​ಉಡುಪಿ ಜಿಲ್ಲೆಯಲ್ಲಿ 9,90,773 ಮಂದಿ ಮತದಾರರು: ಜಿಲ್ಲಾಧಿಕಾರಿ

Update: 2019-01-16 13:36 GMT

ಉಡುಪಿ, ಜ.16: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ 2019ರ ಜ.1ನ್ನು ಅರ್ಹತಾ ದಿನವಾಗಿಟ್ಟುಕೊಂಡು ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಸಿದ ಮತದಾರರ ನೋಂದಣಿಯಲ್ಲಿ ಅಂತಿಮ ಮತದಾರರ ಪಟ್ಟಿಯನ್ನು ಬುಧವಾರ ಪ್ರಕಟಿಸಲಾಗಿದ್ದು, ಇದರಂತೆ ಉಡುಪಿ ಜಿಲ್ಲೆಯಲ್ಲಿರುವ ಮತದಾರರ ಸಂಖ್ಯೆ 9,90,773 ಆಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.

ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಈ ಅಂತಿಮ ಮತದಾರರ ಪಟ್ಟಿಯನ್ನು ಜ.16ರಂದು ಎಲ್ಲಾ ಮತಗಟ್ಟೆಗಳಲ್ಲಿ, ಕುಂದಾಪುರದ ಸಹಾಯಕ ಕಮಿಷನರ್, ಎಲ್ಲಾ ತಾಲೂಕು ಕಚೇರಿಗಳಲ್ಲಿ ಹಾಗೂ ಜಿಲ್ಲಾಧಿಕಾರಿ ಕಚೇರಿಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಎಂದರು.

ಕಳೆದ ನವೆಂಬರ್ ತಿಂಗಳಲ್ಲಿ ನಡೆಸಿದ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಒಟ್ಟು 4,793 ಮಂದಿ 18-19 ವರ್ಷ ಪ್ರಾಯದ ಯುವ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಂಡಿದ್ದಾರೆ. ಹೊಸದಾಗಿ ಹೆಸರು ನೊಂದಾವಣಿ ಮಾಡಿ ಕೊಂಡಿರುವ ಯುವ ಮತದಾರರಿಗೆ ಜ.25ರಂದು ಉಡುಪಿಯ ಪುರಭವನದಲ್ಲಿ ಆಯೋಜಿಸಲಾಗುವ ರಾಷ್ಟ್ರೀಯ ಮತದಾರರ ದಿನದಂದು ಮತದಾರರ ಗುರುತಿಸ ಚೀಟಿ (ಎಪಿಕ್)ಯನ್ನು ವಿತರಿಸಲಾಗುವುದು ಎಂದವರು ತಿಳಿಸಿದರು.

ಚುನಾವಣಾ ಆಯೋಗ ಪ್ರಕಟಿಸಿರುವ ಅಂತಿಮ ಮತದಾರರ ಪಟ್ಟಿಯಂತೆ ಉಡುಪಿ ಜಿಲ್ಲೆಯ ಪುರುಷ ಮತದಾರರ ಸಂಖ್ಯೆ 4,77,243 ಆಗಿದ್ದರೆ, ಮಹಿಳಾ ಮತದಾರರ ಸಂಖ್ಯೆ 5,13,523 ಆಗಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ 9,90,773 ಮತದಾರರಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಉಡುಪಿ ಜಿಲ್ಲೆಯಲ್ಲಿ 4,70,730 ಪುರುಷ ಹಾಗೂ 5,07,773 ಮಹಿಳಾ ಸೇರಿದಂತೆ ಒಟ್ಟು 9,78,503 ಮಂದಿ ಮತದಾರ ರಿದ್ದರು. ಇದರಿಂದ ಈಗ ಮತದಾರರ ಸಂಖ್ಯೆಯಲ್ಲಿ 12,270ರಷ್ಟು ಹೆಚ್ಚಳ ವಾದಂತಾಗಿದೆ.

ಜಿಲ್ಲೆಯ ಒಟ್ಟು ಅಂದಾಜು ಜನಸಂಖ್ಯೆಗೆ ಹೋಲಿಸಿದರೆ ಉಡುಪಿ ಜಿಲ್ಲೆ ಯಲ್ಲಿ ಶೇ.80.29ರಷ್ಟು ಮತದಾರರಿದ್ದಾರೆ ಎಂದು ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದರು. ಮತದಾರರ ಪಟ್ಟಿಯಲ್ಲಿ ವಿಧಾನಸಭಾ ಕ್ಷೇತ್ರವಾರು ಮತದಾರರ ವಿವರ ಹೀಗಿದೆ.

ಬೈಂದೂರು: 1,08,252 ಪುರುಷರು, 1,14,290 ಮಹಿಳೆಯರು ಒಟ್ಟು 2,22,542. ಕುಂದಾಪುರ: 96,164ಪುರುಷರು, 1,03,937 ಮಹಿಳೆಯರು ಒಟ್ಟು 2,00,101. ಉಡುಪಿ: 99,598 ಪುರುಷರು, 1,05,968 ಮಹಿಳೆಯರು, ಒಟ್ಟು 2,05,566. ಕಾಪು: 86,308 ಪುರುಷರು, 94,870 ಮಹಿಳೆಯರು, ಒಟ್ಟು 1,81,178. ಕಾರ್ಕಳ: 86,921 ಪುರುಷರು, 94,465 ಮಹಿಳೆಯರು, ಒಟ್ಟು 1,81,386.

ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯ ಅವಧಿಯಲ್ಲಿ ಹೆಸರು ಸೇರ್ಪಡೆಗಾಗಿ ನಮೂನೆ-6ರಲ್ಲಿ 10,273 ಅರ್ಜಿಗಳು ಸಲ್ಲಿಕೆಯಾಗಿದೆ. ಅನಿವಾಸಿ ಭಾರತೀಯರಿಂದೆ ಹೆಸರು ಸೇರ್ಪಡೆಗೆ ನಮೂನೆ 6ಎಯಲ್ಲಿ ನಾಲ್ಕು ಅರ್ಜಿಗಳು ಸ್ವೀಕೃತಗೊಂಡಿತ್ತು. ಅದೇ ರೀತಿ ಮತದಾರರ ಪಟ್ಟಿಯಲ್ಲಿ ಹೆಸರು ತೆಗೆದುಹಾಕಲು ನಮೂನೆ-7ರಲ್ಲಿ 7,099 ಅರ್ಜಿಗಳು , ತಿದ್ದುಪಡಿಗಾಗಿ ನಮೂನೆ 8ರಲ್ಲಿ 3,374 ಅರ್ಜಿಗಳು ಹಾಗೂ ವಿಧಾನಸಭಾ ವ್ಯಾಪ್ತಿಯ ಬದಲಾವಣೆಗಾಗಿ ನಮೂನೆ 8ಎಯಲ್ಲಿ 755 ಅರ್ಜಿಗಳು ಸ್ವೀಕೃತಗೊಂಡಿದ್ದವು ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು.

ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಹಾಗೂ ಪಟ್ಟಿಯಿಂದ ಹೆಸರು ಕೈಬಿಡುವ ಪ್ರಕ್ರಿಯೆ ಮುಂದಿನ ಚುನಾವಣೆ ಘೋಷಣೆಯವರೆಗೆ ಮುಂದುವರಿ ಯಲಿದೆ. ಹೊಸ ಅರ್ಜಿ ಸಲ್ಲಿಸಲು ಈಗಲೂ ಅವಕಾಶಗಳಿವೆ ಎಂದವರು ಹೇಳಿದರು.

ರಾ.ಮತದಾರರ ದಿನಾಚರಣೆ: ಕೇಂದ್ರ ಹಾಗೂ ರಾಜ್ಯ ಚುನಾವಣಾ ಧಿಕಾರಿಗಳ ನಿರ್ದೇಶನದಂತೆ ಇದೇ ಜ.25ರಂದು ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಜಿಲ್ಲಾ ಮಟ್ಟದಲ್ಲಿ ಆಚರಿಸಲಾಗುವುದು. ಈ ಕಾರ್ಯಕ್ರಮ ಅಜ್ಜರಕಾಡಿನಲ್ಲಿರುವ ಪುರಭವನದಲ್ಲಿ ನಡೆಯಲಿದೆ. ಅದೇ ರೀತಿ ಪ್ರತಿ ತಾಲೂಕು ಮಟ್ಟದಲ್ಲಿ ಹಾಗೂ ಮತಗಟ್ಟೆ ವ್ಯಾಪ್ತಿಯಲ್ಲೂ ಈ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News