ಸುವರ್ಣ ತ್ರಿಭುಜ ಬೋಟು ಅವಘಡದ ಸುತ್ತ ಅನುಮಾನದ ಹುತ್ತ

Update: 2019-01-18 14:03 GMT

ಉಡುಪಿ, ಜ.18: ಕಳೆದ 34 ದಿನಗಳಿಂದ ನಾಪತ್ತೆಯಾಗಿರುವ ಸುವರ್ಣ ತ್ರಿಭುಜ ಬೋಟು ಅವಘಡಕ್ಕೀಡಾಗಿರಬಹುದೆ ಎಂಬ ಅನುಮಾನಗಳು ವ್ಯಕ್ತ ವಾಗಿದ್ದು, ಈ ಹಿನ್ನೆಲೆಯಲ್ಲಿ 25-30 ನಾಟಿಕಲ್ ಮೈಲ್ ದೂರದ ಸಮುದ್ರದ ಆಳದಲ್ಲಿ ನೌಕಾಪಡೆಯ ಸೋನಾರ್ ಉಪಕರಣ ಬಳಸಿ ಶೋಧ ಕಾರ್ಯಾ ಚರಣೆಯನ್ನು ನಡೆಸಲಾಗುತ್ತಿದೆ.

ಡಿ.13ರಂದು ಆಳ ಸಮುದ್ರ ಮೀನುಗಾರಿಕೆ ತೆರಳಿ ಡಿ.15ರ ರಾತ್ರಿಯಿಂದ ಸಂಪರ್ಕ ಕಡಿದುಕೊಂಡು ಕಣ್ಮರೆಯಾದ ಸುವರ್ಣ ತ್ರಿಭುಜ ಬೋಟು ಸಹಿತ ಏಳು ಮಂದಿ ಮೀನುಗಾರರ ಬಗ್ಗೆ ಡಿ. 22ರಂದು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಪೊಲೀಸರು ಎರಡು ಆಯಾಮಗಳಲ್ಲಿ ತನಿಖೆ ಯನ್ನು ಕೈಗೆತ್ತಿಕೊಂಡಿದ್ದರು.

ಬೋಟು ಸಹಿತ ಮೀನುಗಾರರ ಅಪಹರಣ ಅಥವಾ ಸಮುದ್ರ ಮಧ್ಯೆ ಬೋಟು ಅವಘಡಕ್ಕೀಡಾಗಿರುವ ಕುರಿತು ಪೊಲೀಸರು ತನಿಖೆ ನಡೆಸಿದ್ದರು. ಅಪಹರಣದ ತನಿಖೆಗಾಗಿ ಒಟ್ಟು ಆರು ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ಈ ತಂಡಗಳು ಕರ್ನಾಟಕ, ಗೋವಾ, ಮಹಾರಾಷ್ಟ್ರ, ಕೇರಳಕ್ಕೆ ತೆರಳಿ ಅಲ್ಲಿ ಹುಡುಕಾಟ ಹಾಗೂ ತನಿಖೆಯನ್ನು ನಡೆಸಿದ್ದವು.

ಈ ಕುರಿತು ಕೊಚ್ಚಿಯಿಂದ ಗುಜರಾತ್‌ವರೆಗೆ ಸಂಬಂಧಪಟ್ಟವರಿಗೆ ಮಾಹಿತಿ ರವಾನಿಸಲಾಗಿತ್ತು. ಪ್ರತಿ ಪೊಲೀಸ್ ತಂಡದಲ್ಲೂ ಇಬ್ಬರು-ಮೂವರು ಮೀನು ಗಾರರನ್ನು ಸೇರಿಸಿಕೊಂಡು ತನಿಖೆ ನಡೆಸಲಾಗಿತ್ತು. ಮೀನುಗಾರರು ಸಂಶಯ ವ್ಯಕ್ತಪಡಿಸಿದ ಎಲ್ಲ ಸ್ಥಳಗಳಲ್ಲೂ ತಂಡ ಬೋಟಿಗಾಗಿ ಶೋಧ ನಡೆಸಿತ್ತು. ಆದರೆ ಈವರೆಗೆ ಈ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲ ಪೊಲೀಸ್ ತಂಡಗಳು ಈಗಾಗಲೇ ಉಡುಪಿ ಜಿಲ್ಲೆಗೆ ವಾಪಾಸ್ಸಾಗಿವೆ.

ನೌಕಾಪಡೆ ಹಡಗಿನಿಂದ ಸುಳಿವು

ಈ ಮಧ್ಯೆ ಡಿ.15ರಂದು ಮಹಾರಾಷ್ಟ್ರದಿಂದ ಕಾರವಾರಕ್ಕೆ ಆಗಮಿಸಿರುವ ನೌಕಾಪಡೆಯ ಹಡಗಿನ ತಳಭಾಗಕ್ಕೆ ಹಾನಿಯಾಗಿರುವುದನ್ನು ನೌಕಾಪಡೆ ಕಂಡು ಕೊಂಡಿತ್ತು. ಇದು ಸಮುದ್ರದಲ್ಲಿ ಮುಳುಗಿರುವ ಬೋಟಿನ ಇಂಜಿನ್ ಅಥವಾ ಇತರ ಭಾಗಗಳು ತಾಗಿ ಉಂಟಾಗಿರುವ ಹಾನಿಯಂತೆ ಕಂಡುಬಂದಿದ್ದು, ಈ ಸಂಬಂಧ ನೌಕಾಪಡೆಯ ಅಧಿಕಾರಿಗಳು ಸಮುದ್ರ ಮಧ್ಯೆ ಬೋಟು ಅವಘಡ ಸಂಭವಿಸಿರುವ ಕುರಿತು ಮಹಾರಾಷ್ಟ್ರ ಕರಾವಳಿಗೆ ಸಂದೇಶ ಕಳುಹಿಸಿ ಮಾಹಿತಿ ಕೇಳಿತ್ತು.

ಇದಕ್ಕೆ ಪುಷ್ಠಿ ನೀಡುವಂತೆ ಜ.15ರಂದು ಮಹಾರಾಷ್ಟ್ರದ ಮೀನುಗಾರರಿಗೆ ಸಮುದ್ರ ಮಧ್ಯೆ ತೇಲುತ್ತಿದ್ದ ಎಸ್.ಟಿ. (ಸುವರ್ಣ ತ್ರಿಭುಜ) ಎಂದು ಬರೆಯಲಾದ ಎರಡು ಮೀನು ಹಾಕುವ ಪ್ಲಾಸ್ಟಿಕ್ ಬಾಕ್ಸ್‌ಗಳು ದೊರೆತಿದ್ದವು. ಅದೇ ರೀತಿ ಡಿ.18ರಂದು ಕೂಡ ಗೋವಾದ ಮಾಲ್ವನ್‌ನಲ್ಲಿಯೂ ಒಂದು ಬಾಕ್ಸ್ ಪತ್ತೆಯಾಗಿತ್ತು.

ಇದೀಗ ನೌಕಾಪಡೆಯ ಹಡಗಿಗೆ ಆಗಿರುವ ಹಾನಿಯು ಕಣ್ಮರೆಯಾಗಿರುವ ಸುವರ್ಣ ತ್ರಿಭುಜ ಬೋಟು ಅವಘಡ ಸಂಭವಿಸಿ ಆಗಿರಬಹುದೆ ಎಂಬ ಸಂಶಯದಲ್ಲಿ ಹುಡುಕಾಟ ನಡೆಸಲಾಗುತ್ತಿದೆ. ಅದಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನವಾದ ಸೋನಾರ್ ಬಳಕೆ ಮಾಡಲಾಗಿದ್ದು, ಜ.12ರಿಂದ ಸಮುದ್ರದ ಆಳದಲ್ಲಿ ಬೋಟಿಗಾಗಿ ಶೋಧ ಕಾರ್ಯವನ್ನು ನಿರಂತರವಾಗಿ ನಡೆಸಲಾಗುತ್ತಿದೆ ಎಂದು ಖಚಿತ ಮೂಲಗಳು ತಿಳಿಸಿವೆ.

ಸುವರ್ಣ ತ್ರಿಭುಜ ಬೋಟು ನಾಪತ್ತೆಯಾದ ಒಂದು ವಾರ (ಡಿ.15ರಂದು ನಾಪತ್ತೆಯಾಗಿದ್ದರೆ, ಡಿ.22ರಂದು ದೂರು ನೀಡಿರುವುದು)ದ ಬಳಿಕ ಪೊಲಿಸ್ ಠಾಣೆ, ಕೋರ್ಸ್ಟ್ ಗಾರ್ಡ್ ಹಾಗೂ ನೌಕಪಡೆಗಳಿಗೆ ಮಾಹಿತಿ ದೊರೆತಿದ್ದು, ದೂರು ನೀಡಲು ಆಗಿರುವ ವಿಳಂಬ ಕೂಡ ತನಿಖೆಗೆ ಅಡ್ಡಿಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಬೋಟಿನಲ್ಲಿ ತಾಂತ್ರಿಕ ದೋಷ ?

ಡಿ.13ರಂದು ಮಲ್ಪೆಯಿಂದ ಆಳ ಸಮುದ್ರ ಮೀನುಗಾರಿಕೆಗೆ ಇತರ ಆರು ಬೋಟುಗಳ ಜೊತೆ ಹೊರಟ ಸುವರ್ಣ ತ್ರಿಭುಜ ಬೋಟು ಸಮುದ್ರದಲ್ಲಿ ಸ್ವಲ್ಪವೇ ದೂರ ಸಾಗುತ್ತಿದ್ದಂತೆ ತಾಂತ್ರಿಕ ದೋಷದಿಂದ ಅರ್ಧದಲ್ಲೇ ಮಲ್ಪೆ ಬಂದರಿಗೆ ಮರಳಿತ್ತೆನ್ನಲಾಗಿದೆ.

ನಂತರ ದುರಸ್ತಿ ಕಾರ್ಯ ನಡೆಸಿ ಹೊರಟ ಸುವರ್ಣ ತ್ರಿಭುಜ ಬೋಟು, ಉಳಿದ ಆರು ಬೋಟುಗಳಿಗಿಂತ ಎರಡು ಗಂಟೆ ಮುಂದೆ ಸಾಗಿತ್ತು. ಹೀಗೆ ನಿರಂತರ ಚಾಲನೆಯಿಂದ ಬೋಟಿನ ರೇಡಿಯೆಟರ್ ಬಿಸಿಯಾಗಿ ಅವಘಡ ಸಂಭವಿಸಿರಬಹುದೆಂಬ ಶಂಕೆಗಳು ಕೂಡ ವ್ಯಕ್ತವಾಗುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News