ಉದ್ಯಾವರದಲ್ಲಿ ಗ್ಯಾಸ್ ಇನ್ಸುಲೆಟೆಡ್ ಸಬ್‌ಸ್ಟೇಷನ್ ಸ್ಥಾಪನೆ: ನರಸಿಂಹ ಪಂಡಿತ್

Update: 2019-01-18 15:21 GMT

ಉಡುಪಿ, ಜ.18: ಉದ್ಯಾವರದಲ್ಲಿ ಆಧುನಿಕ ತಂತ್ರಜ್ಞಾನ ಹಾಗೂ ಕಡಿಮೆ ಸ್ಥಳಾವಕಾಶದಲ್ಲಿ ಸ್ಥಾಪಿಸಬಹುದಾದ ಗ್ಯಾಸ್ ಇನ್ಸುಲೆಟೆಡ್ ಸಬ್‌ಸ್ಟೇಷನ್‌ಗಾಗಿ ಪ್ರಸ್ತಾವನೆ ಕಳುಹಿಸಲಾಗಿದ್ದು, ಅದಕ್ಕೆ ಇಲಾಖೆಯಿಂದ ತಾಂತ್ರಿಕ ಅನುಮೋದನೆ ದೊರೆತಿದೆ ಎಂದು ಉಡುಪಿ ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ಹಾಗೂ ಮೆಸ್ಕಾಂ ಒಂಬುಡ್ಸ್‌ಮನ್ ಅಧ್ಯಕ್ಷ ನರಸಿಂಹ ಪಂಡಿತ್ ತಿಳಿಸಿದ್ದಾರೆ.

ಉಡುಪಿ ಬಳಕೆದಾರರ ವೇದಿಕೆಯ ವತಿಯಿಂದ ವೇದಿಕೆಯ ಕಚೇರಿಯಲ್ಲಿ ಶುಕ್ರವಾರ ನಡೆದ ಮುಖಾಮುಖಿ ಕಾರ್ಯಕ್ರಮದಲ್ಲಿ ಅವರು ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸಿದರು.

ಉಡುಪಿ, ಮಲ್ಪೆ, ನಿಟ್ಟೂರು, ಮಣಿಪಾಲ, ಕುಂಜಿಬೆಟ್ಟುವಿನ ವಿದ್ಯುತ್ ಉಪಕೇಂದ್ರಗಳನ್ನು ಜೋಡಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಈ ಮೂಲಕ ಒಂದು ಉಪಕೇಂದ್ರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾದರೂ ಇನ್ನೊಂದು ಉಪಕೇಂದ್ರದಿಂದ ವಿದ್ಯುತ್ ಸರಬರಾಜು ಮಾಡುವ ಹೊಸ ವ್ಯವಸ್ಥೆಯನ್ನು ಆಳವಡಿಸಲಾಗುತ್ತಿದೆ ಎಂದರು.

ನಿಟ್ಟೂರು, ಮಣಿಪಾಲ ಮತ್ತು ಕುಂಜಿಬೆಟ್ಟುಗಳಲ್ಲಿ ಈಗಾಗಲೇ ಉಪಕೇಂದ್ರ ಗಳಿದ್ದು, ಮಲ್ಪೆಯ ಉಪಕೇಂದ್ರದ ಕಾಮಗಾರಿ ಪ್ರಗತಿಯಲ್ಲಿದೆ. ಮೆಸ್ಕಾಂ ಉಡುಪಿ ವಿಭಾಗೀಯ ಕಚೇರಿಯಲ್ಲಿ ಸ್ಥಾಪಿಸಲಾಗುವ ಉಪಕೇಂದ್ರವು ಸದ್ಯ ಟೆಂಡರ್ ಹಂದಲ್ಲಿದೆ ಎಂದು ಅವರು ಹೇಳಿದರು.

ಮೆಸ್ಕಾಂನಲ್ಲಿ ಸಿಬ್ಬಂದಿಗಳ ಕೊರತೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ವರ್ಷ ಮೆಸ್ಕಾಂ ರಾಜ್ಯದಲ್ಲಿ 16ಸಾವಿರ ಲೈನ್‌ಮೆನ್‌ಗಳನ್ನು ನೇಮಕ ಮಾಡಿ ಕೊಂಡಿದ್ದು, ಜನಸಂಖ್ಯೆ ಏರಿಕೆ ಪರಿಣಾಮ ಗ್ರಾಹಕರಿಂದ ಹೊಸ ಹೊಸ ನಿರೀಕ್ಷೆ ಹುಟ್ಟಿಕೊಳ್ಳುತ್ತಿವೆ. ಈ ವರ್ಷ ಮತ್ತೆ ಸಿಬ್ಬಂದಿಗಳ ನೇಮಕಾತಿಯನ್ನು ಮಾಡಿ ಕೊಳ್ಳಲಾಗುವುದು ಎಂದು ತಿಳಿಸಿದರು.

ಕೇವಲ ಕಲ್ಲಿದಲು ಆಧಾರಿತ ವಿದ್ಯುತ್ ಮಾತ್ರವಲ್ಲದೆ ಇತರ ಮೂಲ ಗಳಿಂದಲೂ ವಿದ್ಯುತ್ ಪಡೆದುಕೊಳ್ಳಲಾಗುತ್ತಿದೆ. ಈ ವರ್ಷ ಕರ್ನಾಟಕ ರಾಜ್ಯ 4000 ಮೆಗಾವ್ಯಾಟ್ ಪವನ ಹಾಗೂ ಸೌರ ವಿದ್ಯುತ್‌ನ್ನು ಉತ್ಪಾದಿಸಿದೆ. ಇಂದು ವಿದ್ಯುತ್ ಎಂಬುದು ಮಾರ್ಕೆಟ್ ಎಂಬಂತೆ ಆಗಿದೆ. ಮುಂದಿನ ವರ್ಷಕ್ಕೆ ಬೇಕಾದ ವಿದ್ಯುತ್‌ನ್ನು ಈ ವರ್ಷವೇ ಬುಕ್ ಮಾಡಿ ಇಡು ಪ್ರಮೇಯ ಎದುರಾಗಿದೆ ಎಂದರು.

ವಿದೇಶಗಳಲ್ಲಿ ಇಲ್ಲದ ಬೇರೆ ಬೇರೆ ಸ್ಥರಗಳ ಕುಟುಂಬಗಳಿಗೆ ಬೇರೆ ಬೇರೆ ರೀತಿಯ ದರ ಪಟ್ಟಿಯನ್ನು ಆಳವಡಿಸುವ ಮೂಲಕ ಸಾಮಾಜಿಕ ನ್ಯಾಯವನ್ನು ಒದಗಿಸಲಾಗುತ್ತಿದೆ. ಈ ಬಾರಿ ಮೆಸ್ಕಾಂ ಸಾಕಷ್ಟು ಹಣ ಹೂಡಿಕೆ ಮಾಡಿ, ಹೊಸ ಮಾರ್ಗ ಹಾಗೂ ಟ್ರಾನ್ಸ್‌ಫಾರ್ಮರ್‌ಗಳನ್ನು ಹಾಕಿದೆ ಎಂದು ಅವರು ಹೇಳಿದರು.

ವೇದಿಕೆಯಲ್ಲಿ ಉಡುಪಿ ಮೆಸ್ಕಾಂ ಎಕ್ಸಿಕ್ಯೂಟಿವ್ ಇಂಜಿನಿಯರ್ ದಿನೇಶ್ ಉಪಾಧ್ಯ, ಡೆಪ್ಯುಟಿ ಕಂಟ್ರೋಲರ್ ಆಫ್ ಆಕೌಂಟ್ ಮಂಜುನಾಥ್ ಉಪಸ್ಥಿತರಿದ್ದರು. ಉಡುಪಿ ಒಂಬುಡ್ಸ್‌ಮನ್ ಸದಸ್ಯ ಎಚ್.ಶಾಂತರಾಜ ಐಾಳ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಂವಾದದಲ್ಲಿ ಎ.ಪಿ.ಕೊಡಂಚ, ಶ್ರೀನಿವಾಸ ಉಪಾಧ್ಯಾಯ, ಲಕ್ಷ್ಮೀಬಾಯಿ ಮೊದಲಾದವರು ಪಾಲ್ಗೊಂಡಿದ್ದರು. ವೇದಿಕೆಯ ಸಂಚಾಲಕ ದಾಮೋದರ್ ಐತಾಳ್ ಸ್ವಾಗತಿಸಿದರು. ವೇದಿಕೆ ವಿಶ್ವಸ್ಥ ವಾದಿರಾಜ ಆಚಾರ್ಯ ವಂದಿಸಿ ದರು. ಟಿ.ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು.

ಕಾರ್ಕಳಕ್ಕೆ ವಿಶೇಷ ಟ್ರಾನ್ಸ್‌ಫಾರ್ಮರ್

ಕಾರ್ಕಳ ತಾಲೂಕಿನಲ್ಲಿ ಹೆಚ್ಚು ಮಿಂಚುಗಳು ಬರುವುದರಿಂದ ಮೆಸ್ಕಾಂನ ಹಲವು ಟ್ರಾನ್ಸ್‌ಫಾರ್ಮರ್‌ಗಳು ಹಾನಿಗೊಳಗಾಗಿವೆ. ಆದುದರಿಂದ ವಿಶೇಷ ಅರ್ಥಿಂಗ್ ಟ್ರಾನ್ಸ್‌ಫಾರ್ಮರ್ ಹಾಗೂ ಮೆಸ್ಕಾಂಗೆ ಕಡಿಮೆ ನಷ್ಟ ಆಗಲು 4 ಮತ್ತು 5 ಸ್ಟಾರ್ ಟ್ರಾನ್ಸ್‌ಫಾರ್ಮರ್‌ಗಳನ್ನು ಕಾರ್ಕಳ ತಾಲೂಕಿನಲ್ಲಿ ಹಾಕ ಲಾಗುವುದು ಎಂದು ನರಸಿಂಹ ಪಂಡಿತ್ ತಿಳಿಸಿದರು

ಉಡುಪಿ ಜಿಲ್ಲೆಯ ಗ್ರಾಹಕರು ಪ್ರಾಮಾಣಿಕರಾಗಿದ್ದು, ಎಲ್ಲ ಪಂಪ್‌ಸೆಟ್ ಗಳಿಗೂ ಮೀಟರ್ ಆಳವಡಿಸಲಾಗಿದೆ. ಮಲೆನಾಡು ಪ್ರದೇಶಗಳಲ್ಲಿ ಕೆಲವು ಪಂಪ್‌ಸೆಟ್‌ಗಳಿಗೆ ಮೀಟರ್ ಇಲ್ಲದಿದ್ದರೂ ಮೆಸ್ಕಾಂ ವತಿಯಿಂದಲೇ 10 ಪಂಪ್‌ಸೆಟ್‌ಗಳಿಗೆ ಒಂದು ಟ್ರಾನ್ಸ್‌ಫಾರ್ಮರ್ ಹಾಕಿ ಅದರಲ್ಲಿ ಮೀಟರ್ ಆಳ ವಡಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News