ಭ್ರಷ್ಟಾಚಾರದ ಆರೋಪ: ಸಿಬಿಐಯಿಂದ ಎಸ್‌ಎಐ ನಿರ್ದೇಶಕ, ಇತರ ಐವರ ಬಂಧನ

Update: 2019-01-17 17:33 GMT

ಹೊಸದಿಲ್ಲಿ, ಜ. 17: ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ)ದ ಸಾಗಾಟ ವಿಭಾಗದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ಪ್ರಾಧಿಕಾರದ ನಿರ್ದೇಶಕರು, ಅಧಿಕಾರಿಗಳು ಹಾಗೂ ಖಾಸಗಿ ವ್ಯಕ್ತಿಗಳು ಸೇರಿದಂತೆ ಒಟ್ಟು ಆರು ಮಂದಿಯನ್ನು ಸಿಬಿಐ ಬಂಧಿಸಿದೆ. ದಿಲ್ಲಿಯ ಲೋಧಿ ರಸ್ತೆಯಲ್ಲಿರುವ ಕ್ರೀಡಾ ಆಡಳಿತ ಕಚೇರಿಯಲ್ಲಿ ನಡೆದ ತಪಾಸಣೆ ವೇಳೆ ಈ ಬಂಧನ ನಡೆಸಲಾಗಿದೆ. ಎಸ್‌ಎಐಯ ನಿರ್ದೇಶಕ ಎಸ್.ಕೆ. ಶರ್ಮಾ, ಕಿರಿಯ ಅಕೌಂಟೆಂಟ್ ಅಧಿಕಾರಿ ಹರಿಂದರ್ ಪ್ರಸಾದ್, ಉಸ್ತುವಾರಿ ಲಲಿತ್ ಜೋಲಿ ಹಾಗೂ ಯುಡಿಸಿ ವಿ.ಕೆ. ಶರ್ಮಾ ಅವರನ್ನು ಸಿಬಿಐ ಬಂಧಿಸಿದೆ. ಅಲ್ಲದೆ, ಖಾಸಗಿ ಗುತ್ತಿಗೆದಾರ ಮಂದೀಪ್ ಅಹುಜಾ ಹಾಗೂ ಅವರ ಉದ್ಯೋಗಿ ಯೂನುಸ್ ಅವರನ್ನು ಸಿಬಿಐ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಸ್‌ಎಐ ಅಧಿಕಾರಿಗಳು ಬಾಕಿ ಇದ್ದ 19 ಲಕ್ಷ ರೂಪಾಯಿ ಶುಲ್ಕವನ್ನು ಪಾವತಿಸಬೇಕಿತ್ತು. ಆದರೆ, ಅವರು ಶೇ. 3 ಕಮಿಷನ್ ಆಗ್ರಹಿಸಿದ್ದರು ಎಂದು ಸಿಬಿಐ ಆರೋಪಿಸಿದೆ. ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿರುವ ಎಸ್‌ಎಐ ಕೇಂದ್ರ ಕಚೇರಿಗೆ ಸಿಬಿಐ ಅಧಿಕಾರಿಗಳು ಸಂಜೆ 5 ಗಂಟೆಗೆ ತಲುಪಿದರು. ಸಂಪೂರ್ಣ ಕಟ್ಟಡಕ್ಕೆ ಮೊಹರು ಹಾಕಿದರು ಹಾಗೂ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದರು. ಎಂದು ಎಸ್‌ಎಐಯ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News