ವೇದಿಕೆಯ ದುರ್ಬಳಕೆ: ಗೂಗಲ್ ಇಂಡಿಯಾಕ್ಕೆ ಲೀಗಲ್ ನೋಟಿಸ್ ಕಳಿಸಿದ ಅಮುಲ್

Update: 2019-01-17 17:37 GMT

ಅಹ್ಮದಾಬಾದ್, ಜ.17: ಗೂಗಲ್ ವೇದಿಕೆಯನ್ನು ಬಳಸಿಕೊಂಡು ಹಲವರು ಅಮುಲ್ ಸಂಸ್ಥೆಯ ಹೆಸರಲ್ಲಿ ಅಮಾಯಕ ಜನರನ್ನು ವಂಚಿಸುತ್ತಿರುವ ಹಿನ್ನೆಲೆಯಲ್ಲಿ ಗೂಗಲ್ ಇಂಡಿಯಾಕ್ಕೆ ಲೀಗಲ್ ನೋಟಿಸ್ ಜಾರಿಗೊಳಿಸಲಾಗಿದೆ. ಅಮುಲ್ ಪಾರ್ಲರ್ ಸ್ಥಾಪನೆಗೆ ಅವಕಾಶ, ಅಮುಲ್ ಉತ್ಪನ್ನಗಳ ಹಂಚಿಕೆದಾರರಾಗಲು ಅವಕಾಶ ಮುಂತಾದ ನೆಪದಲ್ಲಿ ಗೂಗಲ್ ಇಂಡಿಯಾದ ವೇದಿಕೆಯಲ್ಲಿ ಹಲವು ಸಂಸ್ಥೆಗಳು ಹಾಗೂ ವ್ಯಕ್ತಿಗಳು ಜಾಹೀರಾತು ನೀಡಿದ್ದಾರೆ. ಇದನ್ನು ನಂಬಿ ದೇಶ ಹಾಗೂ ವಿದೇಶದಲ್ಲಿರುವ ಹಲವಾರು ಭಾರತೀಯರು ಅಪಾರ ಹಣವನ್ನು ಕಳೆದುಕೊಂಡಿದ್ದಾರೆ ಎಂದು ಅಮುಲ್ ಬ್ರಾಂಡ್‌ನ ಒಡೆತನ ಹೊಂದಿರುವ ಗುಜರಾತ್ ಸಹಕಾರಿ ಹಾಲು ಮಾರಾಟ ಫೆಡರೇಶನ್ ಲಿ.(ಜಿಸಿಎಂಎಂಎಫ್)ನ ಆಡಳಿತ ನಿರ್ದೇಶಕ ಆರ್.ಎಸ್.ಸೋಧಿ ಹೇಳಿದ್ದಾರೆ.

ಉದ್ಯಮ ಆರಂಭಿಸಲು ಅವಕಾಶ ನೀಡುವುದಾಗಿ ಸುಳ್ಳು ಪ್ರಚಾರಕ್ಕೆ ಪಾವತಿ ಜಾಹೀರಾತುಗಳನ್ನು ಬಳಸಿ ವಂಚನೆ ನಡೆಸುವ ಪ್ರಕರಣ 2018ರ ಸೆಪ್ಟೆಂಬರ್‌ನಿಂದ ನಡೆಯುತ್ತಿದ್ದು ಈ ಬಗ್ಗೆ ಗೂಗಲ್ ಇಂಡಿಯಾಕ್ಕೆ ಮಾಹಿತಿ ನೀಡಲಾಗಿದೆ . ಅಲ್ಲದೆ ತಮ್ಮ ವೇದಿಕೆಯನ್ನು ದುರ್ಬಳಕೆ ಮಾಡಿಕೊಳ್ಳಲು ಅವಕಾಶ ನೀಡಿ, ಜಾಹೀರಾತುಗಳಿಂದ ಆದಾಯ ಪಡೆಯುತ್ತಿರುವುದಕ್ಕೆ ಗೂಗಲ್ ಇಂಡಿಯಾ ಹಾಗೂ ಗೋಡ್ಯಾಡಿ ಡಾಟ್ ಕಾಮ್ ಸಂಸ್ಥೆಗಳನ್ನು ಹೊಣೆಗಾರರನ್ನಾಗಿಸಿ ಲೀಗಲ್ ನೋಟಿಸ್ ಕಳುಹಿಸಲಾಗಿದೆ ಎಂದು ಸೋಧಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News