ಶೀಲಾ ದೀಕ್ಷಿತ್ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಟೈಟ್ಲರ್‌: ವಿವಾದ

Update: 2019-01-16 17:47 GMT

ಹೊಸದಿಲ್ಲಿ, ಜ.16: ದಿಲ್ಲಿ ಕಾಂಗ್ರೆಸ್ ಅಧ್ಯಕ್ಷೆಯಾಗಿ ಶೀಲಾ ದೀಕ್ಷಿತ್ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ 1984ರ ಸಿಖ್ ವಿರೋಧಿ ದಂಗೆಯ ಆರೋಪಿ ಜಗದೀಶ್ ಟೈಟ್ಲರ್ ಮುಂದಿನ ಸಾಲಿನಲ್ಲಿ ಆಸೀನರಾಗಿದ್ದುದು ಈಗ ವಿವಾದಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಮತ್ತೊಮ್ಮೆ ಸಿಖ್ ಸಮುದಾಯದವರ ಗಾಯಕ್ಕೆ ಉಪ್ಪು ಸವರುತ್ತಿದೆ ಎಂಬ ವ್ಯಾಪಕ ಟೀಕೆ ವ್ಯಕ್ತವಾಗಿದೆ.

 ಇಂದಿರಾ ಗಾಂಧಿಯಿಂದ ರಾಜೀವ ಗಾಂಧಿ ಮತ್ತು ರಾಹುಲ್ ಗಾಂಧಿಯವರೆಗೂ ಟೈಟ್ಲರ್ ಬಲಗೈ ಬಂಟನಾಗಿದ್ದವರು. ಇದು ದೇಶದ ಸಿಖ್ ಸಮುದಾಯಕ್ಕೆ ದೊರೆತ ಸ್ಪಷ್ಟ ಸಂದೇಶವಾಗಿದೆ ಎಂದು ಕೇಂದ್ರ ಸಚಿವೆ ಹರ್‌ಸಿಮ್ರತ್ ಕೌರ್ ಬಾದಲ್ ಪ್ರತಿಕ್ರಿಯಿಸಿದ್ದಾರೆ.

  ಉದ್ದೇಶಪೂರ್ವಕವಾಗಿ ಟೈಟ್ಲರ್‌ಗೆ ಮುಂದಿನ ಸಾಲಿನಲ್ಲಿ ಆಸನ ಕಲ್ಪಿಸಲಾಗಿದೆ. ಟೈಟ್ಲರ್‌ಗೆ ಪಕ್ಷದ ಹೈಕಮಾಂಡ್‌ನ ಪೂರ್ಣ ಬೆಂಬಲವಿದ್ದು ಯಾರು ಕೂಡಾ ಅವರ ವಿರುದ್ಧ ಸಾಕ್ಷ ಹೇಳಬಾರದು ಎಂದು ಸಾಕ್ಷಿಗಳನ್ನು ಭಯಪಡಿಸುವ ತಂತ್ರ ಇದಾಗಿದೆ ಎಂದು ಅಕಾಲಿದಳ ಮುಖಂಡ ಮಜೀಂದರ್ ಸಿಂಗ್ ಸಿರ್ಸ ಹೇಳಿದ್ದಾರೆ. ಈ ಪ್ರಕರಣದಲ್ಲಿ ಸಜ್ಜನ್ ಕುಮಾರ್‌ಗೆ ಶಿಕ್ಷೆಯಾದ ಬಳಿಕ ಕಾಂಗ್ರೆಸ್‌ಗೆ ಭೀತಿ ಆವರಿಸಿಕೊಂಡಿದೆ. ಟೈಟ್ಲರ್ ಮತ್ತು ಕಮಲನಾಥ್ ಸೇರಿದಂತೆ ಇದುವರೆಗೆ ರಕ್ಷಿಸಿಕೊಂಡು ಬಂದಿರುವ ಪಕ್ಷದ ಮುಖಂಡರು ಜೈಲು ಪಾಲಾಗುವ ಸಾಧ್ಯತೆ ಇರುವುದರಿಂದ ಸಾಕ್ಷಿಗಳ ಮೇಲೆ ಒತ್ತಡ ವಿಧಿಸಲು ಪಕ್ಷ ತಂತ್ರ ರೂಪಿಸಿದೆ ಎಂದು ಸಿರ್ಸ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News