ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ 'ಮುದ್ರಾಡಿ ನಮ ತುಳುವೆರ್ ಸಂಘಟನೆ' ಆಯ್ಕೆ

Update: 2019-01-16 12:50 GMT

ಹೆಬ್ರಿ, ಜ. 16: ರಂಗಾಯಣ ಮೈಸೂರು ವತಿಯಿಂದ ನಡೆಯುವ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ರಂಗನಟ ನಿರ್ದೇಶಕ ಸುಕುಮಾರ್ ಮೋಹನ್ ನೇತ್ರತ್ವದ ಮುದ್ರಾಡಿ ನಮ ತುಳುವೆರ್ ಸಂಘಟನೆಯ ಸದಸ್ಯರು ಅಭಿನಯಿಸುವ ಮೂರು ಹೆಜ್ಜೆ ಮೂರು ಲೋಕ ನಾಟಕ ಆಯ್ಕೆಯಾಗಿದೆ.

ಡಾ.ಡಿ.ಕೆ ಚೌಟ ತುಳುವಿನಲ್ಲಿ ರಚಿಸಿದ ಮೂರು ಹೆಜ್ಜೆ ಮೂರು ಲೋಕ ನಾಟಕವನ್ನು ಡಾ. ನಾ. ದಾಮೋದರ ಶೆಟ್ಟಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಡಾ. ಶ್ರೀಪಾದ ಭಟ್ ವಿನ್ಯಾಸಗೊಳಿಸಿ ನಿರ್ದೇಶನ ಮಾಡಿದ್ದಾರೆ. ಉಡುಪಿ ಜಿಲ್ಲೆ ಹೆಬ್ರಿ ತಾಲ್ಲೂಕು ಮುದ್ರಾಡಿ ನಾಟ್ಕದೂರಿನ ಶ್ರೀ ಆದಿಶಕ್ತಿ ಮತ್ತು ನಂದಿಕೇಶ್ವರ ಹಾಗೂ ಬ್ರಹ್ಮಬೈದರ್ಕಳ, ಪರಿವಾರ ದೈವಗಳ ಸಾನಿಧ್ಯದಲ್ಲಿ ನಡೆಯುವ ಧಾರ್ಮಿಕ ಆರಾಧನೆಯ ಜೊತೆಗೆ ಕಲಾರಾಧನೆಯನ್ನು ನಡೆಸುವ ತಂಡವೇ ನಾಟ್ಕ ಮುದ್ರಾಡಿ - ನಮು ತುಳುವೆರ್ ಕಲಾ ಸಂಘಟನೆ. ಒಂದೇ ಕುಟುಂಬದ ಸದಸ್ಯರು ಮತ್ತು ಸ್ಥಳೀಯ ಕೆಲವು ಸದಸ್ಯರನ್ನು ಒಳಗೊಂಡು ರಂಗದ ಸೇವೆ ಸಲ್ಲಿಸುತ್ತಿದೆ. 1987ರಲ್ಲಿ ಆಧುನಿಕ ನಾಟಕಗಳ ಮೂಲಕ ಆರಂಭಗೊಂಡ ರಂಗಸೇವೆ ಇದೀಗ ಪರಿಪೂರ್ಣ ತಂಡವಾಗಿ ಪ್ರಯೋಗಶೀಲ ರಂಗಭೂಮಿಯಲ್ಲಿ ಸಕ್ರೀಯವಾಗಿದೆ. ಕೃಷ್ಣಮೂರ್ತಿ ಕವತ್ತಾರ್ ನಿರ್ದೇಶನದ ಡಾ.ಚಂದ್ರಶೇಖರ ಕಂಬಾರರ ಸಿರಿಸಂಪಿಗೆ ನಾಟಕದ ಮೂಲಕ ಆರಂಭವಾದ ಸಂಘಟನೆಯ ಆಧುನಿಕ ರಂಗ ಪ್ರಯೋಗಗಳ ರಂಗಯಾತ್ರೆ ಈಗ ದೇಶ ವಿದೇಶಕ್ಕೆ ಹರಡಿದೆ. ಕರಾವಳಿಯಲ್ಲಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಆಯ್ಕೆಯಾದ ಪ್ರಥಮ ರಂಗ ಸಂಘಟನೆ ಎಂದು ಅಧ್ಯಕ್ಷ ಸುಕುಮಾರ್ ಮೋಹನ್ ತಿಳಿಸಿದ್ದಾರೆ. 

ಮೂರು ಹೆಜ್ಜೆ ಮೂರು ಲೋಕ : ನಾಟಕ ಐಹಿತ್ಯ, ಆಚರಣೆ, ನಂಬಿಕೆ, ರಾಜಕಾರಣ, ಧರ್ಮ ರಾಜಕೀಯ,ಇವೆಲ್ಲವನ್ನೂ ತುಳುನಾಡ ಸಮೂಹದ ರಂಗಭಾಷೆಯ ಮೂಲಕ ಕಟ್ಟಿಕೊಡುವ ಪ್ರಯತ್ನವನ್ನು ನಡೆಸಿದೆ. ನಾಟಕವು ಕಳೆದ ದಿನಗಳ ಯಾತನೆಯ ನೆಪಪು ಆಗುವಂತೆ ಮಾಡಿದೆ ಎಂದು ನಿರ್ದೇಶಕ ಡಾ.ಶ್ರೀಪಾದ ಭಟ್ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News