ಮೂಲನಿವಾಸಿಗಳ ಹಿತರಕ್ಷಣೆ ಉಪನಿಯಮ ಸೇರಿಸದಿದ್ದರೆ ಪೌರತ್ವ ಮಸೂದೆಗೆ ವಿರೋಧ:ಮಣಿಪುರ ಮುಖ್ಯಮಂತ್ರಿ

Update: 2019-01-17 16:40 GMT

ಇಂಫಾಲ,ಜ.17: ಈಶಾನ್ಯ ರಾಜ್ಯಗಳ ಮೂಲನಿವಾಸಿಗಳ ಹಿತರಕ್ಷಣೆಗಾಗಿ ಉಪನಿಯಮವೊಂದನ್ನು ಸೇರಿಸದಿದ್ದರೆ ಪೌರತ್ವ (ತಿದ್ದುಪಡಿ)ಮಸೂದೆಯನ್ನು ಬಿಜೆಪಿ ನೇತೃತ್ವದ ರಾಜ್ಯ ಸರಕಾರವು ವಿರೋಧಿಸಲಿದೆ ಎಂದು ಮಣಿಪುರದ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಅವರು ಹೇಳಿದ್ದಾರೆ.

ಚಂದೇಲ್ ಜಿಲ್ಲೆಯಲ್ಲಿ ಬುಧವಾರ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು,ಮಣಿಪುರ ಜನತೆಯ(ರಕ್ಷಣೆ) ಮಸೂದೆ,2018ಕ್ಕೆ ರಾಷ್ಟ್ರಪತಿಗಳ ಒಪ್ಪಿಗೆಯನ್ನು ಕೋರಿ ತಾನು ಮತ್ತು ಕೆಲವು ಸಚಿವರು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರಿಗೆ ಅಹವಾಲೊಂದನ್ನು ಸಲ್ಲಿಸಿದ್ದೇವೆ. ಈ ಮಸೂದೆಯು ರಾಜ್ಯದ ಜನರ ಹಿತಾಸಕ್ತಿಗಳನ್ನು ರಕ್ಷಿಸುತ್ತದೆ ಎಂದು ತಿಳಿಸಿದರು. ಈಶಾನ್ಯ ಭಾರತದ ಜನರ ಹಿತಾಸಕ್ತಿಗಳಿಗೆ ಯಾವುದೇ ಧಕ್ಕೆಯುಂಟಾಗುವುದಿಲ್ಲ ಎಂದು ಗೃಹಸಚಿವರು ಭರವಸೆ ನೀಡಿದ್ದಾರೆನ್ನಲಾಗಿದೆ.

ಜುಲೈ,2018ರಲ್ಲಿ ರಾಜ್ಯ ವಿಧಾನಸಭೆಯು ಸರ್ವಾನುಮತದಿಂದ ಅಂಗೀಕರಿಸಿರುವ ಮಣಿಪುರ ಜನತೆಯ(ರಕ್ಷಣೆ) ಮಸೂದೆಯು 1951ರ ಮೊದಲು ರಾಜ್ಯಕ್ಕೆ ವಲಸೆ ಬಂದಿದ್ದ ಮೀಟಿಗಳು,ಪಂಗಲ್ ಮುಸ್ಲಿಮರು,ಪರಿಶಿಷ್ಟ ಪಂಗಡಗಳು ಮತ್ತು ಇತರರಿಗೆ ನಿವಾಸಿ ಸ್ಥಾನಮಾನವನ್ನು ನೀಡಲು ಉದ್ದೇಶಿಸಿದೆ. ಮಣಿಪುರಿಯೇತರರು ಎಂದು ವರ್ಗೀಕರಿಸಲಾಗಿರುವ ಇತರರು ಕಾನೂನಿನ ಅಧಿಸೂಚನೆ ಹೊರಬಿದ್ದ ಒಂದು ತಿಂಗಳೊಳಗೆ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕಿದೆ.

ಮಣಿಪುರ ಸರಕಾರದ ನಿಲುವು ಸ್ಪಷ್ಟವಾಗಿದೆ. ರಾಜ್ಯಸಭೆಯಲ್ಲಿ ಪೌರತ್ವ ಮಸೂದೆಯು ಅಂಗೀಕಾರಗೊಳ್ಳುವ ಮುನ್ನ ರಾಷ್ಟ್ರಪತಿಗಳು ಮಣಿಪುರ ಜನತೆಯ ಮಸೂದೆಗೆ ಅಂಕಿತ ಹಾಕಬೇಕು ಎಂದು ಸಿಂಗ್ ಹೇಳಿದರು.

ತನ್ಮಧ್ಯೆ ಪೌರತ್ವ ಮಸೂದೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಆರು ವಿದ್ಯಾರ್ಥಿ ಗುಂಪುಗಳು ರಾಜಕೀಯ ಪಕ್ಷಗಳ ವಿದ್ಯಾರ್ಥಿ ಘಟಕಗಳ ಸಹಕಾರವನ್ನು ಕೋರಿವೆ. ಪ್ರತಿಭಟನೆಯ ಹಿನ್ನೆಲೆಯಲ್ಲಿ ಮಣಿಪುರದ ಆಯಕಟ್ಟಿನ ಸ್ಥಳಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News