ಪುತ್ತೂರು: ಜ. 19ರಂದು ಕೋಟಿ-ಚೆನ್ನಯ ಜೋಡುಕರೆ ಕಂಬಳ ಕೂಟ

Update: 2019-01-16 12:44 GMT

ಪುತ್ತೂರು, ಜ. 16: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ದೇವರ ಮಾರು ಗದ್ದೆಯಲ್ಲಿ ಉದ್ಯಮಿ ಎನ್. ಮುತ್ತಪ್ಪ ರೈ ಸಾರಥ್ಯದಲ್ಲಿ ಕೋಟಿ ಚೆನ್ನಯ ಜೋಡು ಕರೆ ಕಂಬಳ ಸಮಿತಿಯ ನೇತೃತ್ವದಲ್ಲಿ ವರ್ಷಂಪ್ರತಿ ನಡೆಯುವ ಕೋಟಿ ಚೆನ್ನಯ ಜೋಡುಕರೆ ಕಂಬಳವು ಜ. 19ರಂದು ನಡೆಯಲಿದೆ ಎಂದು ಕಂಬಳ ಸಮಿತಿಯ ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ ತಿಳಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 26ನೇ ವರ್ಷದ ಈ ಐತಿಹಾಸಿಕ ಕೋಟಿ-ಚೆನ್ನಯ ಜೋಡುಕರೆ ಕಂಬಳ ಕೂಟವು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹಾಗೂ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಮಾರ್ಗದರ್ಶನದಲ್ಲಿ ನಡೆಯಲಿದೆ. ಈ ಬಾರಿಯ ಕಂಬಳ ಕೂಟದಲ್ಲಿ ಆರು ವಿಭಾಗಳಲ್ಲಿ 150 ಜೊತೆ ಓಟದ ಕೋಣಗಳು ಪಾಲ್ಗೊಳ್ಳಲಿವೆ ಎಂದು ತಿಳಿಸಿದರು.

ಕಂಬಳ ಕೂಟವನ್ನು ಡಿ. 19ರಂದು ಬೆಳಗ್ಗೆ 10.30 ಕ್ಕೆ ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎನ್. ಸುಧಾಕರ ಶೆಟ್ಟಿ ಉದ್ಘಾಟಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ. ಸೀತಾರಾಮ ರೈ ವಹಿಸಲಿದ್ದಾರೆ. ಸಂಜೆ 6.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸಚಿವರಾದ ಯು.ಟಿ ಖಾದರ್, ಜಯಮಾಲ, ಉದ್ಯಮಿ ಎನ್. ಮುತ್ತಪ್ಪ ರೈ, ಮಾಜಿ ಸಚಿವ ಬಿ. ರಮಾನಾಥ ರೈ, ವಿಧಾನ ಪರಿಷತ್ ಸದಸ್ಯರಾದ ಕೆ. ಹರೀಶ್ ಕುಮಾರ್, ಐವನ್ ಡಿ'ಸೋಜಾ ಸಹಿತ ವಿವಿಧ ಗಣ್ಯರು ಚಲನ ಚಿತ್ರ ನಟ ನಟಿಯರು ಪಾಲ್ಗೊಳ್ಳಲಿದ್ದಾರೆ. ಸಭಾ ಕಾರ್ಯಕ್ರಮದಲ್ಲಿ ಎನ್. ಸುಧಾಕರ ಶೆಟ್ಟಿ, ಆರ್. ಕೆ. ಭಟ್, ವಸಂತಿ ಜೆ ಆರಿಗ ಅವರನ್ನು ಸನ್ಮಾನಿಸಲಾಗುವುದು. ರಾತ್ರಿ ಸುಡುಮದ್ದು ಪ್ರದರ್ಶನ ಏರ್ಪಡಿಸಲಾಗುವುದು. ಜ. 20ರಂದು ಬೆಳಗ್ಗೆ ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಕರುಣಾಕರ್ ರೈ ಸಾಜ ಅಧ್ಯಕ್ಷತೆಯಲ್ಲಿ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಂಬಳ ಸಮಿತಿಯ ಸಂಚಾಲಕ ಎನ್. ಸುಧಾಕರ ಶೆಟ್ಟಿ, ಕಾರ್ಯದರ್ಶಿ ದಿನೇಶ್ ಕುಲಾಲ್ ಪಿ.ವಿ., ಕೋಶಾಧಿಕಾರಿ ಪ್ರಸನ್ನ ಶೆಟ್ಟಿ ಮತ್ತು ನಿರಂಜನ್ ರೈ ಮಠಂತಬೆಟ್ಟು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News