ಉಡುಪಿ: ಯಕ್ಷ ಕಲಾವಿದರಿಗೆ ಪ್ರಶಸ್ತಿ ಪ್ರದಾನ

Update: 2019-01-18 14:53 GMT

ಉಡುಪಿ, ಜ.18: ಅಂಬಲಪಾಡಿ ಶ್ರೀಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾಮಂಡಳಿಯ 61ನೇ ವಾರ್ಷಿಕೋತ್ಸವ ಮತ್ತು ಯಕ್ಷಗಾನ ಕಲಾವಿದರಿಗೆ ಪ್ರಶಸ್ತಿ ಪ್ರದಾನ ಸಮಾರಂ ಜ.19 ಮತ್ತು 20ರಂದು ದೇವಳದ ವಠಾರದಲ್ಲಿ ನಡೆಯಲಿದೆ ಎಂದು ಕಲಾಮಂಡಳಿಯ ಅಧ್ಯಕ್ಷ ಮುರಲಿ ಕಡೇಕಾರ್ ತಿಳಿಸಿದ್ದಾರೆ.

ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.19ರಂದು ಸಂಜೆ 6:30ಕ್ಕೆ ಸಂಸ್ಥೆಯ 61ನೇ ವಾರ್ಷಿಕೋತ್ಸವ ನಡೆಯಲಿದ್ದು ಮೂವರು ಕಲಾವಿದರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಧರ್ಮದರ್ಶಿ ಡಾ. ನಿ.ಬೀ. ವಿಜಯ ಬಲ್ಲಾಳರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಹಿರಿಯ ಸಾಂಸ್ಕತಿಕ ಸಾಹಿತ್ಯಿಕ ಸಂಘಟಕ ಮಲ್ಪೆ ಬಾಲಕೃಷ್ಣ ಸಾಮಗ ವಹಿಸಲಿದ್ದಾರೆ ಎಂದರು.

ಸಂಸ್ಥೆಯ ಮೂವರು ಹಿರಿಯರ ನೆನಪಿನಲ್ಲಿ ಕೊಡುವ ಕಿದಿಯೂರು ಜನಾರ್ದನ ಆಚಾರ್ಯ ಪ್ರಶಸ್ತಿಯನ್ನು ನಲ್ಲೂರು ಜನಾರ್ದನ ಆಚಾರ್ಯ, ಕಪ್ಪೆಟ್ಟು ಬಾಬು ಶೆಟ್ಟಿಗಾರ್ ಪ್ರಶಸ್ತಿಯನ್ನು ಕಪ್ಪೆಟ್ಟು ವ್ಯಾಸ ಭಟ್ ಹಾಗೂ ಕುತ್ಪಾಡಿ ಆನಂದ ಗಾಣಿಗ ಪ್ರಶಸ್ತಿಯನ್ನು ಬೆಲ್ತೂರು ರಮೇಶ್ ಸ್ವೀಕರಿಸಲಿದ್ದಾರೆ. ಮಂಡಳಿಯ ಬಾಲ ಕಲಾವಿದರಿಂದ ಸಂಜೆ 6 ಕ್ಕೆ ಪೂರ್ವರಂಗ ಹಾಗೂ ರಾತ್ರಿ 7:30ರಿಂದ ಸುಧನ್ವಾರ್ಜುನ ಕಾಳಗ ಯಕ್ಷಗಾನ ಪ್ರಸ್ತುತಗೊಳ್ಳಲಿದೆ.

ಜ.20ರಂದು ಸಂಜೆ 6:30ರಿಂದ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದ ಅಧ್ಯಕ್ಷ ಎ.ಎಸ್.ಎನ್.ಹೆಬ್ಬಾರರ ಅಧ್ಯಕ್ಷತೆಯಲ್ಲಿ ನಿಡಂಬೂರು ಬೀಡು ಅಣ್ಣಾಜಿ ಬಲ್ಲಾಳರ ಸ್ಮರಣಾರ್ಥ ನೀಡುವ ‘ನಿಡಂಬೂರುಬೀಡು ಬಲ್ಲಾಳ ಪ್ರಶಸ್ತಿ’ಯನ್ನು ಉಡುಪಿಯ ಹಿರಿಯ ಸಾಂಸ್ಕೃತಿಕ ಸಂಘಟನೆ ‘ಸಮೂಹ’ ಸಂಸ್ಥೆಗೆ ಪ್ರದಾನ ಮಾಡಲಾಗುವುದು. ಅತಿಥಿಗಳಾಗಿ ಪ್ರೊ.ಉದ್ಯಾವರ ಮಾಧವ ಆಚಾರ್ಯ, ಆರ್. ಚಂದ್ರಶೇಖರ್, ಶ್ರೀಧರ ಡಿ.ಎಸ್ ಮತ್ತು ಡಾ. ಸುನಿಲ್ ಸಿ. ಮುಂಡ್ಕೂರ್ ಭಾಗವಹಿಸುವರು. ಸಂಜೆ 6:00ರಿಂದ ಮಂಡಳಿಯ ಬಾಲ ಕಲಾವಿದರಿಂದ ಹೂವಿನ ಕೋಲು ಹಾಗೂ 7:30ರಿಂದ ಮಂಡಳಿಯ ಸದಸ್ಯರಿಂದ ಹಿಡಿಂಬಾ ವಿವಾಹ-ಅಂಗಾರವರ್ಮ ಕಾಳ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ಶಿಲಾನ್ಯಾಸ: ಜ.20ರ ರವಿವಾರ ಬೆಳಗ್ಗೆ 9:30ಕ್ಕೆ ಅಂಬಲಪಾಡಿ ಕಂಬಳಕಟ್ಟ ದಲ್ಲಿ ಸುಮಾರು 35 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾಗುವ ಮಂಡಳಿಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಲಿದೆ. ಡಾ.ನಿ.ಬೀ ವಿಜಯ ಬಲ್ಲಾಳರ ಅಧ್ಯಕ್ಷತೆಯಲ್ಲಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಅಧ್ಯಕ್ಷ ಡಾ. ಜಿ. ಶಂಕರ್ ಶಿಲಾನ್ಯಾಸ ನೇರವೇರಿಸಲಿದ್ದಾರೆ ಎಂದು ಮುರಲಿ ಕಡೆಕಾರ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಂಡಳಿಯ ಕೆ.ಜೆ.ಕೃಷ್ಣ, ನಟರಾಜ್ ಉಪಾಧ್ಯ, ಕೆ.ಜೆ. ಗಣೇಶ್ ಹಾಗೂ ಪ್ರವೀಣ್ ಉಪಾಧ್ಯ ಉಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News