ಕಾಂಗ್ರೆಸ್ ನಾಯಕರು ಜವಾಬ್ದಾರಿಯುತವಾಗಿ ಮಾತಾಡಲಿ: ಕೋಟ

Update: 2019-01-18 14:25 GMT

ಉಡುಪಿ, ಜ.18: ಕರ್ನಾಟಕದಲ್ಲಿ ಆಪರೇಷನ್ ಕಮಲ ಮಾಡಿರುವುದಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾಗೆ ಹಂದಿ ಜ್ವರ ಬಂದಿದೆ ಎಂಬ ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಕಾಂಗ್ರೆಸ್ ನಾಯಕರು ಜಾಬ್ದಾರಿಯುತವಾಗಿ ಮಾತಾಡಲಿ ಎಂದರು.

ಉಡುಪಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಂದಿಜ್ವರ -ಮಂಗನಕಾಯಿಲೆ ಬಗ್ಗೆ ನಾನು ಚರ್ಚೆ ಮಾಡಲ್ಲ, ಬಿ.ಕೆ ಹರಿ ಪ್ರಸಾದ್ ಹಿರಿಯ ರಾಜಕಾರಣಿ. ಅವರ ಮಾತಿನ ಮೇಲೆ ನಿಗಾ ಇರಲಿ. 104 ಇದ್ದ ಬಿಜೆಪಿಯವರು ಈಗ 106 ಆಗಿದ್ದೇವೆ. ನಿಮ್ಮ ಶಾಸಕರನ್ನು ನೀವು ಗಟ್ಟಿಯಾಗಿ ಹಿಡಿದುಕೊಳ್ಳುವ ಕೆಲಸ ಮಾಡಿ. ಇಲ್ಲದಿದ್ದರೆ 106 ಇದ್ದದ್ದು 115 ಆಗಬಹುದು. ಅದಕ್ಕೆ ನೀವೇ ಹೊಣೆ ಎಂದು ತಿಳಿಸಿದರು.

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ವಿಚಾರದ ಕುರಿತ ಪ್ರಶ್ನೆಗೆ, ಕಾಂಗ್ರೆಸ್ ತನ್ನ ಪಕ್ಷದ ಶಾಸಕರನ್ನು ಭದ್ರ ಮಾಡಿಕೊಳ್ಳಬೇಕು. ಅವರಿಗೆ ಅವರದ್ದೆ ಶಾಸಕರ ಬಗ್ಗೆ ಅನುಮಾನ ಇದೆ. ಸಭೆಯಲ್ಲಿ ಏನೇನಾಗುತ್ತದೆಯೋ ಎಂಬುದು ಮುಂದೆ ನೋಡೋಣ ಎಂದು ಅವರು ಹೇಳಿದರು.

ಆಪರೇಷನ್ ಕಮಲ ಠುಸ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಹೇಳಿಕೆಗೆ ಅರ್ಥವೇ ಇಲ್ಲ. ನಾವು ಲೋಕಸಭಾ ಚುನಾವಣೆ ಬಗ್ಗೆ ಚರ್ಚೆ ಮಾಡಿದ್ದೇವೆ. ಕರ್ನಾಟಕದಲ್ಲಿ ಕುಳಿತ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿಗೆ ಆಪರೇಷನ್ ಕಮಲ ಭೀತಿ ಎದುರಾಗಿದೆ. ಅವರಿಬ್ಬರ ಮರು ಆಪರೇಷನ್ ಹೇಳಿಕೆ ಬಗ್ಗೆಯೂ ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News