'​ಪಾರ್ಕಿಂಗ್ ಉಲ್ಲಂಘಿಸಿ ಕಟ್ಟಡ ನಿರ್ಮಾಣದ ವಿರುದ್ಧ ಕ್ರಮ ಜರುಗಿಸದ ಮನಪಾ'

Update: 2019-01-18 12:51 GMT

ಮಂಗಳೂರು, ಜ.18: ನಗರದ ಕೆಲವು ವಾಣಿಜ್ಯ ಸಂಕೀರ್ಣ ಮತ್ತು ಬಹು ಮಹಡಿ ವಸತಿ ಕಟ್ಟಡಗಳಲ್ಲಿ ವಾಹನ ನಿಲುಗಡೆಗೆ ಕಾದಿರಿಸಿದ ತಳ ಅಂತಸ್ತಿನಲ್ಲಿ ವ್ಯಾಪಾರ ಮಳಿಗೆಗೆ ಅವಕಾಶ ಮಾಡಿಕೊಟ್ಟು ವಾಹನಗಳನ್ನು ರಸ್ತೆ ಬದಿ ನಿಲ್ಲಿಸಲಾಗುತ್ತಿದೆ. ಕಟ್ಟಡದ ಮೂಲ ಯೋಜನೆಯಲ್ಲಿ ಮಾತ್ರ ಪಾರ್ಕಿಂಗ್‌ಗೆ ಜಾಗ ತೋರಿಸಿ ಕಟ್ಟಡ ಕಾಮಗಾರಿ ಪೂರ್ತಿಯಾದ ಬಳಿಕ ನಿಯಮ ಉಲ್ಲಂಸಲಾಗುತ್ತಿದೆ. ಈ ಬಗ್ಗೆ ಕಠಿನ ಕ್ರಮ ಜರಗಿಸಬೇಕು ಎಂದು ಶುಕ್ರವಾರ ನಡೆದ 102ನೆ ಪೊಲೀಸ್ ಫೋನ್ ಇನ್ ಕಾರ್ಯಾಕ್ರಮದಲ್ಲಿ ಸಾರ್ವಜನಿಕರೊಬ್ಬರು ಆಗ್ರಹಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ನಿಯಮಗಳನ್ನು ಉಲ್ಲಂಸಿ ಪಾರ್ಕಿಂಗ್ ಜಾಗದಲ್ಲಿ ಅಂಗಡಿ ಮುಂಗಟ್ಟು ಗಳನ್ನು ತೆರೆದಿರುವ ನೂರಕ್ಕೂ ಹೆಚ್ಚು ಬಹುಮಹಡಿ ಕಟ್ಟಡಗಳ ಪಟ್ಟಿ ಮಾಡಿ ಕ್ರಮ ಜರಗಿಸುವಂತೆ ಪೊಲೀಸ್ ಇಲಾಖೆಯು ಮಹಾನಗರ ಪಾಲಿಕೆಗೆ ಸಲ್ಲಿಸಿದೆ. ಆದರೆ ಯಾವುದೇ ಕ್ರಮ ಆಗಿಲ್ಲ. ಇದೀಗ ಕದ್ರಿ ಮಲ್ಲಿಕಟ್ಟೆಯಲ್ಲಿಯೂ ನಿಯಮ ಉಲ್ಲಂಸಿದ ಕಟ್ಟಡದ ಬಗ್ಗೆ ಪರಿಶೀಲನೆ ನಡೆಸಿ ಪಾಲಿಕೆಗೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಕೊಲ್ಲೂರು, ಕುಂದಾಪುರ ಕಡೆಗೆ ಹೋಗುವ ಕೆಲವು ಖಾಸಗಿ ಬಸ್ಸುಗಳು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುವುದರಿಂದ ಪ್ರವಾಸಿ ವಾಹನಗಳಿಗೆ ಬಾಡಿಗೆ ಸಿಗದೆ ಸಮಸ್ಯೆಯಾಗುತ್ತಿದೆ ಎಂದು ಪ್ರವಾಸಿ ವಾಹನ ಮಾಲಕರ ಸಂಘದ ಪದಾಧಿಕಾರಿಯೊಬ್ಬರು ಆಕ್ಷೇಪಿಸಿದರು.

ಪ್ರಯಾಣಿಕರಿಗೆ ಬಸ್ಸು ಪ್ರಯಾಣವು ಅಗ್ಗದ ಸಾರಿಗೆ ವ್ಯವಸ್ಥೆ ಆಗಿರುವುದರಿಂದ ಜನರಿಗೆ ಅನುಕೂಲಕರವಾಗಿದೆ. ಅದಕ್ಕೆ ತಡೆಯುಂಟು ಮಾಡುವುದು ಸರಿಯಲ್ಲ. ರೈಲು ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬಸ್ಸುಗಳಿಗೆ ಪರವಾನಿಗೆ ಇಲ್ಲದಿದ್ದರೆ ಪರವಾನಿಗೆ ಪಡೆದು ಕಾರ್ಯಾಚರಿಸುವಂತೆ ಸೂಚಿಸಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದರಲ್ಲದೆ ಪರವಾನಿಗೆ ರಹಿತವಾಗಿ ಬಸ್ಸುಗಳು ಓಡಾಡುತ್ತಿದ್ದರೆ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ದೂರು ಸಲ್ಲಿಸಬಹುದು ಎಂದು ಸಲಹೆ ನೀಡಿದರು.

ಎಡಪದವು-ಕಿನ್ನಿಗೋಳಿ-ಮುಚ್ಚೂರು ಮಾರ್ಗದಲ್ಲಿ ಬೆಳಗ್ಗಿನ ಹೊತ್ತು ಬಸ್ಸುಗಳ ಸಂಖ್ಯೆ ಕಡಿಮೆ ಇರುವುದರಿಂದ ವಿದ್ಯಾರ್ಥಿಗಳಿಗೆ ಸಂಚಾರಕ್ಕೆ ಅನನುಕೂಲ ವಾಗುತ್ತಿದೆ ಎಂದು ನಾಗರಿಕರೊಬ್ಬರು ದೂರಿದರು. ಈ ಮಾರ್ಗದಲ್ಲಿ ಸರಕಾರಿ ಬಸ್ ಹಾಕುವ ಬಗ್ಗೆ ಕೆಎಸ್ಸಾರ್ಟಿಸಿಗೆ ಬರೆಯಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದರು.

ಕೂಳೂರು ಮತ್ತಿತರ ಕೆಲವು ಕಡೆಗಳಲ್ಲಿ ವಾಹನಗಳ ದಟ್ಟಣೆಯಿಂದ ಹಿರಿಯ ನಾಗರಿಕರಿಗೆ ರಸ್ತೆ ದಾಟಲು ಕಷ್ಟವಾಗುತ್ತಿದೆ ಎಂದು ಹಿರಿಯ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತರು ಹಿರಿಯ ನಾಗರಿಕರಿಗೆ ರಸ್ತೆ ದಾಟಿಸಲು ಸಹಾಯ ಮಾಡುವಂತೆ ಸ್ಥಳದಲ್ಲಿ ರುವ ಟ್ರಾಫಿಕ್ ಪೊಲೀಸರಿಗೆ ಸೂಕ್ತ ನಿರ್ದೇಶನ ನೀಡಲಾಗುವುದು ಎಂದರು.

ಮೂಡುಬಿದಿರೆ ಪೇಟೆಯ ರಸ್ತೆ ಬದಿ ಕೆಲವು ಕಡೆ ಚರಂಡಿಯೇ ಇಲ್ಲ, ಪುರಸಭೆಯ ಗಮನ ಸೆಳೆದರೆ ಚರಂಡಿ ನಿರ್ಮಾಣಕ್ಕೆ ಅನುದಾನ ಇಲ್ಲ ಎಂಬ ಹೇಳಿಕೆ ನೀಡುತ್ತಾರೆ. ಚರಂಡಿ ಇಲ್ಲದ ಕಾರಣ ಜನರಿಗೆ ಸಮಸ್ಯೆಯಾಗುತ್ತಿದೆ ಎಂದು ನಾಗರಿಕರೊಬ್ಬರು ತಿಳಿಸಿದರು. ಈ ಬಗ್ಗೆ ಮೂಡುಬಿದಿರೆ ಪುರಸಭೆಯ ಅಧಿಕಾರಿಗಳ ಗಮನ ಸೆಳೆಯಲಾಗುವುದು ಎಂದು ಪೊಲೀಸ್ ಆಯುಕ್ತರು ಭರವಸೆ ನೀಡಿದರು.

ಈ ಸಂದರ್ಭ ಡಿಸಿಪಿ ಉಮಾ ಪ್ರಶಾಂತ್, ಎಸಿಪಿ ಮಂಜುನಾಥ್ ಶೆಟ್ಟಿ, ಇನ್ಸ್‌ಸ್ಪೆಕ್ಟರ್‌ಗಳಾದ ಶಿವ ಪ್ರಕಾಶ್, ಅಮಾನುಲ್ಲಾ, ಗುರುದತ್ತ ಕಾಮತ್, ರವಿ ಪವಾರ್, ಎಎಸ್ಸೈ ಯೂಸುಫ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News