ಅಯ್ಯಪ್ಪ ದರ್ಶನಕ್ಕೆ ಮಹಿಳೆಯರ ಯತ್ನ: ಶಬರಿಮಲೆಯಲ್ಲಿ ಭುಗಿಲೆದ್ದ ಪ್ರತಿಭಟನೆ
ತಿರುವನಂತಪುರಂ, ಜ.16: ಬುಧವಾರ ಸುಮಾರು 30 ವರ್ಷ ವಯಸ್ಸಿನ ಇಬ್ಬರು ಮಹಿಳೆಯರು ಶಬರಿಮಲೆ ಅಯ್ಯಪ್ಪ ದೇವಸ್ಥಾನವನ್ನು ಪ್ರವೇಶಿಸಲು ಮುಂದಾದಾಗ ಅವರನ್ನು ಪ್ರತಿಭಟನಾಕಾರರು ತಡೆದು ವಾಪಾಸು ಕಳಿಸಿದ ಘಟನೆ ನಡೆದಿದೆ.
ಬಳಿಕ ಶಬರಿಮಲೆ ದೇವಸ್ಥಾನದ ಸುತ್ತಮುತ್ತ ತೀವ್ರ ಪ್ರತಿಭಟನೆ ನಡೆಯಿತು ಎಂದು ವರದಿಯಾಗಿದೆ. ಮಹಿಳೆಯರು ಶಬರಿಮಲೆಯತ್ತ ಮುಂದುವರಿಯದಂತೆ ಪ್ರತಿಭಟನಾಕಾರರು ದಾರಿಗೆ ಅಡ್ಡ ನಿಂತಾಗ ಪೊಲೀಸರು ಅಸಹಾಯಕತೆ ವ್ಯಕ್ತಪಡಿಸಿದರು. ಸುಮಾರು 2 ಗಂಟೆ ಅಲ್ಲಿದ್ದ ಮಹಿಳೆಯರು ಬಳಿಕ ಶಬರಿಮಲೆ ಬೆಟ್ಟದ ಕೆಳಗಿರುವ ಮೂಲಶಿಬಿರ ಪಂಬಾಕ್ಕೆ ಮರಳಿದ್ದಾರೆ. ಬೆಳಿಗ್ಗೆ 5 ಗಂಟೆಗೆ ಪಂಬಾದಿಂದ ಬೆಟ್ಟದತ್ತ ಹೊರಟಿದ್ದ ಕಣ್ಣೂರಿನ ನಿವಾಸಿಗಳಾದ ರೇಶ್ಮಾ ನಿಶಾಂತ್ ಮತ್ತು ಶನಿಲ ತಮ್ಮೊಂದಿಗಿದ್ದ 7 ಸದಸ್ಯರೊಡನೆ ಸುಮಾರು 5.5 ಕಿ.ಮೀ. ದೂರ ಸಾಗಿ ನೀಲಿಮಲೆಗೆ ಬಂದಿದ್ದಾಗ ಅವರನ್ನು ಪ್ರತಿಭಟನಾಕಾರರು ತಡೆದಿದ್ದಾರೆ.
ಈ ಸಂದರ್ಭ ಶಬರಿಮಲೆ ಕರ್ಮ ಸಮಿತಿಯ ಸದಸ್ಯರೂ ಪ್ರತಿಭಟನೆಗೆ ಕೈಜೋಡಿಸಿದಾಗ ಪ್ರತಿಭಟನೆ ತೀವ್ರಗೊಂಡಿದೆ. ಕೆಲ ಹೊತ್ತು ರಸ್ತೆಯಲ್ಲೇ ಕುಳಿತ ಮಹಿಳೆಯರು ಪ್ರತಿಭಟನಾಕಾರರನ್ನು ಚದುರಿಸುವಂತೆ ಪೊಲೀಸರಲ್ಲಿ ವಿನಂತಿ ಮಾಡಿದರು. ಆದರೆ ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಮನಗಂಡ ಪೊಲೀಸರು ಅವರನ್ನು ಮೂಲಶಿಬಿರಕ್ಕೆ ಕರೆತಂದರು. ತಾನು ಕಳೆದೆರಡು ತಿಂಗಳಿಂದ ವೃತಾಚರಣೆಯಲ್ಲಿದ್ದು, ಅಯ್ಯಪ್ಪನ ದರ್ಶನವಾಗದೆ ವಾಪಾಸು ತೆರಳುವುದಿಲ್ಲ ಎಂದು ರೇಶ್ಮಾ ತಿಳಿಸಿದ್ದಾರೆ. ಮಹಿಳೆಯರು ಅಯ್ಯಪ್ಪ ದೇವಸ್ಥಾನ ಪ್ರವೇಶಿಸಲು ಪ್ರಯತ್ನಿಸಿದ ಮಾಹಿತಿ ತಿಳಿಯುತ್ತಿದ್ದಂತೆಯೇ ಹಲವು ಭಕ್ತರು ದೇವಸ್ಥಾನದ ಆವರಣದಲ್ಲಿ ತೀವ್ರ ಪ್ರತಿಭಟನೆ ನಡೆಸಿದರು.