ಕಪಿಲ್, ಸಚಿನ್ ಸಾಧನೆ ಸರಿಗಟ್ಟುವ ಹಾದಿಯಲ್ಲಿ ಜಡೇಜ
ಮೆಲ್ಬೋರ್ನ್, ಜ.16: ಭಾರತ ತಂಡ ಶುಕ್ರವಾರ ಆಸ್ಟ್ರೇಲಿಯ ವಿರುದ್ಧ ಮೂರನೇ ಏಕದಿನ ಪಂದ್ಯವಾಡಲು ಸಿದ್ಧವಾಗುತ್ತಿದೆ. ತಲಾ ಒಂದು ಪಂದ್ಯದಲ್ಲಿ ಗೆಲುವು ಸಾಧಿಸಿರುವ ಉಭಯ ತಂಡಗಳು 1-1 ರಿಂದ ಸಮಬಲ ಸಾಧಿಸಿದ್ದು ಮೂರನೇ ಪಂದ್ಯ ಸರಣಿ ನಿರ್ಣಾಯಕ ಎನಿಸಿದೆ. ಭಾರತ ತಂಡದ ಆಲ್‌ರೌಂಡರ್ ರವೀಂದ್ರ ಜಡೇಜಗೆ ಮೂರನೇ ಪಂದ್ಯ ಇನ್ನಷ್ಟು ವಿಶೇಷವಾಗಿದ್ದು, ಒಂದು ವೇಳೆ ಈ ಪಂದ್ಯದಲ್ಲಿ ಅವರು 10 ರನ್ ಗಳಿಸಿದರೆ ಏಕದಿನ ಪಂದ್ಯಗಳಲ್ಲಿ ಅಪರೂಪದ ಮೈಲುಗಲ್ಲೊಂದನ್ನು ತಲುಪಲಿದ್ದಾರೆ.
ಮೂರನೇ ಏಕದಿನ ಪಂದ್ಯದಲ್ಲಿ ಜಡೇಜ 10 ರನ್ ಗಳಿಸಿದರೆ ಏಕದಿನ ಕ್ರಿಕೆಟ್‌ನಲ್ಲಿ 2,000 ರನ್ ಹಾಗೂ 150 ವಿಕೆಟ್ ಎರಡನ್ನೂ ಪಡೆದ ವಿಶ್ವದ 26ನೇ ಆಟಗಾರನಾಗಲಿದ್ದಾರೆ. ಭಾರತದ ಪರ ಈ ಸಾಧನೆಯನ್ನು ದಂತಕತೆಗಳಾದ ಕಪಿಲ್‌ದೇವ್ ಹಾಗೂ ಸಚಿನ್ ತೆಂಡುಲ್ಕರ್ ನಿರ್ಮಿಸಿದ್ದಾರೆ. ಜಡೇಜ ಈ ಸಾಲಿಗೆ ಮೂರನೇ ಭಾರತೀಯರಾಗಿ ಸೇರ್ಪಡೆಯಾಗುವರು.
ಆಸ್ಟ್ರೇಲಿಯ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ನಾಯಕ ಕೊಹ್ಲಿಯ ಭರ್ಜರಿ ಶತಕ ಹಾಗೂ ಮಾಜಿ ನಾಯಕ ಧೋನಿಯ ಅರ್ಧಶತಕದ ಕೊಡುಗೆಯಿಂದ 6 ವಿಕೆಟ್‌ಗಳ ಜಯ ಸಾಧಿಸಿತ್ತು.