ಸೌರಶಕ್ತಿ ಆಧಾರಿತ, ಚಾಲಕ ರಹಿತ ಬಸ್ಸು ರೂಪಿಸಿದ ವಿದ್ಯಾರ್ಥಿಗಳು

Update: 2019-01-17 17:41 GMT

ಜಲಂಧರ್(ಪಂಜಾಬ್), ಜ.17: ಸೌರಶಕ್ತಿಯಿಂದ ಚಲಿಸುವ ಚಾಲಕರಹಿತ ಬಸ್ಸನ್ನು ಫಗ್ವಾರದ ಲವ್ಲಿ ಪ್ರೊಫೆಷನಲ್ ವಿವಿಯ ವಿದ್ಯಾರ್ಥಿಗಳು ರೂಪಿಸಿದ್ದಾರೆ. ಸೌರಶಕ್ತಿಯ ಬ್ಯಾಟರಿ ಒಂದು ಸಾರಿ ಚಾರ್ಜ್ ಆದರೆ 70 ಕಿ.ಮೀ.ವರೆಗೆ ಬಸ್ಸು ಚಲಿಸಬಲ್ಲದು. ಇದರ ವೆಚ್ಚ ಕೇವಲ 15 ಲಕ್ಷ ರೂಪಾಯಿಗಳು. ಬಸ್ಸಿನ ಮೇಲ್ಗಡೆಯ ಸೋಲಾರ್ ಪ್ಯಾನೆಲ್‌ಗಳ ಮೂಲಕ ಸೌರಶಕ್ತಿಯು ಆರು ಸೀಸ- ಆ್ಯಸಿಡ್ ಬ್ಯಾಟರಿಗಳಲ್ಲಿ ಸಂಗ್ರಹವಾಗಿ ಬಸ್ಸಿನ ಚಲನೆಗೆ ನೆರವಾಗುತ್ತದೆ.

ಚಾಲಕರಹಿತ ಈ ಬಸ್ಸು ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಸಂವೇದನೆಯ ಮೂಲಕ ಅರಿತುಕೊಂಡು ಮುಂದೆ ಸಾಗುತ್ತದೆ. 2014ರಲ್ಲಿ ಚಾಲಕ ರಹಿತ ಗಾಲ್ಫ್ ಗಾಡಿಗಳನ್ನು ಅಭಿವೃದ್ಧಿಗೊಳಿಸಿದ್ದೆವು. ಇದೀಗ ಪೆಟ್ರೋಲ್, ಡೀಸೆಲ್ ಅಥವಾ ವಿದ್ಯುಚ್ಛಕ್ತಿಯನ್ನು ಅವಲಂಬಿಸದ ಬಸ್ಸೊಂದನ್ನು ರೂಪಿಸಿದ್ದೇವೆ ಎಂದು ‘ಸ್ವಾಯತ್ತ ಬಸ್ಸು’ ಯೋಜನೆಯ ನೇತೃತ್ವ ವಹಿಸಿರುವ ಮಂದೀಪ್ ಸಿಂಗ್ ಹೇಳಿದ್ದಾರೆ. ವಿಶ್ವದ ಹಲವು ರಾಷ್ಟ್ರಗಳು ಈಗಾಗಲೇ ಚಾಲಕರಹಿತ ಬಸ್ಸುಗಳನ್ನು ವಿನ್ಯಾಸಗೊಳಿಸಿದೆ. ಆದರೆ ಇವು ಪೆಟ್ರೋಲ್, ಡೀಸೆಲ್ ಅಥವಾ ವಿದ್ಯುಚ್ಛಕ್ತಿ ಬಳಸಿ ಚಲಿಸುತ್ತವೆ. ಇದೇ ಮೊತ್ತಮೊದಲ ಬಾರಿಗೆ ಸೌರಶಕ್ತಿ ಬಳಸುವ ಚಾಲಕರಹಿತ ಬಸ್ಸನ್ನು ವಿನ್ಯಾಸಗೊಳಿಸಿದ ಶ್ರೇಯ ಫಗ್ವಾರದ ಲವ್ಲಿ ವಿದ್ಯಾರ್ಥಿಗಳಿಗೆ ಸಲ್ಲುತ್ತದೆ ಎಂದು ಮಂದೀಪ್ ಸಿಂಗ್ ಹೇಳಿದ್ದಾರೆ. ವಿವಿಯೊಳಗೆ ಇರುವ ಕಾರ್ಯಾಗಾರದಲ್ಲಿ ಸುಮಾರು 300 ವಿದ್ಯಾರ್ಥಿಗಳು ಹಾಗೂ 70 ಶಿಕ್ಷಕ ವೃಂದದವರು ಈ ಬಸ್ಸನ್ನು ಆವಿಷ್ಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News