ಉಡುಪಿ ಜಿಲ್ಲೆಯಲ್ಲಿ ಸತ್ತ ಎಂಟು ಮಂಗಗಳಲ್ಲಿ ಕೆಎಫ್‌ಡಿ ವೈರಸ್ ಪತ್ತೆ: ಆರೋಗ್ಯ ಇಲಾಖೆಯಿಂದ ಸಮರೋಪಾದಿ ಕ್ರಮ

Update: 2019-01-16 16:34 GMT

ಉಡುಪಿ, ಜ.16: ಜಿಲ್ಲೆಯ ಮೂರು ತಾಲೂಕುಗಳಲ್ಲಿ ಕಳೆದ ಸುಮಾರು ಹತ್ತು ದಿನಗಳಿಂದ ಮೃತಪಟ್ಟ 25ಕ್ಕೂ ಅಧಿಕ ಮಂಗಗಳಲ್ಲಿ 12 ಮಂಗಗಳ ಪರೀಕ್ಷಾ ವರದಿ ಪುಣೆಯಿಂದ ಬಂದಿದ್ದು, ಇವುಗಳಲ್ಲಿ ಎಂಟು ಮಂಗಗಳಲ್ಲಿ ಕ್ಯಾಸನೂರು ಫಾರೆಸ್ಟ್ ಡೀಸಿಸ್ (ಕೆಎಫ್‌ಡಿ-ಮಂಗನ ಕಾಯಿಲೆ)ನ ವೈರಸ್ ಪತ್ತೆಯಾಗಿದೆ ಎಂದು ಮಂಗನ ಕಾಯಿಲೆಯ ಉಡುಪಿ ಜಿಲ್ಲಾ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಸಿಕ್ಕ 25ಕ್ಕೂ ಅಧಿಕ ಮಂಗಗಳಲ್ಲಿ 15 ಮಂಗಗಳ ವಿಸೇರಾವನ್ನು ಶಿವಮೊಗ್ಗಕ್ಕೆ ಕಳುಹಿಸಲಾಗಿದ್ದು, ಇವುಗಳಲ್ಲಿ 12ನ್ನು ಹೆಚ್ಚಿನ ಪರೀಕ್ಷೆಗಾಗಿ ಪುಣೆಯಲ್ಲಿರುವ ನ್ಯಾಷನಲ್ ವೈರಾಲಜಿ ಪರಿಶೋಧನಾ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇವುಗಳ ವರದಿ ಇಂದು ಬಂದಿದ್ದು, ಇವುಗಳಲ್ಲಿ ಎಂಟು ಮಂಗಗಳು ಕೆಎಫ್‌ಡಿವಿ ಸೋಂಕಿನಿಂದಲೇ ಮೃತಪಟ್ಟಿರುವುದು ದೃಢವಾಗಿದೆ ಎಂದವರು ತಿಳಿಸಿದರು.

ಕುಂದಾಪುರ ತಾಲೂಕಿನ ಶಿರೂರು, ಸಿದ್ಧಾಪುರ, ಹೊಸಂಗಡಿ, ಬೆಳ್ವೆ (2), ಕಂಡ್ಲೂರು, ಉಡುಪಿ ತಾಲೂಕಿನ ಬ್ರಹ್ಮಾವರ ಸಮೀಪದ ಹೇರೂರು ಹಾಗೂ ಕಾರ್ಕಳ ತಾಲೂಕಿನ ಹಿರ್ಗಾನ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯ ಮಂಗಗಳಲ್ಲಿ ಈ ವೈರಸ್ ಪತ್ತೆಯಾಗಿದ್ದು, ಇದರಿಂದ ಜಿಲ್ಲೆಯ ಎಲ್ಲಾ ಭಾಗಗಳಲ್ಲೂ ಮಂಗಗಳ ದೇಹದಲ್ಲಿ ಮಂಗನ ಕಾಯಿಲೆ ಹರಡುವ ವೈರಸ್ ಇರುವುದು ಖಚಿತವಾಗಿದೆ ಎಂದು ಡಾ.ಪ್ರಶಾಂತ್ ವಿವರಿಸಿದರು.

ಬ್ರಹ್ಮಾವರದ ಖಾಸಗಿ ಆಸ್ಪತ್ರೆಯಿಂದ ಶಂಕಿತ ಮಂಗನ ಕಾಯಿಲೆಯ ಪರೀಕ್ಷೆಗಾಗಿ ಶಿವಮೊಗ್ಗಕ್ಕೆ ಕಳುಹಿಸಿದ ರಕ್ತದ ವರದಿ ನೆಗೆಟೀವ್ ಆಗಿ ಬಂದಿದೆ ಎಂದು ಡಾ.ಪ್ರಶಾಂತ್ ಭಟ್ ತಿಳಿಸಿದರು.

ಜಿಲ್ಲೆಯಲ್ಲಿ ಮಂಗನ ಕಾಯಿಲೆ ವೈರಸ್ ಇರುವುದು ಖಚಿತವಾಗಿದ್ದರೂ, ಇದುವರೆಗೆ ಯಾವುದೇ ಮನುಷ್ಯನಿಗೆ ಇದು ಬಾಧಿಸಿರುವುದು ಪತ್ತೆಯಾಗಿಲ್ಲ. ಮೊದಲ ಮಂಗನ ಮೃತದೇಹ ಪತ್ತೆಯಾದ ದಿನದಿಂದಲೇ ಆರೋಗ್ಯ ಇಲಾಖೆ ತುರ್ತು ಕ್ರಮಕೈಗೊಂಡು ಬೇಕಾದ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರುವುದೇ ಇದಕ್ಕೆ ಕಾರಣ ಎಂದು ಕುಂದಾಪುರ ತಾಲೂಕು ಆರೋಗ್ಯಾ ಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.

ಇದೀಗ ಕುಂದಾಪುರ ತಾಲೂಕಿನಲ್ಲಿರುವ 200ಕ್ಕೂ ಅಧಿಕ ಆಶಾ ಕಾರ್ಯಕರ್ತೆಯರ ಮೂಲಕ ಪಶ್ಚಿಮ ಘಟ್ಟದ ತಪ್ಪಲು ಹಾಗೂ ಸತ್ತ ಮಂಗಗಳು ಪತ್ತೆಯಾಗಿರುವ ಪ್ರದೇಶಗಳಲ್ಲಿ ಮನೆ ಮನೆಗಳಿಗೆ ತೆರಳಿ ಜನರಿಗೆ ಜಾಗೃತಿ ಮೂಡಿಸಿ, ಕೈಗೊಳ್ಳಬೇಕಾದ ಎಚ್ಚರಿಕೆ ಕ್ರಮಗಳನ್ನು ವಿವರಿಸಲಾಗುವುದು. ಇದೀಗ ಶಾಲಾ ಮಕ್ಕಳ ಮೂಲಕ ಹಿರಿಯರನ್ನು ಜಾಗೃತಿಗೊಳಿಸಲು ಯೋಜನೆ ರೂಪಿಸಲಾಗಿದೆ ಎಂದು ಅವರು ವಿವರಿಸಿದರು.

ಆಶಾ ಕಾರ್ಯಕರ್ತೆಯರು ಏಕಕಾಲದಲ್ಲಿ ಗ್ರಾಮಗಳ ಶಾಲೆಗಳಿಗೆ ತೆರಳಿ ಅಲ್ಲಿನ ಮಕ್ಕಳಿಗೆ ರೋಗದ ಕುರಿತು ಮಾಹಿತಿ ನೀಡಿ, ಕರಪತ್ರಗಳನ್ನು ನೀಡಿ ಅದನ್ನು ಮನೆಯ ಹೆತ್ತವರಿಗೆ, ಹಿರಿಯರಿಗೆ ತಿಳಿಸಲು ಸೂಚಿಸಲಾಗುವುದು. ಇದರಿಂದ ಮನೆಮನೆಗೂ ಸಂದೇಶ ಹೋಗಲು ಸಾಧ್ಯವಿದೆ ಎಂದರು.

ಸಾರ್ವಜನಿಕರು ಯಾರೂ ಕಾಡಿಗೆ ಹೋಗದಂತೆ, ತಮ್ಮ ಜಾನುವಾರು, ಸಾಕು ಪ್ರಾಣಿಗಳನ್ನು ಕಾಡಿಗೆ ಬಿಡದಂತೆ ಅವರು ಮನವಿ ಮಾಡಿದರು. ಮಂಗನ ದೇಹದಲ್ಲಿರುವ ಉಣ್ಣಿಯಿಂದ ಮಂಗನ ಕಾಯಿಲೆ ಮನುಷ್ಯನಿಗೆ ಬರುವ ಕಾರಣ, ಮಂಗ ಸತ್ತ ಕಡೆ ಯಾರೂ ಹೋಗದಂತೆ ಅವರು ತಿಳಿಸಿದರು. ಮಂಗ ಸತ್ತಾಗ ದೇಹದ ಉಣ್ಣಿ ಅಲ್ಲಿಂದ 50ಮೀ. ವ್ಯಾಪ್ತಿಯಲ್ಲಿರಲಿದ್ದು, ಅಲ್ಲಿಗೆ ಮನುಷ್ಯ ಅಥವಾ ಸಾಕುಪ್ರಾಣಿಗಳಿಗೆ ಅಂಟಿಕೊಂಡು ವೈರಸ್‌ನ್ನು ದೇಹಕ್ಕೆ ದಾಟಿಸುವ ಸಾಧ್ಯತೆ ಇರುತ್ತದೆ ಎಂದರು.

ಕಾಡಿಗೆ ಅಗತ್ಯವಿದ್ದು ಹೋಗುವವರು ಇದಕ್ಕಾಗಿ ಬಳಸಲಾಗುವ ಡಿಎಂಪಿ ತೈಲವನ್ನು ಹಚ್ಚಿಕೊಂಡು ಹೋಗಬೇಕು. ಈಗಾಗಲೇ ಅರಣ್ಯ ಇಲಾಖೆಗೆ ಹಾಗೂ ಎಎನ್‌ಎಫ್ ಸಿಬ್ಬಂದಿಗಳಿಗೆ ಈ ತೈಲವನ್ನು ಸರಬರಾಜು ಮಾಡಲಾಗಿದೆ. ಕುಂದಾಪುರಕ್ಕೆ 950 ಬಾಟ್ಲಿ ತೈಲ ಬಂದಿದ್ದು, ಇನ್ನಷ್ಟು ಬರಲಿದೆ ಎಂದು ಡಾ.ಉಡುಪ ತಿಳಿಸಿದರು.

ಆರೋಗ್ಯ ಇಲಾಖೆಯ ಸಿಬ್ಬಂದಿಗಳೊಂದಿಗೆ ಅರಣ್ಯ ಇಲಾಖೆ, ಪಶುಸಂಗೋಪನಾ ಇಲಾಖೆ, ಗ್ರಾಪಂಗಳು ಸಮನ್ವಯದಿಂದ ಕೆಲಸ ಮಾಡಲು ಯೋಜನೆ ರೂಪಿಸಲಾಗಿದೆ. ಎಲ್ಲಿಯೇ ಆದರೂ ಜ್ವರದ ಪ್ರಕರಣ ವರದಿಯಾದರೆ ತಕ್ಷಣ ಆರೋಗ್ಯ ಇಲಾಖೆಗೆ ಮಾಹಿತಿ ನೀಡಲು ತಿಳಿಸಲಾಗಿದೆ ಎಂದರು.

ಜಿಲ್ಲೆಯ ಮೂರು ತಾಲೂಕುಗಳಲ್ಲೂ ಸತ್ತ ಮಂಗಗಳ ದೇಹದಲ್ಲಿ ವೈರಸ್ ಪತ್ತೆಯಾಗಿರುವುದರಿಂದ ಇನ್ನು ಮುಂದೆ ಮಂಗಗಳ ದೇಹವನ್ನು ಪರೀಕ್ಷೆಗೆ ಕಳುಹಿಸಲಾಗುವುದಿಲ್ಲ. ಅದು ಜನರಲ್ಲಿ ಹರಡದಂತೆ ತಡೆಯಲು ನಮ್ಮ ಸಂಪೂರ್ಣ ಶ್ರಮ ಇರಲಿದೆ ಎಂದು ಡಾ.ಉಡುಪ ಹೇಳಿದರು.

ಮಣಿಪಾಲದಲ್ಲಿ 22 ಮಂದಿಗೆ ಚಿಕಿತ್ಸೆ

ಶಿವಮೊಗ್ಗ ಜಿಲ್ಲೆಯ ಸಾಗರ ಹಾಗೂ ಆಸುಪಾಸಿನ ಸುಮಾರು 83 ಮಂದಿ ರೋಗಿಗಳು ಇಲ್ಲಿಯವರೆಗೆ ಶಂಕಿತ ಮಂಗನ ಕಾಯಿಲೆ ರೋಗಕ್ಕೆ ಚಿಕಿತ್ಸೆ ಪಡೆಯಲು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಾಗಿದ್ದು, ಇವರಲ್ಲಿ ಸುಮಾರು 28 ಮಂದಿಗೆ ಮಂಗನ ಕಾಯಿಲೆ ಇರುವುದು ದೃಢಪಟ್ಟಿದೆ. 9 ಜನರ ರಕ್ತಪರೀಕ್ಷೆಯ ವರದಿ ಬರಲು ಇನ್ನೂ ಬಾಕಿ ಇದೆ. 61 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆ ಹೊಂದಿದ್ದರೆ, 22 ಮಂದಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಜಿಲ್ಲೆಯಲ್ಲಿ ಮಂಗನ ಕಾಯಿಲೆಯಿಂದ ಮರಣ ಸಂಭವಿಸಿದ ಬಗ್ಗೆ ಯಾವುದೇ ವರದಿಯಾಗಿಲ್ಲ ಎಂದು ಕೆಎಂಸಿಯ ಪ್ರಕಟಣೆ ತಿಳಿಸಿದೆ.

ಗಾಬರಿ ಬೇಡ: ಜಿಲ್ಲಾಧಿಕಾರಿ

ಜಿಲ್ಲೆಯಲ್ಲಿ ಸತ್ತ ಒಟ್ಟು ಮಂಗಗಳಲ್ಲಿ ಎಂಟು ಮಂಗಗಳಿಗೆ- ಸಿದ್ಧಾಪುರ, ಹೊಸಂಗಡಿ,ಶಿರೂರು,ಕಾವ್ರಾಡಿ(ಬೆಳ್ವೆ), ಆರ್ಡಿ(ಬೆಳ್ವೆ), ಅಲ್ಬಾಡಿ (ಕಂಡ್ಲೂರು), ಹಿರ್ಗಾನ, ಹೇರೂರು (ಬ್ರಹ್ಮಾವರ)- ಕೆಎಫ್‌ಡಿ ವೈರಸ್ ಇರುವುದು ಪರೀಕ್ಷೆಯಿಂದ ಖಚಿತವಾಗಿದೆ.

ಅದೇ ರೀತಿ ಬ್ರಹ್ಮಾವರದಲ್ಲಿ ಜ್ವರದಿಂದ ಬಳಲುತಿದ್ದ ಶಂಕಿತ ರೋಗಿಯೊಬ್ಬರ ಸ್ಯಾಂಪಸ್ ನೆಗೆಟೀವ್ ಆಗಿ ಬಂದಿದೆ. ಜನರು ಈ ಬಗ್ಗೆ ಗಾಬರಿಗೊಳ್ಳದೇ ಜಾಗೃತರಾಗಿ ಇರುವಂತೆ ಸೂಚಿಸಲಾಗಿದೆ. ಸಾರ್ವಜನಿಕರು ಅದರಲ್ಲೂ ಸತ್ತ ಮಂಗಗಳು ಪತ್ತೆಯಾದ ಪ್ರದೇಶದ ಜನರು ಕಾಡಿಗೆ ಹೋಗದಂತೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News