ವಾಹನ ದಟ್ಟಣೆ ನಿಯಂತ್ರಿಸಲು ಪಡೆದುಕೊಳ್ಳುವ ಸೇವೆಗೆ ಶುಲ್ಕ ವಸೂಲಿ: ಟಿ.ಆರ್.ಸುರೇಶ್

Update: 2019-01-18 14:35 GMT

ಮಂಗಳೂರು, ಜ.18: ನಗರದಲ್ಲಿ ಯಾವುದೇ ಖಾಸಗಿ ಸಭೆ, ಸಮಾರಂಭ, ಮೆರವಣಿಗೆ ನಡೆಸುವುದಾದರೆ ಧ್ವನಿವರ್ಧಕ ಅನುಮತಿಯೊಂದಿಗೆ ವಾಹನ ದಟ್ಟಣೆಯನ್ನು ನಿಯಂತ್ರಿಸಲು ಸಂಚಾರ ಪೊಲೀಸರು ನೀಡುವ ಸೇವೆಗೆ ಶುಲ್ಕ ವಿಧಿಸಲು ರಾಜ್ಯ ಸರಕಾರ ನಿರ್ಧರಿಸಲಾದ ನಿಯಮವನ್ನು ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಜಾರಿಗೊಳಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್ ತಿಳಿಸಿದ್ದಾರೆ.

ನಗರದ ಕಮಿಷನರೇಟ್ ಕಚೇರಿಯಲ್ಲಿ ಶುಕ್ರವಾರ ಮಾಧ್ಯಮದ ಜತೆಗೆ ಮಾತನಾಡಿದ ಅವರು ರಾಜ್ಯ ಸರಕಾರ 2018ರ ಅ.9ರ ಕರ್ನಾಟಕ ವಿಧಾನ ಸೌಧದ ಸಚಿವಾಲಯ ಬೆಂಗಳೂರು ನೀಡಿರುವ ಆದೇಶದಂತೆ ಈ ನಿಯಮ ಜಾರಿಗೆ ಬಂದಿದೆ. ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಇದನ್ನು ಜಾರಿಗೆ ತರಲಾಗಿದ್ದು, ಈಗಾಗಲೇ ಹಲವು ಕಾರ್ಯಕ್ರಮಗಳಿಗೆ ಶುಲ್ಕ ಪಾವತಿಸಿ ಅನುಮತಿ ನೀಡಲಾಗಿದೆ ಎಂದರು.

ಯಾವ್ಯಾವ ಕಾರ್ಯಕ್ರಮಕ್ಕೆ ಎಷ್ಟು?: ಧ್ವನಿವರ್ಧಕ ಅಳವಡಿಸಿದರೆ ದಿನಕ್ಕೆ 75 ಹಾಗೂ ಅದಕ್ಕೆ ಹೆಚ್ಚುವರಿ ದಿನ ಸೇರ್ಪಡೆಯಾದರೆ ತಲಾ 15 ರೂ. ಪಾವತಿಸಬೇಕು. ಶಾಂತಿಯುತ ಸಭೆ, ಮೆರವಣಿಗೆಗೆ ಅನುಮತಿ ಪಡೆಯಬೇಕಾದರೆ 500ರೂ., ವಸತಿ ಪ್ರದೇಶದಲ್ಲಿ ಕಾರ್ಯಕ್ರಮದ ಅನುಮತಿಗಾಗಿ 50 ರೂ., ಪೆಟ್ರೋಲ್, ಗ್ಯಾಸ್, ಬಾರ್ ನಿರಕ್ಷೇಪಣಾ ಪತ್ರಕ್ಕೆ 50 ಸಾವಿರ ರೂ., ಹೊರಾಂಗಣದಲ್ಲಿ ನಡೆಯುವ ಕ್ರೀಡೆ ಹಾಗೂ ಮತ್ತಿತರ ಕಾರ್ಯಕ್ರಮಕ್ಕೆ ಪೊಲೀಸ್ ಸಹಕಾರ ಬಯಸಿದರೆ 50 ಸಾವಿರ ರೂ., ಒಳಾಂಗಣ ಕ್ರೀಡಾ ಕಾರ್ಯಕ್ರಮಕ್ಕೆ 40 ಸಾವಿರ ರೂ., ಹೊರಾಂಗಣ ವಸ್ತು ಪ್ರದರ್ಶನಕ್ಕೆ 25 ಸಾವಿರ ರೂ., ಒಳಾಂಗಣ ವಸ್ತು ಪ್ರದರ್ಶನಕ್ಕೆ 20 ಸಾವಿರ ರೂ., ನಗರ ಪ್ರದೇಶದಲ್ಲಿ ರಾಜಕೀಯ, ಖಾಸಗಿ ಕಾರ್ಯಕ್ರಮಕ್ಕೆ 20 ಸಾವಿರ ರೂ., ಗ್ರಾಮಾಂತರ ಪ್ರದೇಶದಲ್ಲಿ ರಾಜಕೀಯ, ಖಾಸಗಿ ಕಾರ್ಯಕ್ರಮಕ್ಕೆ 10 ಸಾವಿರ ರೂ. ಶುಲ್ಕ ಕಟ್ಟಬೇಕೆಂದು ನಿಯಮದಲ್ಲಿ ತಿಳಿಸಲಾಗಿದೆ. ಈ ಮೊತ್ತವು ಪೊಲೀಸ್ ಇಲಾಖೆಯ ರಾಜಸ್ವ ಜಮೆಯ ಲೆಕ್ಕ ಶೀರ್ಷಿಕೆಯಡಿ ಜಮೆ ಮಾಡಲು ಸೂಚನೆ ನೀಡಲಾಗಿದೆ ಎಂದು ಟಿ.ಆರ್. ಸುರೇಶ್ ಹೇಳಿದರು.

ಸಮಾವೇಶಕ್ಕೆ ಪಾರ್ಕಿಂಗ್ ವ್ಯವಸ್ಥೆ: ನಗರದ ನೆಹರೂ ಮೈದಾನದಲ್ಲಿ ಶನಿವಾರ ನಡೆಯುವ ಸಮಾವೇಶ ದೃಷ್ಟಿಯಿಂದ ನಾನಾ ಕಡೆ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಬರುವ ಬಸ್‌ಗಳಿಗೆ ಗೋಲ್ಡ್ ಪಿಂಚ್ ಸಿಟಿ, ಎಮ್ಮೆಕೆರೆ, ರಾಮಕೃಷ್ಣ ಶಾಲೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಕಾರು ಹಾಗೂ ವಿಐಪಿಗಳಿಗೆ ನಗರದ ಪುರಭವನ, ಯುನಿವರ್ಸಿಟಿ ಗ್ರೌಂಡ್, ಶಾಂತಿವನ, ಅಲೋಶಿಯಸ್ ಗ್ರೌಂಡ್, ಕದ್ರಿ ಗ್ರೌಂಡ್‌ನಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News