'ದ.ಕ., ಉಡುಪಿ ಜಿಲ್ಲೆಯ ಸಹಕಾರಿ ಬ್ಯಾಂಕ್‌ಗಳು ಸದೃಢವಾಗಿ ಬೆಳೆಯಲು ಡಾ.ರಾಜೇಂದ್ರ ಕುಮಾರ್ ಕಾರಣ'

Update: 2019-01-18 12:36 GMT

ಮಂಗಳೂರು, ಜ.18: ಡಾ. ಎಂ.ಎನ್. ರಾಜೇಂದ್ರ ಕುಮಾರ್ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಬ್ಯಾಂಕ್‌ನ ಪ್ರತಿಯೊಂದು ವಿಭಾಗದಲ್ಲೂ ನಿರೀಕ್ಷೆಗೂ ಮೀರಿದ ಬದಲಾವಣೆಗಳನ್ನು ತಂದಿದ್ದಾರೆ. ಅವಿಭಜಿತ ದ.ಕ.ಜಿಲ್ಲೆಯ ಸಹಕಾರಿ ಸಂಘಗಳು ಸದೃಢವಾಗಿ ಬೆಳೆಯಲು ರಾಜೇಂದ್ರ ಕುಮಾರ್ ಅವರೇ ಪ್ರಮುಖ ಕಾರಣ. ಅಲ್ಲದೆ ಅವರ ಚಿಂತನೆಗಳು ಸಹಕಾರಿ ಕ್ಷೇತ್ರದ ಬೆಳೆವಣಿಗೆಗೆ ಪೂರಕವಾಗಿವೆ ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಮತ್ತು ಡಾ.ಎಂ.ಎನ್.ರಾಜೇಂದ್ರ ಕುಮಾರ್ ‘ರಜತ ಸಂಭ್ರಮ’ ಅಭಿನಂದನಾ ಸಮಿತಿಯ ಅಧ್ಯಕ್ಷ ಡಾ. ಬೆಳಪು ದೇವಿಪ್ರಸಾದ್ ಶೆಟ್ಟಿ ಹೇಳಿದ್ದಾರೆ.

ರಜತ ಸಂಭ್ರಮದ ಪೂರ್ವಭಾವಿಯಾಗಿ ನಗರದ ಕೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ ಶುಕ್ರವಾರ ನಡೆದ ಸಹಕಾರಿ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ರೈತ ವರ್ಗಕ್ಕೆ ಶಕ್ತಿ ನೀಡುವುದಕ್ಕಾಗಿ ಸಹಕಾರಿ ಕ್ಷೇತ್ರವನ್ನು ಹುಟ್ಟು ಹಾಕಲಾಗಿದೆ. ಮೊಳಹಳ್ಳಿ ಶಿವರಾಯ ಅವರಂತಹ ಸಹಕಾರಿಗಳು ದೂರದೃಷ್ಠಿಯಿಂದ ಹುಟ್ಟುಹಾಕಿದ ಕ್ಷೇತ್ರವು ಇಂದು ಬೃಹತ್ತಾಗಿ ಬೆಳೆದು ಕೃಷಿಕರಿಗೆ ಬೆನ್ನೆಲುಬಾಗಿ ನಿಂತಿದೆ. ಹಾಗಾಗಿ ಸಹಕಾರಿ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಿ ಮುಂದಿನ ಪೀಳಿಗೆಗೆ ಬಿಟ್ಟುಹೋಗುವ ಧ್ಯೇಯ ನಮ್ಮದಾಗಬೇಕು ಎಂದು ದೇವಿಪ್ರಸಾದ್ ಶೆಟ್ಟಿ ತಿಳಿಸಿದರು.

ದಿಕ್ಸೂಚಿ ಭಾಷಣ ಮಾಡಿದ ಹಿರಿಯ ಸಹಕಾರಿ ಎನ್.ಎಸ್.ಗೋಖಲೆ ಇಂದು ಸಹಕಾರಿ ಕ್ಷೇತ್ರಕ್ಕೆ ಆದಾಯ ತೆರಿಗೆಯೂ ಲಗ್ಗೆ ಇಟ್ಟಿದೆ. ಇದರ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಯಬೇಕು. ರಾಷ್ಟ್ರದಲ್ಲಿರುವ ಕೃಷಿ ಪತ್ತಿನ ಸಹಕಾರಿ ಸಂಘಗಳ ಪೈಕಿ ಪ್ರತಿಶತ 50ರಷ್ಟು ಸರಿಯಾಗಿ ನಡೆಯುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕೃಷಿ ಪತ್ತಿನ ಸಹಕಾರಿ ಸಂಘಗಳು ಭವಿಷ್ಯದಲ್ಲಿ ಏಜೆಂಟ್‌ಗಳಾಗುವ ಅಪಾಯ ಇದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ ಜಿಲ್ಲೆಯ ಸಹಕಾರಿ ಸಂಘಗಳ ನೂತನ ಕಟ್ಟಡ ನಿರ್ಮಾಣ, ಗಣಕೀಕರಣ ಆಧುನಿಕತೆಗೆ ಶೀಘ್ರವಾಗಿ ಸ್ಪಂದಿಸುವ ಗುಣವನ್ನು ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೊಂದಿದ್ದಾರೆ. ನಿರ್ಧಾರಗಳನ್ನು ಶೀಘ್ರ ಜಾರಿಯಾಗುವಂತೆ ಅವರು ಕ್ರಮ ವಹಿಸುತ್ತಿದ್ದರು ಎಂದರು.

ಪ್ರೊ.ಗೋಪಾಲ್, ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ, ಅಪೆಕ್ಸ್ ಬ್ಯಾಂಕ್ ನಿವೃತ್ತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಎಸ್.ನಾಗರಾಜಯ್ಯ ಮತ್ತು ದ.ಕ. ಜಿಲ್ಲಾ ಸಹಕಾರಿ ಯೂನಿಯನ್‌ನ ಅಧ್ಯಕ್ಷ ಹರೀಶ್ ಆಚಾರ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು.

ವೇದಿಕೆಯಲ್ಲಿ ಕೆಎಂಎಫ್ ಅಧ್ಯಕ್ಷ ರವಿರಾಜ ಹೆಗ್ಡೆ, ಸಹಕಾರ ಇಲಾಖೆಯ ಉಪ ನಿಬಂಧಕ ಸಲೀಂ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಬಿ.ನಿರಂಜನ್, ಇಂದ್ರಾಳಿ ಜಯಕರ ಶೆಟ್ಟಿ, ರಾಜು ಎಸ್.ಪೂಜಾರಿ, ಸುದರ್ಶನ ಜೈನ್, ಕೆ.ಎಸ್.ದೇವರಾಜ, ಡಿಸಿಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಪ್ರಭಾರ) ರವೀಂದ್ರ, ಹಿರಿಯ ಸಹಕಾರಿ ಸರಳಾ ಕಾಂಚನ್ ಉಪಸ್ಥಿತರಿದ್ದರು.

‘ರಜತ ಸಂಭ್ರಮ’ ಅಭಿನಂದನಾ ಸಮಿತಿಯ ಕಾರ್ಯಾಧ್ಯಕ್ಷ ಹಾಗೂ ಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಸ್ವಾಗತಿಸಿದರು. ಅಭಿನಂದನಾ ಸಮಿತಿಯ ಉಪಾಧ್ಯಕ್ಷ ಹಾಗೂ ಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಟಿ.ಜಿ.ರಾಜಾರಾಮ ಭಟ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News