ದ.ಕ.ಕೃಷಿ ಅಭಿವೃದ್ಧಿ ಸಹಕಾರಿ ಸಂಘದ ಪ್ರಧಾನ ಕಚೇರಿ ಸ್ಥಳಾಂತರ

Update: 2019-01-18 14:28 GMT

ಮಂಗಳೂರು, ಜ.18: ದಕ್ಷಿಣ ಕನ್ನಡ ಕೃಷಿ ಅಭಿವೃದ್ಧಿ ಸಹಕಾರಿ ಸಂಘಕ್ಕೆ ಹಿರಿಯರು ಭದ್ರ ಬುನಾದಿಯನ್ನು ಹಾಕಿಕೊಟ್ಟಿದ್ದಾರೆ. ಅವರ ಹಾದಿಯಲ್ಲಿ ಮುನ್ನಡೆದು ರಾಷ್ಟ್ರದಲ್ಲಿ ಮಾದರಿ ಸಂಸ್ಥೆಯಾಗಿ ಬೆಳೆಯಲು ಎಲ್ಲರೂ ಸಹಕರಿಸಬೇಕು ಎಂದು ಎಸ್‌ಸಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.

ದಕ್ಷಿಣ ಕನ್ನಡ ಕೃಷಿ ಅಭಿವೃದ್ಧಿ ಸಹಕಾರಿ ಸಂಘದ ಪ್ರಧಾನ ಕಚೇರಿಯನ್ನು ನಗರದ ಕೆ.ಎಸ್.ರಾವ್ ರಸ್ತೆಯಲ್ಲಿರುವ ಎಸ್‌ಸಿಡಿಸಿಸಿ ಬ್ಯಾಂಕ್ ಕಟ್ಟಡದ 5ನೇ ಮಹಡಿಯ ‘ಸದಾಶಿವ ಸಹಕಾರ ಸದನ’ಕ್ಕೆ ಸ್ಥಳಾಂತರ ಹಾಗೂ ನವೀಕೃತ ಕಚೇರಿಯನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲಾ ಸಹಕಾರಿ ಬ್ಯಾಂಕ್ ಹಾಗೂ ಕೃಷಿ ಸಹಕಾರಿ ಸಂಘ ಸಹೋದರರಂತೆ ಜತೆಯಾಗಿ ಬೆಳೆದು ಬಂದ ಸಂಸ್ಥೆಗಳಾಗಿವೆ. ಹಾಗಾಗಿ ಬ್ಯಾಂಕ್‌ನಿಂದ ಪೂರ್ಣ ಸಹಕಾರ ನೀಡಲಾಗುವುದು. ಆ ಮೂಲಕ ಜನರಿಗೆ ಉತ್ತಮ ಸೇವೆ ಇನ್ನಷ್ಟು ಸಿಗಬೇಕು ಎಂದು ಡಾ.ಎಂ.ಎನ್.ರಾಜೇಂದ್ರ ಕುಮಾರ್ ನುಡಿದರು.

ಟ್ರೆಹರಿ ಉದ್ಘಾಟಿಸಿದ ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಕೃಷಿಯಲ್ಲಿ ಯಂತ್ರೋಪಕರಣಗಳ ಅಳವಡಿಕೆಯ ಉದ್ದೇಶದಿಂದ ಸ್ಕಾಡ್ಸ್ ಸಂಸ್ಥೆ 1962ರಲ್ಲಿ ಆರಂಭಗೊಂಡು ಕೃಷಿಕರ ಮನೆ ಮಾತಾಗಿತ್ತು. ಜಿಲ್ಲೆಯ ಬೆಳವಣಿಗೆಗೆ ಸಹಕಾರ ಕ್ಷೇತ್ರದ ಕೊಡುಗೆ ಮಹತ್ತರವಾಗಿದೆ ಎಂದರು.

ಈ ಸಂದರ್ಭ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಕೆಎಂಎಫ್ ಅಧ್ಯಕ್ಷ ರವಿರಾಜ್ ಹೆಗ್ಡೆ ಕೊಡವೂರು, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಹರೀಶ್ ಆಚಾರ್, ಡಾ.ಎಂ.ಎನ್.ರಾಜೇಂದ್ರ ಕುಮಾರ್ ರಜತ ಸಂಭ್ರಮ ಸಮಿತಿಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಸ್ಕಾಡ್ಸ್ ಕಾರ್ಯದರ್ಶಿ ಕಾಶೀನಾಥ್, ವ್ಯವಸ್ಥಾಪಕ ಅರವಿಂದ ಶೆಟ್ಟಿ, ಇಲಾಖೆಯ ಅಧಿಕಾರಿ ಮಂಜುನಾಥ್ ಉಪಸ್ಥಿತರಿದ್ದರು.

ಸ್ಕಾಡ್ಸ್ ಅಧ್ಯಕ್ಷ ಕೆ.ರವೀಂದ್ರ ಕಂಬಳಿ ಸ್ವಾಗತಿಸಿದರು. ಉಪಾಧ್ಯಕ್ಷ ಸಿ.ಅಶೋಕ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News