ಅನ್ಯಾಯ, ಅಕ್ರಮದ ವಿರುದ್ಧ ಪ್ರತಿಭಟಿಸಲು ಶುಲ್ಕ ಪಾವತಿ ಕಡ್ಡಾಯ!

Update: 2019-01-18 06:53 GMT

► ಸದ್ದಿಲ್ಲದೆ ಜಾರಿಗೊಳಿಸುತ್ತಿರುವ ಪೊಲೀಸ್ ಅಧಿಕಾರಿಗಳು

► ಆದೇಶದ ವಿರುದ್ಧ ದನಿ ಎತ್ತಲು ಮುಂದಾದ ರಾಜಕೀಯ ಪಕ್ಷ-ಸಂಘಟನೆಗಳು

ಮಂಗಳೂರು, ಜ.18: ಅನ್ಯಾಯ, ಅಕ್ರಮದ ವಿರುದ್ಧ ದನಿ ಎತ್ತುವುದು ಜನತೆಯ ಹಕ್ಕುಗಳಲ್ಲಿ ಒಂದಾಗಿದೆ. ಪ್ರತಿಭಟನೆ, ಧರಣಿ, ಮೆರವಣಿಗೆ, ಖಂಡನಾ ಸಭೆಯ ಮೂಲಕ ದನಿ ಎತ್ತುವುದು ಕೂಡ ಸಹಜ. ಇದು ಪ್ರಜಾಪ್ರಭುತ್ವದ ಜೀವಾಳವೂ ಹೌದು. ಸಂದರ್ಭಕ್ಕೆ ಅನುಗುಣವಾಗಿ ಜಿಲ್ಲಾಧಿಕಾರಿ, ಸಹಾಯಕ ಆಯುಕ್ತ, ತಹಶೀಲ್ದಾರ್, ಜಿಪಂ, ತಾಪಂ, ಗ್ರಾಪಂ ಕಚೇರಿಯ ಮುಂದೆ ಮತ್ತು ಪೊಲೀಸ್ ಇಲಾಖೆಯ ವಿರುದ್ಧ ದಿನಂಪ್ರತಿ ಒಂದಲ್ಲೊಂದು ಸಂಘಟನೆ, ಪಕ್ಷಗಳು ಪ್ರತಿಭಟಿಸುವುದು ಸಹಜವಾಗಿದೆ.

ಈ ಹೋರಾಟಗಳನ್ನು ಹತ್ತಿಕ್ಕಲು ಎಂಬಂತೆ ಇದೀಗ ರಾಜ್ಯ ಸರಕಾರವು(ಆದೇಶ ಸಂಖ್ಯೆ-ಎಚ್‌ಡಿ 224, ಎಸ್‌ಎಸ್‌ಟಿ 2018-2018ರ ಅಕ್ಟೋಬರ್ 9) ಮತ್ತು (ಆದೇಶ ಸಂಖ್ಯೆ ಎಚ್‌ಡಿ 56, ಇಎಫ್‌ಎಸ್ 2018-2018 ನವೆಂಬರ್ 27)ರಂತೆ ಖಾಸಗಿ ಸಭೆ/ಸಮಾರಂಭ/ಮೆರವಣಿಗೆಗೆ ಅನುಮತಿ ಪಡೆಯಲು ನಿಗದಿತ ಶುಲ್ಕವನ್ನು (ಧ್ವ್ವನಿವರ್ಧಕ-ಪರವಾನಿಗೆ ಹೊರತುಪಡಿಸಿ)ಪಾವತಿಸಲು ಸೂಚಿಸಿದೆ. ಅದರಂತೆ ಮಂಗಳೂರು ನಗರ ಪೊಲೀಸ್ ಇಲಾಖೆಯು ಶುಲ್ಕ ವಿಧಿಸುವ ಪ್ರಕ್ರಿಯೆ ಆರಂಭಿಸಿದೆ. ಧ್ವನಿ ವರ್ಧಕ ಬಳಸಿ ಕಾರ್ಯಕ್ರಮ ಮಾಡಲು ದಿನವೊಂದಕ್ಕೆ 75 ರೂ., ಆ ಬಳಿಕದ ಪ್ರತಿಯೊಂದು ದಿನಕ್ಕೆ 15 ರೂ. ಅಂದರೆ ತಿಂಗಳಿಗೆ 450 ರೂ. ಪಾವತಿಸಲು ತಿಳಿಸಿವೆ. ದಿನವೊಂದಕ್ಕೆ ಶಾಂತಿಯುತ ಸಭೆ ಮತ್ತು ಮೆರವಣಿಗೆಗೆ 500 ರೂ. ಪಾವತಿಸಲು ಸೂಚಿಸಿದೆ.

ಪೊಲೀಸರು ಕೊಟ್ಟ ಹಣ ಸ್ವೀಕೃತಿ ರಶೀದಿ

ಡಿವೈಎಫ್‌ಐ ದ.ಕ.ಜಿಲ್ಲಾ ಸಮಿತಿಯು ರಾಜ್ಯ ಬಿಜೆಪಿಯ ರೆಸಾರ್ಟ್ ರಾಜಕಾರಣದ ವಿರುದ್ಧ ಗುರುವಾರ ಪ್ರತಿಭಟಿಸಲು ಪೊಲೀಸರ ಅನುಮತಿ ಕೋರಿ ಪತ್ರ ಬರೆದಾಗಲೇ ‘ಶುಲ್ಕ’ದ ವಿಚಾರ ಬೆಳಕಿಗೆ ಬಂದಿದೆ. ಗುರುವಾರ ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಪಾಂಡೇಶ್ವರ ಠಾಣೆಗೆ ತೆರಳಿ ದ.ಕ.ಜಿಲ್ಲಾಧಿಕಾರಿಯ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲು ಅನುಮತಿ ಕೋರಿದಾಗ ಪೊಲೀಸರು 500 ರೂ. ಪಾವತಿಸಲು ಸೂಚಿಸಿದ್ದಾರೆ. ಪ್ರತಿಭಟನೆಗಳ ಮೂಲಕ ಸದಾ ಚಾಲ್ತಿಯಲ್ಲಿರುವ ಡಿವೈಎಫ್‌ಐ ಮುಖಂಡರು ಅನಿವಾರ್ಯವಾಗಿ 500 ರೂ. ಪಾವತಿಸಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಇದರ ವಿರುದ್ಧ ಜನಜಾಗೃತಿ ಆರಂಭಿಸಿದ್ದಾರೆ. ಸರಕಾರ ಈ ನಿರ್ಧಾರವನ್ನು ಕೈ ಬಿಡದಿದ್ದರೆ ತೀವ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.

ಶಾಂತಿಯುತ ಪ್ರತಿಭಟನೆ, ಮೆರವಣಿಗೆ, ಸಭೆಗಳನ್ನು ನಡೆಸುವುದಾದರೆ ಸಣ್ಣ ಮೊತ್ತ, ಬೃಹತ್ ಮೆರವಣಿಗೆ ಮಾಡುವುದಾದರೆ ಕನಿಷ್ಠ ಹತ್ತು ಸಾವಿರ ರೂ. ಪಾವತಿಸಬೇಕು. ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಜನಸಂಖ್ಯೆಗೆ ಅನುಗುಣವಾಗಿ ಈ ಶುಲ್ಕದಲ್ಲಿ ಹೆಚ್ಚು ಕಡಿಮೆಯಾಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಒಟ್ಟಿನಲ್ಲಿ ಸರಕಾರದ ಈ ನಡೆ ಮತ್ತು ಪೊಲೀಸ್ ಇಲಾಖೆಯ ಕಾರ್ಯವೈಖರಿಯ ಬಗ್ಗೆ ವ್ಯಾಪಕ ಅಸಮಾಧಾನ ವ್ಯಕ್ತವಾಗಿದ್ದು, ಹೋರಾಟದ ಹಾದಿ ಹಿಡಿಯಲು ನಿರ್ಧರಿಸಿದೆ.

ಪ್ರಜಾಪ್ರಭುತ್ವಕ್ಕೆ ಮಾರಕವಾಗಿರುವ ಈ ನಿಯಮ ಮೂಲಕ ಹೋರಾಟಗಳನ್ನು ಹತ್ತಿಕ್ಕುವ ಯತ್ನ ನಡೆಯುತ್ತಿದೆ. ಡಿವೈಎಫ್‌ಐ ಸದಾ ಹೋರಾಟದಲ್ಲಿ ತೊಡಗಿಸಿಕೊಂಡಿವೆ. ಬಿಜೆಪಿಯ ರೆಸಾರ್ಟ್ ರಾಜಕಾರಣದ ವಿರುದ್ಧ ದ.ಕ.ಜಿಲ್ಲಾಧಿಕಾರಿಯ ಕಚೇರಿ ಮುಂದೆ ನಾವು ಪ್ರತಿಭಟನೆ ನಡೆಸಲು ಅನುಮತಿ ಕೋರಿ ಪೊಲೀಸ್ ಠಾಣೆಯ ಮೆಟ್ಟಿಲೇರಿದಾಗಲೇ ನಮಗೆ ಈ ಮಾಹಿತಿ ಸಿಕ್ಕಿದೆ. ತಕ್ಷಣ ಸರಕಾರ ಇದನ್ನು ಕೈ ಬಿಡಬೇಕು. ಅಲ್ಲದೆ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಈ ಆದೇಶದಲ್ಲಿ ಏನು ಹೇಳುತ್ತದೆ ಎಂಬುದನ್ನು ಪೊಲೀಸ್ ಇಲಾಖೆ ಸ್ಪಷ್ಟಪಡಿಸಬೇಕು. ರೈತರು, ಬೀಡಿ ಕಾರ್ಮಿಕರು ಅನ್ಯಾಯದ ವಿರುದ್ಧ ಬೀದಿಗಿಳಿಯುವುದಾದರೆ ಶುಲ್ಕ ಪಾವತಿಸಲು ಸಾಧ್ಯವೇ?

-ಮುನೀರ್ ಕಾಟಿಪಳ್ಳ, ರಾಜ್ಯಾಧ್ಯಕ್ಷರು ಡಿವೈಎಫ್‌ಐ

ರಾಜ್ಯ ಸರಕಾರ ಕಳೆದ ವರ್ಷದ ಅಂತ್ಯದಲ್ಲೇ ಸಭೆ-ಮೆರವಣಿಗೆಗೆ ಅನುಮತಿ ನೀಡುವ ಮುನ್ನ ನಿಗದಿತ ಶುಲ್ಕ ವಸೂಲಿ ಮಾಡಲು ಸೂಚಿಸಿದೆ. ಇದೀಗ ನಾವು ಅದನ್ನು ಅನುಷ್ಠಾನಗೊಳಿಸುತ್ತಿದ್ದೇವೆ. ಬೃಹತ್ ಪ್ರತಿಭಟನೆ, ಪಾದಯಾತ್ರೆಯ ಬಗ್ಗೆ ಇನ್ನೂ ಸ್ಪಷ್ಟ ಸೂಚನೆ ಬಂದಿಲ್ಲ. ಸರಕಾರದಿಂದ ಯಾವ ಸೂಚನೆ ಬರುತ್ತದೆಯೋ ಅದನ್ನು ಪಾಲಿಸಲಾಗುವುದು.

-ಟಿ.ಆರ್. ಸುರೇಶ್, ಆಯುಕ್ತರು, ಮಂಗಳೂರು ನಗರ ಪೊಲೀಸ್

ಅನ್ಯಾಯದ ವಿರುದ್ಧ ಪ್ರತಿಭಟನೆ, ಧರಣಿ, ಮೆರವಣಿಗೆ ನಡೆಸುವುದು ತಪ್ಪಲ್ಲ. ಆದರೆ, ಮಂಗಳೂರಿನಂತಹ ಸಂಚಾರ ದಟ್ಟಣೆಯ ನಗರದಲ್ಲಿ ಅದರಲ್ಲೂ ದ.ಕ.ಜಿಲ್ಲಾಧಿಕಾರಿ ಕಚೇರಿ, ಹಂಪನಕಟ್ಟೆ ಸಿಗ್ನಲ್ ಬಳಿ ಈ ಪ್ರತಿಭಟನೆ, ಮೆರವಣಿಗೆ, ವಾಹನ ರ್ಯಾಲಿ ನಡೆಸಿದರೆ ಅದರಿಂದ ಜನಸಾಮಾನ್ಯರಿಗೆ ತೊಂದರೆಯಾಗಲಿದೆ. ಹಾಗಾಗಿ ಜನದಟ್ಟಣೆಯಿಲ್ಲದ ಕಡೆ ಇಂತಹವುಗಳನ್ನು ಮಾಡಿದರೆ ಉತ್ತಮ ಎಂದು ಹೆಸರು ಹೇಳಲು ಇಚ್ಛಿಸದ ಸಂಚಾರ ವಿಭಾಗದ ಪೊಲೀಸ್ ಅಧಿಕಾರಿಯೊಬ್ಬರು ಅಭಿಪ್ರಾಯಪಡುತ್ತಾರೆ.

ಅನ್ಯಾಯದ ವಿರುದ್ಧ ದನಿ ಎತ್ತುವುದು ಸಾಂವಿಧಾನಿಕ ಹಕ್ಕು. ಅದನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಯಾವ ಕಾರಣಕ್ಕೆ ಪೊಲೀಸ್ ಇಲಾಖೆಯ ಮೂಲಕ ಸರಕಾರ ಇಂತಹ ನಿಯಮಗಳನ್ನು ಜಾರಿಗೊಳಿಸುತ್ತದೆ ಎಂಬುದರ ಬಗ್ಗೆ ಸ್ಪಷ್ಟಪಡಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಪೊಲೀಸ್ ಇಲಾಖೆಯು ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕಿತ್ತು. ಇದು ಖಂಡನೀಯ. ಇದರ ವಿರುದ್ಧ ಹೋರಾಟ ಅನಿವಾರ್ಯವಾಗಿದೆ.

-ಸುರೇಶ್ ಭಟ್ ಬಾಕ್ರಬೈಲ್, ಅಧ್ಯಕ್ಷರು, ಕರ್ನಾಟಕ ಕೋಮು ಸೌಹಾರ್ದ ವೇದಿಕೆ, ದ.ಕ.

ನಿಯಮ ಎಲ್ಲರಿಗೂ ಅನ್ವಯವಾಗಲಿದೆ. ಹಾಗಾಗಿ ಅಡ್ಡಹೊಳೆಯಿಂದ ಬಿ.ಸಿ.ರೋಡ್‌ಗೆ ಕಾಂಗ್ರೆಸ್ ಪಾದಯಾತ್ರೆ ನಡೆಸಿತ್ತು. ಗುರುವಾರ ಕದ್ರಿ ಮಲ್ಲಿಕಟ್ಟೆಯಲ್ಲೂ ಕಾಂಗ್ರೆಸ್ ಪ್ರತಿಭಟನೆ ನಡೆಸಿತ್ತು. ಪೊಲೀಸ್ ಇಲಾಖೆಯು ಅವರಿಂದಲೂ ಶುಲ್ಕ ವಸೂಲಿ ಮಾಡಿದೆಯೇ ಎಂಬುದನ್ನು ಬಹಿರಂಗಪಡಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಇಂಥದ್ದೊಂದು ನಿಯಮದ ಬಗ್ಗೆ ಪೊಲೀಸ್ ಇಲಾಖೆಯು ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಬೇಕಿತ್ತು. ಅದನ್ನೂ ಮಾಡದೆ ಏಕಾಎಕಿ ಶುಲ್ಕ ವಸೂಲಿ ಮಾಡಿದ್ದು ಸರಿಯಲ್ಲ.

-ಸಂತೋಷ್ ಬಜಾಲ್, ಕಾರ್ಯದರ್ಶಿ, ದ.ಕ.ಜಿಲ್ಲಾ ಡಿವೈಎಫ್‌ಐ

ಇದರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಒಂದು ವೇಳೆ ಪ್ರತಿಭಟನೆ, ಮೆರವಣಿಗೆ ಇತ್ಯಾದಿಗೆ ಶುಲ್ಕ ವಿಧಿಸಿದರೆ ಅದು ಅಕ್ಷಮ್ಯ. ಇದನ್ನು ವರಿಷ್ಠರ ಗಮನ ಸೆಳೆದು ಜನತೆಗೆ ನ್ಯಾಯ ದೊರಕಿಸಿಕೊಡಲಾಗುವುದು.

-ಹರೀಶ್ ಕುಮಾರ್, ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು

ನ್ಯಾಯ ಸಿಗದಿದ್ದಾ ಪ್ರತಿಭಟನೆ ನಡೆಸುವುದು, ಧರಣಿ ಮಾಡುವುದು ಸಹಜ. ಅದು ಸಂವಿಧಾನಬದ್ಧ ಹಕ್ಕು. ಸಾರ್ವಜನಿಕ ಸ್ಥಳಗಳಲ್ಲಿ ಖಾಸಗಿ ಸಭೆ, ಸಮಾರಂಭ, ಮೆರವಣಿಗೆ ನಡೆಸಲು ಶುಲ್ಕ ಪಾವತಿಸಬೇಕು ಎಂಬ ನಿಯಮ ಸರಿಯಲ್ಲ. ಇದು ಯಾವ ಸರಕಾರ ಜಾರಿಗೊಳಿಸಿದರೂ ಅಕ್ಷಮ್ಯ. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಗೃಹಸಚಿವರ ಗಮನ ಸೆಳೆಯಲಾಗುವುದು.

-ವಿಟ್ಲ ಮುಹಮ್ಮದ್ ಕುಂಞಿ, ಅಧ್ಯಕ್ಷರು, ದ.ಕ.ಜಿಲ್ಲಾ ಜಾತ್ಯತೀತ ಜನತಾ ದಳ

ಸರಕಾರ ದಿವಾಳಿಯಾಗಿದೆ ಎಂಬುದಕ್ಕೆ ಇದು ಸಾಕ್ಷಿ. ಅನ್ಯಾಯದ ವಿರುದ್ಧ ದನಿ ಎತ್ತುವುದು ಪ್ರಜಾಪ್ರಭುತ್ವದ ಜೀವಾಳವಾಗಿದೆ. ಸರಕಾರ ಇದೀಗ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕ ತಂದಿದೆ. ತಕ್ಷಣ ಈ ನಿರ್ಧಾರವನ್ನು ಕೈ ಬಿಡಬೇಕು. ಜನರ ದನಿ ಅಮುಕುವ ಪ್ರಯತ್ನವನ್ನು ಎಂದೂ ಮಾಡಬಾರದು.

-ಹರಿಕೃಷ್ಣ ಬಂಟ್ವಾಳ್, ವಕ್ತಾರರು, ದ.ಕ.ಜಿಲ್ಲಾ ಬಿಜೆಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News