯೋಜನೆಯ ಹಿಂದೆ ಬೆವರು ಹರಿಸುವಕಾಣದ ಕೈಗಳ ಪರಿಶ್ರಮಕ್ಕೆ ಬಹು ದೊಡ್ಡ ಸಾರ್ಥಕ್ಯ, ಸತ್ಫಲ ಪ್ರಾಪ್ತಿ ಅನಿಸುತ್ತದೆ ಎಂದರು.

ನಾನೊಂದು ಸಲ ಎಂಸಿಜೆ ವಿಭಾಗದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲು ಹೋಗಿದ್ದೆ. ಇಪ್ಪತ್ತೊಂಬತ್ತು ವಿದ್ಯಾರ್ಥಿಗಳಲ್ಲಿ ಇಬ್ಬರ ಹೊರತು ಉಳಿದ ಯಾರೂ ಪತ್ರಿಕೆಗಳಲ್ಲಿ ಬರೆದಿರಲಿಲ್ಲ. ನಾನು, `ಪತ್ರಿಕೋದ್ಯಮದ ವಿದ್ಯಾರ್ಥಿಗಳು ನೀವು. ಈ ತನಕ ಒಂದೇ ಒಂದು ಲೇಖನ ಬರೆದಿಲ್ಲ ಅನ್ನುತ್ತೀರಿ. ಇದು ಹೇಗೆ ?' ಎಂದು ಕುತೂಹಲದಿಂದ ಕೇಳಿದೆ. ಅದಕ್ಕೆಅವರು, `ನಮಗೆ ಲೇಖನ ಬರೆದು ಆಗಬೇಕಾದ್ದು ಏನೂ ಇಲ್ಲ. ಸುದ್ದಿ ವಾಹಿನಿಗಳ ಚಿತ್ರೀಕರಣಕ್ಕೆ ಲೈಟು ಹಿಡಿಯಲು ಕಲಿತರೂ ಸಾಕಾಗುತ್ತದೆ' ಎಂದು ಹೇಳಿದರು. ಪತ್ರಿಕೋದ್ಯಮದ ವಿದ್ಯಾರ್ಥಿಗೆ ಸಂಶೋಧನಾ ದೃಷ್ಟಿ ಇರಬೇಕು, ಕೇವಲ ಪ್ರಸಾರ ಮಾಧ್ಯಮವೇ ಅವನ ಗುರಿಯಾಗಿರಬಾರದು. ಭವಿಷ್ಯದಲ್ಲಿ ಈ ಭಾವನೆ ಮುದ್ರಣ ಸಂಸ್ಕೃತಿಗೆ ಅಪಾಯ ತರಬಹುದು. ಡಿಜಿಟಲ್‍ ಯುಗ ಇದು. ಪತ್ರಿಕೆಗಳನ್ನು ಮೊಬೈಲು ಮೂಲಕವೂ ಓದಬಹುದು. ಒಂದೇ ಒಂದು ಕಳವಳದ ಸಂಗತಿಯೆಂದರೆ ಇಳಿಯುತ್ತಿರುವ ಪತ್ರಿಕೆಗಳ ಪ್ರಸಾರ ನೋಡಿದರೆ ಮುದ್ರಣವಾಗಿ ಬರುವ ಪತ್ರಿಕಾ ಪರಂಪರೆಯೇ ಮುಂದೆ ಅವಸಾನ ಹೊಂದಬಹುದೆ ? ಎಂಬ ಪ್ರಶ್ನೆ ಮೂಡುತ್ತದೆ ಎಂದರು.

ಸಾಹಿತ್ಯ ಪರಿಷತ್ ಸದಸ್ಯ ಶುಲ್ಕವನ್ನು ಏರಿಸಿ ಅದರ ನೆರಳಿಗೂ ಜನ ಬರದಂತೆ ದೂರವಿಡುವ ಬದಲು ಸಾಂಕೇತಿಕ ಶುಲ್ಕ ಮಾತ್ರ ಪಡೆದು ಹೆಚ್ಚು ಸಂಖ್ಯೆಯಲ್ಲಿ ಸಾಹಿತ್ಯ ಪ್ರೇಮಿಗಳನ್ನು ಮನೆಯೊಳಗೆ ಕರೆತರುವ ಕೆಲಸಕ್ಕೆ ಮುಂದಾಗಬೇಕು.
- ಪ. ರ ಶಾಸ್ತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News