ಲೋಕಸಭಾ ಚುನಾವಣೆಯಲ್ಲಿ ನಿರುದ್ಯೋಗ ಸಮಸ್ಯೆ ಚರ್ಚಾವಸ್ತುವಾಗಲಿ: ಮುತ್ತುರಾಜ್

Update: 2019-01-18 15:23 GMT

ಉಡುಪಿ, ಜ.18: ಉದ್ಯೋಗಕ್ಕಾಗಿ ಯುವಜನರು ಸಂಘಟನೆಯ ನೇತೃತ್ವ ದಲ್ಲಿ ಕರ್ನಾಟಕ ಸರಕಾರಿ ಗುತ್ತಿಗೆ ನೌಕರರ ಒಕ್ಕೂಟದ ಸಹಯೋಗದೊಂದಿಗೆ ಜ.12ರಿಂದ 27ರವರೆಗೆ ರಾಜ್ಯಾದ್ಯಾಂತ ಹಮ್ಮಿಕೊಳ್ಳಲಾಗಿರುವ ಯುವಜನ ಜಾಥವು ಶುಕ್ರವಾರ ಉಡುಪಿಗೆ ಆಗಮಿಸಿದ್ದು, ಈ ಪ್ರಯುಕ್ತ ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಹಕ್ಕೊತ್ತಾಯ ಸಭೆ ಜರಗಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಸಂಘಟನೆಯ ರಾಜ್ಯ ಸಂಚಾಲಕ ಮುತ್ತು ರಾಜ್, ಭಾರತವು ನಿರುದ್ಯೋಗ ಎಂಬ ಟೈಮ್‌ಬಾಂಬ್ ಮೇಲೆ ಕುಳಿತಿದೆ. ಇದು ಯಾವ ಸಂದರ್ಭದಲ್ಲೂ ಸಿಡಿಯಬಹುದೆಂದು ಹೇಳಲು ಸಾಧ್ಯವಿಲ್ಲ. ಆ ಪರಿಸ್ಥಿತಿ ಬರುವ ಮೊದಲು ಸರಕಾರಗಳು ಎಚ್ಚೆತ್ತುಕೊಳ್ಳಬೇಕಾಗಿದೆ. ಮುಂದಿನ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ನಿರುದ್ಯೋಗ ಸಮಸ್ಯೆ, ಕೃಷಿ ಬಿಕ್ಕಟ್ಟು, ಅಭಿವೃದ್ಧಿ ಬಗ್ಗೆ ಚರ್ಚೆಯಾಗಬೇಕೆ ಹೊರತು ಮಂದಿರ, ಮಸೀದಿ, ಧಮರ್ ಜಾತಿಗಳ ವಿಚಾರ ಅಲ್ಲ ಎಂದರು.

ಉದ್ಯೋಗ ಸೃಷ್ಠಿ ಹಾಗೂ ಗುತ್ತಿಗೆ ಆಧಾರಿತ ನೌಕರರಿಗೆ ಸಮಾನ ವೇತನದ ಕುರಿತು ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಯನ್ನು ರಾಜ್ಯ ಸರಕಾರ ಅಧಿಕಾರಕ್ಕೆ ಬಂದು 10 ತಿಂಗಳಾದರೂ ಈಡೇರಿಸುವಲ್ಲಿ ವಿಫಲವಾಗಿದೆ. ಮುಖ್ಯಮಂತ್ರಿಗಳು ಕೊಟ್ಟ ಮಾತನ್ನು ಉಳಿಸಿಕೊಂಡು ಉದ್ಯೋಗ ಸೃಷ್ಠಿ ಮಾಡುವ ಕೆಲಸ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ವರ್ಷಕ್ಕೆ ಒಂದು ಕೋಟಿ ಉದ್ಯೋಗ ಸೃಷ್ಠಿ ಮಾಡುವುದಾಗಿ ಹೇಳಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ, ಜಿಎಸ್‌ಟಿ ಹಾಗೂ ನೋಟು ರದ್ಧತಿಯಿಂದ ಉದ್ಯೋಗವನ್ನೇ ನಾಶ ಮಾಡಿದ್ದಾರೆ. ಉದ್ಯೋಗ ಸೃಷ್ಠಿ ಮಾಡಬೇಕಾದ ಇವರು, ಉದ್ಯೋಗವನ್ನು ಕಳೆದುಕೊಳ್ಳುವಂತೆ ಮಾಡಿದ್ದಾರೆ ಎಂದು ಅವರು ಟೀಕಿಸಿದರು.

ಈ ಸಂದರ್ಭದಲ್ಲಿ ಸಮಾಜ ಸೇವಕ ಇದ್ರೀಸ್ ಹೂಡೆ, ನಿವೃತ್ತ ಪ್ರಾಧ್ಯಾಪಕ ಪ್ರೊ. ಸಿರಿಲ್ ಮಥಾಯಸ್, ದಸಂಸ ಮುಖಂಡ ವಾಸು ನೇಜಾರು, ಎಸ್‌ಐಓ ಜಿಲ್ಲಾಧ್ಯಕ್ಷ ಅಫ್ವಾನ್, ಉದ್ಯೋಗಕ್ಕಾಗಿ ಯುವಜನರು ಸಂಘಟನೆಯ ಪುಷ್ಪಾ, ಗುತ್ತಿಗೆ ನೌಕರರ ಸಂಘದ ಗಿರೀಶ್, ಮಂಜುನಾಥ್ ಮೊದಲಾದವರು ಉಪ ಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News