ಆರ್‌ಟಿಐ ಅಡಿ ಕೇಳಿದ್ದು ಮಾಹಿತಿ, ಸ್ವೀಕರಿಸಿದ್ದು ಕಾಂಡೋಮ್ !

Update: 2019-01-17 17:34 GMT

ಜೈಪುರ, ಜ. 17: ಮಾಹಿತಿ ಹಕ್ಕು ಕಾಯ್ದೆ ಅಡಿ ಮಾಹಿತಿ ಕೋರಿದ ಇಬ್ಬರು ಮಾಹಿತಿ ಹಕ್ಕು ಕಾರ್ಯಕರ್ತರಿಗೆ ಮೊಹರು ಮಾಡಿದ ಕವರಿನಲ್ಲಿ ಬಳಸಿದ ಕಾಂಡೋಮ್ ತಲುಪಿದ ಆಘಾತಕಾರಿ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. 2001ರಿಂದ ನಡೆದ ಅಭಿವೃದ್ಧಿ ಯೋಜನೆಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಸಂದೇಹದಲ್ಲಿ ಹನುಮಾನ್‌ಗಢ್ ಜಿಲ್ಲೆಯ ನಿವಾಸಿಗಳಾದ ವಿಕಾಸ್ ಚೌಧರಿ ಹಾಗೂ ಮನೋಹರ್ ಲಾಲ್ ಕಳೆದ ವರ್ಷ ಎಪ್ರಿಲ್ 16ರಂದು ಗ್ರಾಮ ಪಂಚಾಯತ್‌ಗೆ ಮಾಹಿತಿ ಹಕ್ಕು ಅಡಿಯಲ್ಲಿ ಮನವಿ ಸಲ್ಲಿಸಿ ವಿವರ ಕೋರಿದ್ದರು. ‘‘ಮಾಹಿತಿ ಹಕ್ಕು ಕಾಯ್ದೆ ಪ್ರಕಾರ 30 ದಿನಗಳ ಒಳಗೆ ಮಾಹಿತಿ ನೀಡುವುದು ಕಡ್ಡಾಯ. ಆದರೆ, ನಮಗೆ ಇತ್ತೀಚೆಗೆ ಪ್ರತಿಕ್ರಿಯೆ ತಲುಪಿತು. ರಾಜ್ಯ ಮಾಹಿತಿ ಆಯೋಗದ ಆದೇಶದಂತೆ ಗ್ರಾಮ ಪಂಚಾಯತ್ ಮಾಹಿತಿ ನೀಡಲಿದೆ ಎಂದು ಪ್ರತಿಕ್ರಿಯೆಲ್ಲಿ ಹೇಳಲಾಗಿತ್ತು ಎಂದು ಮನವಿದಾರರು ತಿಳಿಸಿದ್ದಾರೆ. ಪ್ರತಿಕ್ರಿಯೆ ಸ್ವೀಕರಿಸಿದ ಮೊದಲ ವ್ಯಕ್ತಿ ಚೌಧರಿ. ಪ್ರತಿಕ್ರಿಯೆ ಜೊತೆಗೆ ಇನ್ನೊಂದು ಕವರ್ ಇತ್ತು. ಕವರ್‌ನಲ್ಲಿ ಏನಿದೆ ಎಂಬುದು ಬ್ಲಾಕ್ ಅಭಿವೃದ್ಧಿ ಅಧಿಕಾರಿ (ಬಿಡಿಒ) ಕೂಡಾ ನೋಡಿದಂತಾಗುತ್ತದೆ ಎಂದು ನಾನು ಮತ್ತು ಲಾಲ್ ಅವರನ್ನು ಗ್ರಾಮಕ್ಕೆ ಬರುವಂತೆ ಮನವಿ ಮಾಡಿದೆವು.

ಆದಾಗ್ಯೂ, ಬಿಡಿಒ ನಾವಿರುವ ಸ್ಥಳಕ್ಕೆ ಬರಲು ನಿರಾಕರಿಸಿದರು. ಗ್ರಾಮಸ್ಥರ ಮುಂದೆ ನಾವು ಆ ಕವರ್ ಅನ್ನು ತೆರೆದೆವು. ಇದನ್ನು ವೀಡಿಯೊ ದಾಖಲು ಕೂಡ ಮಾಡಿದೆವು. ಕವರ್‌ನಲ್ಲಿ ದಿನಪತ್ರಿಕೆಯಲ್ಲಿ ಸುತ್ತಿದ ಬಳಸಿದ ಕಾಂಡೋಮ್ ಇತ್ತು ಎಂದು ಚೌಧುರಿ ಹೇಳಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹನುಮಾನ್‌ಗಢ ಜಿಲ್ಲಾ ಪರಿಷತ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನವನೀತ್ ಕುಮಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News