ಮಂಗಳೂರು: 'ಸಿಟಿ ಸ್ಕ್ವೇರ್' ವಾಣಿಜ್ಯ ಸಂಕೀರ್ಣ ಶಿಲಾನ್ಯಾಸ

Update: 2019-01-18 16:50 GMT

ಮಂಗಳೂರು, ಜ.18: ನಗರದ ಪ್ರತಿಷ್ಠಿತ ಸಂಸ್ಥೆ ರೋಹನ್ ಕಾರ್ಪೊರೇಷನ್ ಮತ್ತು ಪ್ರಾಪರ್ಟಿ ಇನ್ಫ್ರಾಟ್ ಟೆಕ್ ನಿಂದ ನಗರದ ಲಾಲ್ ಬಾಗ್ ನ ಮಹಾತ್ಮ ಗಾಂಧಿ ರಸ್ತೆ ಮಾರ್ಗದಲ್ಲಿ ನಿರ್ಮಾಣವಾಗುತ್ತಿರುವ ಸಿಟಿ ಸ್ಕ್ವೇರ್ ವಾಣಿಜ್ಯ ಸಂಕೀರ್ಣಕ್ಕೆ ರೆ. ಫಾ.ರವಿ ಸಂತೋಷ್ ಕಾಮತ್, ಬಿಜೈ ಚರ್ಚ್ ನ ಫಾ. ವಿಲ್ಸನ್ ವೈಟಸ್ ಡಿಸೋಜ, ಮಂಜನಾಡಿ ಅಹ್ಮದ್ ಮುಸ್ಲಿಯಾರ್ ಆಶೀರ್ವಚನ ನೀಡಿ ಶಿಲಾನ್ಯಾಸ ನೆರವೇರಿಸಿದರು.

ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್, ನೋಟು ಅಮಾನ್ಯೀಕರಣದ ನಂತರ ನಗರದ ಹೃದಯ ಭಾಗದಲ್ಲಿ ಸಿಟಿ ಸ್ಕ್ವೇರ್ ವಾಣಿಜ್ಯ ಸಂಕೀರ್ಣ ಶಿಲಾನ್ಯಾಸಗೊಂಡಿದೆ. ರೋಹನ್ ಕಾರ್ಪೊರೇಶನ್ ನ ರೋಹನ್ ಮೊಂತೆರೊ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹೆಸರು ಮಾಡಿದವರು. ಅವರ ಎಲ್ಲ ಕಾರ್ಯಗಳಿಗೂ ತಮ್ಮ ಸಹಕಾರವಿದೆ. ರೋಹನ್ ಅವರಿಂದ ಇನ್ನಷ್ಟು ಕಟ್ಟಡಗಳು ನಿರ್ಮಾಣವಾಗಲಿ ಎಂದು ಶುಭ ಹಾರೈಸಿದರು.

ಸಿಟಿ ಸ್ಕ್ವೇರ್ ವಾಣಿಜ್ಯ ಸಂಕೀರ್ಣದ ಮಾಹಿತಿ ಪತ್ರ (ಬ್ರೋಶರ್)ನ್ನು ಬಿಡುಗಡೆಗೊಳಿಸಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್, ಮಂಗಳೂರು ಸ್ಮಾರ್ಟ್ ಸಿಟಿಯಾಗಿ ಆಯ್ಕೆಯಾಗಿದ್ದು, ಇಲ್ಲಿ ನಿರ್ಮಾಣವಾಗುವ ಎಲ್ಲ ಕಟ್ಟಡಗಳೂ ಸ್ಮಾರ್ಟ್ ಆಗಿರಬೇಕು. ಅದಕ್ಕೆ ತಕ್ಕಂತೆ ರೋಹನ್ ಮೊಂತೆರೊ ಅವರ ಕಟ್ಟಡವೂ ಸ್ಮಾರ್ಟ್ ಆಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಯಶಸ್ಸುಗಳಿಸಲಿ ಎಂದು ಶುಭ ಹಾರೈಸಿದರು.

ರೋಹನ್ ಕಾರ್ಪೊರೇಷನ್ ನ ರೋಹನ್ ಮೊಂತೆರೊ ಮಾತನಾಡಿ, ತನ್ನ ಜೀವನದಲ್ಲಿ 31 ವರ್ಷಗಳ ಕಾಲ ವ್ಯಾಪಾರ ಮಾಡಿದ್ದೇನೆ. ಅದರಲ್ಲಿ 25 ವರ್ಷಗಳಿಂದ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದೇನೆ. ಈ ನಡುವೆ ಹಲವು ಏಳು-ಬೀಳುಗಳ ನಡುವೆ ಉದ್ಯಮದಲ್ಲಿ ಹೋರಾಟ ನಡೆಸಿದ್ದೇನೆ. ವಸತಿ ಸಮುಚ್ಚಯ, ಲೇಔಟ್ ಕಟ್ಟಡಗಳನ್ನು ನಿರ್ಮಿಸುವ ಮೂಲಕ ಸೇವೆಯ ರೀತಿಯಲ್ಲಿ ವ್ಯಾಪಾರ ಮಾಡುತ್ತಿದ್ದೇನೆ. ಗ್ರಾಹಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಮೇಯರ್ ಭಾಸ್ಕರ್ ಕೆ, ಮನಪಾ ಮುಖ್ಯ ಸಚೇತಕ ಶಶಿಧರ್ ಹೆಗಡೆ, ಮಾಜಿ ಶಾಸಕರಾದ ಜೆ.ಆರ್.ಲೋಬೊ, ಮೊಯ್ದಿನ್ ಬಾವ, ಮೂಡಾ ಅಧ್ಯಕ್ಷ ಕೆ. ಸುರೇಶ್ ಬಳ್ಳಾಲ್, ಕ್ರೆಡಾಯ್ ಅಧ್ಯಕ್ಷ ಡಿ.ಬಿ.ಮೆಹ್ತಾ, ಕಟ್ಟಡದ ಮಾಲಕ ಅಬ್ದುಲ್ ಅಝೀಝ್, ಅವರ ಪತ್ನಿ ನೂರ್ ಜಹಾನ್, ಮನಪಾ ಸದಸ್ಯರಾದ ಜಯಂತಿ ಆಚಾರ್ಯ, ನವೀನ್ ಡಿಸೋಜ, ಸಬಿತಾ ಮಿಸ್ಕಿತ್, ಕಟ್ಟಡದ ವಿನ್ಯಾಸಕಾರ ಪೀಟರ್ ಪಾವ್ಲ್, ಹರಿಕೃಷ್ಣ ಬಂಟ್ವಾಳ್, ಕೆ.ಸಿ.ನಾಯ್ಕ್, ಅಡ್ವೋಕೇಟ್ ಅಬ್ದುಲ್ ಅಝೀಝ್, ಜಿಲ್ಲಾ ಮಾಜಿ ರಿಜಿಸ್ಟ್ರಾರ್ ಹಕ್, ವಿಶ್ವಾಸ್ ಬಾವ ಬಿಲ್ಡರ್ಸ್ ನ ಅಬ್ದುಲ್ ರವೂಫ್ ಪುತ್ತಿಗೆ, ಹಾಜಿ ಎಸ್.ಎಂ. ರಶೀದ್, ಮನ್ಸೂರ್ ಅಹ್ಮದ್ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ರೋಹನ್ ಮೊಂತೆರೊ ಸ್ವಾಗತಿಸಿದರು. ಮನೋಹರ್ ಪ್ರಸಾದ್ ಕಾರ್ಯಕ್ರಮ‌ ನಿರೂಪಿಸಿ, ಪದ್ಮನಾಭ ಶೆಟ್ಟಿ ವಂದಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News