2019ರಲ್ಲಿ ಸೌದಿಯಿಂದ ಮತ್ತಷ್ಟು ಅನಿವಾಸಿ ಭಾರತೀಯರು ಹೊರಕ್ಕೆ !

Update: 2019-01-18 11:15 GMT

ಮಂಗಳೂರು, ಜ.17: ಸೌದಿ ಅರೇಬಿಯಾದಲ್ಲಿ ತಲೆದೋರಿರುವ ಆರ್ಥಿಕ ಸ್ಥಿತ್ಯಂತರದ ಹಿನ್ನೆಲೆಯಲ್ಲಿ ಅನಿವಾಸಿ ಭಾರತೀಯರು ಸಂಕಷ್ಟದಲ್ಲಿದ್ದು, ಅಲ್ಲಿಂದ ಹಿಂತಿರುಗುತ್ತಿರುವ ಕುಟುಂಬಗಳಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಇಂಡಿಯನ್ ಸೋಶಿಯಲ್ ಫಾರಂ ಒತ್ತಾಯಿಸಿದೆ.

ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಫಾರಂ (ಕರ್ನಾಟಕ ರಾಜ್ಯ- ಪೂರ್ವ ಪ್ರಾಂತ್ಯ, ಸೌದಿ ಅರೇಬಿಯಾ)ನ ಕಾರ್ಯಕಾರಿ ಸಮಿತಿಯ ಸದಸ್ಯ ಮುಹಮ್ಮದ್ ಶರೀಫ್ ಮಾತನಾಡಿ, ಕಳೆದ ಮೂರು ವರ್ಷಗಳಲ್ಲಿ ಸೌದಿಯಿಂದ ಉದ್ಯೋಗ ಕಳೆದುಕೊಂಡು ಹಿಂತಿರುಗುತ್ತಿರುವ ಅನಿವಾಸಿ ಭಾರತೀಯರ ಸಂಖ್ಯೆ ಹೆಚ್ಚುತ್ತಿದ್ದು, ಈ ವರ್ಷ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ವರ್ಷ ಸೌದೀಕರಣಕ್ಕೆ ಮತ್ತೆ 41 ಕ್ಷೇತ್ರಗಳನ್ನು ಒಳಪಡಿಸಿದೆ. ಕುಟುಂಬದೊಂದಿಗೆ ವಾಸಿಸುವವರಿಗೆ ಲೇವಿ ಜಾರಿಗೊಳಿಸಿರುವುದರಿಂದ ಈ ಬಾರಿ ಸೌದಿಯಿಂದ ಹಿಂತಿರುಗುವವರ ಸಂಖ್ಯೆ ದುಪ್ಪಟ್ಟಾಗುವ ಲಕ್ಷಣಗಳು ಗೋಚರಿಸಿವೆ. ಈಗಾಗಲೇ ಸುಮಾರು 1500ರಷ್ಟು ಅನಿವಾಸಿ ಭಾರತೀಯ ಕುಟುಂಬಗಳು ಸೌದೀಕರಣದ ಸಮಸ್ಯೆಯಿಂದ ಹಿಂತಿರುಗಿದ್ದು, ಫಾರಂ ವತಿಯಿಂದ ಅಲ್ಲಿನ ಅನಿವಾಸಿ ಭಾರತೀಯ ಕನ್ನಡಿಗರ ಮೇಲೆ ಬೀರುತ್ತಿರುವ ಪರಿಣಾಮದ ಬಗ್ಗೆ ಅಂಕಿಅಂಶಗಳಿಂದ ಕೂಡಿದ ಅಧ್ಯಯನ ವರದಿಯನ್ನು ಸಿದ್ಧಪಡಿಸಲಾಗಿದೆ. ಇದನ್ನು ಶೀಘ್ರವೇ ಮುಖ್ಯಮಂತ್ರಿ ಆದಿಯಾಗಿ ಸಂಬಂಧಪಟ್ಟವರಿಗೆ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.

ಸೌದಿಯ ಅನಿವಾಸಿ ಕನ್ನಡಿಗರು ಕರ್ನಾಟಕದ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ನೀಡಿರುವ ಕೊಡುಗೆಯನ್ನು ಗೌರವಿಸಿ ಹಿಂತಿರುಗುತ್ತಿರುವ ಕುಟುಂಬಗಳಿಗೆ ಕೇರಳ ಮಾದರಿಯಲ್ಲಿ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಬೇಕು. ಕರ್ನಾಟಕದ ಎನ್‌ಆರ್‌ಐ ಫಾರಂ ನಿರೀಕ್ಷಿತ ಮಟ್ಟದಲ್ಲಿ ಕಾರ್ಯಾಚರಿಸುತ್ತಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಸೌದಿಯಿಂದ ಉದ್ಯೋಗ ಕಳೆದುಕೊಂಡು ಬರುವವರಿಗೆ ಅವರ ಕೌಶಲ್ಯ, ನೈಪುಣ್ಯವನ್ನು ಪರಿಗಣಿಸಿ ಸೂಕ್ತ ವಲಯದಲ್ಲಿ ಪ್ರಾತಿನಿಧ್ಯ ಒದಗಿಸಬೇಕು. ಸರಕಾರದ ವಿವಿಧ ಯೋಜನೆಗಳು ಸೌದಿಯಿಂದ ಹಿಂತಿರುಗುವ ಅರ್ಹ ಅನಿವಾಸಿ ಕನ್ನಡಿಗರಿಗೆ ಲಭ್ಯವಾಗಬೇಕು. ಅನಿವಾಸಿ ಕನ್ನಡಿಗರ ಮಕ್ಕಳ ಉನ್ನತ ಶಿಕ್ಷಣ ದಾಖಲಾತಿ ಸಂದರ್ಭ ಎನ್‌ಆರ್‌ಐಗಳಾಗಿ ಪರಿಗಣಿಸಿ ಅಧಿಕ ಶುಲ್ಕವನ್ನು ಪಡೆಯುವ ಬಗ್ಗೆ ಸರಕಾರ ಮಧ್ಯ ಪ್ರವೇಶಿಸಿ ಕ್ರಮ ಕೈಗೊಳ್ಳಬೇಕು. ಈ ಹಿಂದೆ ಸೌದಿಗೆ ಸುಮಾರು ಐದು ಸಾವಿರದಿಂದ 10 ಸಾವಿರದವರೆಗೆ ಇಲ್ಲಿನ ಯುವ ಜನರು ಉದ್ಯೋಗಕ್ಕಾಗಿ ಗಲ್ಫ್ ರಾಷ್ಟ್ರಗಳಿಗೆ ತೆರಳುತ್ತಿದ್ದರು. ಇದೀಗ ಸೌದಿಯಿಂದ ಹಿಂತಿರುಗುವವರ ಜತೆಗೆ ಈ ವಲಸೆ ಹೋಗುವ ಯುವ ಜನಾಂಗಕ್ಕೂ ಉದ್ಯೋಗವನ್ನು ಸೃಷ್ಟಿಸ ಬೇಕಾಗಿದೆ. ಈ ಎಲ್ಲಾ ಅಂಶಗಳನ್ನು ಅಧ್ಯಯನ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಅವರು ಹೇಳಿದರು.

ಗೋಷ್ಠಿಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾದ ಮುಹಮ್ಮದ್ ಬಶೀರ್, ಮುಹಮ್ಮದ್ ಅಶ್ಫಾಕ್, ಇಂಡಿಯನ್ ಶೋಶಿಯಲ್ ಫಾರಂ ಕುವೈತ್‌ನ ಮುಹಮ್ಮದ್ ರಫೀಕ್ ಉಪಸ್ಥಿತರಿದ್ದರು.

ಕೆಲ ಸಮಯದ ಹಿಂದೆ ಗಲ್ಫ್‌ನಿಂದ ಹಿಂದಕ್ಕೆ ಬರುತ್ತಿರುವ ಅನಿವಾಸಿ ಕನ್ನಡಿಗರಿಗೆ ಅದರಲ್ಲೂ ದ.ಕ. ಜಿಲ್ಲೆಯವರಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನೋಂದಾವಣೆ ಕಚೇರಿಯನ್ನು ತೆರೆಯುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ರವರು ಹೇಳಿಕೆ ನೀಡಿದ್ದರು. ಆದರೆ ನಾನು ಈ ಬಗ್ಗೆ ಪರಿಶೀಲಿಸಲು ಹೋದಾಗ ಅಲ್ಲಿ ಅಂತಹ ವ್ಯವಸ್ಥೆ ಇಲ್ಲವಾಗಿದೆ. ವಿದೇಶದಲ್ಲಿರುವ ಎನ್‌ಆರ್‌ಐಗಳ ಸಮರ್ಪಕ ಮಾಹಿತಿ ಕೂಡಾ ರಾಜ್ಯ ಸರಕಾರದ ಬಳಿ ಇಲ್ಲ.

- ಮುಹಮ್ಮದ್ ಶರೀಫ್, ಕಾರ್ಯಕಾರಿ ಸಮಿತಿ ಸದ್ಯರು, ಇಂಡಿಯನ್ ಸೋಶಿಯಲ್ ಫಾರಂ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News