ಜನರಲ್ಲಿ ವೈಚಾರಿಕ, ವೈಜ್ಞಾನಿಕ ಪ್ರಜ್ಞೆ ಮೆರೆಯಲಿ: ಡಾ.ಗಣನಾಥ ಎಕ್ಕಾರು

Update: 2019-01-18 18:12 GMT

ಉಡುಪಿ, ಜ.18: ಭಾಷೆ ಮತ್ತು ಸಂಸ್ಕೃತಿಗಳ ಬೆಳವಣಿಗೆಯಲ್ಲಿ ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವ ಅತಿ ಮುಖ್ಯ. ಇಲ್ಲವಾದಲ್ಲಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಅಭಿವ್ಯಕ್ತಿ ಸಂಪ್ರದಾಯ ಮತ್ತು ಆಚರಣೆಗಳ ಸಂಗ್ರಹವಾಗುತ್ತದೆ ಎಂದು ನಾಡಿನ ಖ್ಯಾತನಾಮ ಜಾನಪದ ವಿದ್ವಾಂಸ ಹಾಗೂ ಸಾಹಿತಿ ಡಾ. ಗಣನಾಥ ಎಕ್ಕಾರು ಹೇಳಿದ್ದಾರೆ.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಉಡುಪಿ ತಾಲೂಕು ಘಟಕದ ವತಿಯಿಂದ ಬ್ರಹ್ಮಗಿರಿಯಲ್ಲಿರುವ ಲಯನ್ಸ್ ಭವನದಲ್ಲಿ ಶುಕ್ರವಾರ ನಡೆದ 12ನೇ ಉಡುಪಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡುತಿದ್ದರು.

ನಮ್ಮ ನಾಡಿನ ಕವಿ-ಲೇಖಕರು ಸಾವಿರಾರು ವರ್ಷಗಳಿಂದಲೇ ವೈಜ್ಞಾನಿಕ, ವೈಚಾರಿಕ ಮನೋಭಾವನ್ನು ತಮ್ಮ ಕೃತಿಗಳಲ್ಲಿ ಅಭಿವ್ಯಕ್ತಗೊಳಿಸಿದ್ದಾರೆ. ಇದರಿಂದ ವಚನ-ದಾಸ ಚಳುವಳಿಗಳು ಸಮಾಜದ ಕೆಟ್ಟ ಸಂಪ್ರದಾಯ ಹಾಗೂ ದುಷ್ಟ ಆಚರಣೆಗಳನ್ನು ಪ್ರಶ್ನಿಸಿವೆ. ನವೋದಯ, ನವ್ಯ ಸಾಹಿತ್ಯಗಳು ಈ ಪರಂಪರೆ ಯನ್ನು ಮುಂದುವರಿಸಿದರೆ, ದಲಿತ-ಸಮ್ಮಿಶ್ರ ಸಾಹಿತ್ಯಗಳು ಇದನ್ನು ಉತ್ತುಂಗ ದೆಡೆಗೆ ಒಯ್ದಿವೆ. ಕುವೆಂಪು-ಕಾರಂತರ ಸಾಹಿತ್ಯಗಳು ಇದೇ ರೀತಿಯ ಅಭಿವ್ಯಕ್ತಿ. ಈ ಪರಂಪರೆಯನ್ನು ನಾವು ಮುಂದುವರಿಸಬೇಕಾದ ಅಗತ್ಯವಿದೆ ಎಂದು ಡಾ.ಎಕ್ಕಾರು ಅಭಿಪ್ರಾಯ ಪಟ್ಟರು.

ಭಾಷಾ ಮಾಧ್ಯಮ ಗೊಂದಲ: ಪ್ರಾಥಮಿಕ ಶಾಲೆಯ ಹಂತದಲ್ಲಿ ಮಾಧ್ಯಮವಾಗಿ ಮಾತೃಭಾಷೆಯನ್ನು ಕಡ್ಡಾಯಗೊಳಿಸಬೇಕೆಂಬ ಕೂಗು ಹಲವು ದಶಕಗಳಿಂದ ಕೇಳಿಬರುತ್ತಿದೆ. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಸಂವಿಧಾನದ ದೃಷ್ಟಿಯಿಂದ ಸರಿಯಿದ್ದರೂ, ಇಂಗ್ಲೀಷ್ ಮಾಧ್ಯಮಗಳು ಆವರಿಸುವುದಕ್ಕೆ ಪ್ರಮುಖ ಕಾರಣವಾಗಿದೆ ಎಂದವರು ಅಭಿಪ್ರಾಯ ಪಟ್ಟರು.

ಈ ನಡುವೆ ಪ್ರಾಥಮಿಕ ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸಬೇಕೆಂಬ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದೆ. ಆದರೆ ಸಮಸ್ಯೆ ಇರುವುದ ಭಾಷೆಯದಲ್ಲ. ನಮ್ಮ ಮನಸ್ಸಿನದು. ಕನ್ನಡವನ್ನು ಪ್ರಾಥಮಿಕ ಹಂತದಲ್ಲಿ ಮಾಧ್ಯಮವಾಗಿ ಕಡ್ಡಾಯ ಗೊಳಿಸಿ, ಒಂದು ಭಾಷೆಯಾಗಿ ಇಂಗ್ಲೀಷ್‌ನ್ನು ಕಲಿಸಬಹುದಲ್ಲ. ಅದರಲ್ಲೂ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳಿಗೆ ಒಳ್ಳೆಯ ಮೂಲಭೂತ ಸೌಲಭ್ಯ ನೀಡಿ ಉತ್ತಮ ಶಿಕ್ಷಕರನ್ನು ನೇಮಿಸಿ ಗಟ್ಟಿಗೊಳಿಸಬಹುದಲ್ಲ ಎಂದವರು ನುಡಿದರು.

ಇಂಗ್ಲೀಷ್ ಮಾಧ್ಯಮ ಶಾಲೆಗಳು ಸೌಲಭ್ಯ ಮತ್ತು ಪರಿಸರದಿಂದ ಉತ್ತಮ ಎಂದು ಕಂಡುಬರುತ್ತಿವೆಯೇ ಹೊರತು ಮಾಧ್ಯಮದಿಂದಲ್ಲ. ಹೀಗಾಗಿ ಸರಕಾರ ಒಂದು ಸಾವಿರ ಇಂಗ್ಲೀಷ್ ಮಾಧ್ಯಮ ಶಾಲೆಗಳನ್ನು ಆರಂಭಿಸುವ ಬದಲು ಸರಕಾರಿ ಹಾಗೂ ಅನುದಾನಿತ ಶಾಲೆಗಳ ಮೂಲಭೂತ ಸೌಲಭ್ಯಗಳ ಕಡೆಗೆ ಗಮನ ಕೊಡಬೇಕಾಗಿದೆ ಎಂದರು.

ಔದ್ಯೋಗಿಕ ಕ್ಷೇತ್ರಕ್ಕೆ ಸಂಬಂಧಿಸಿ ಸರೋಜಿನಿ ಮಹಿಷಿ ವರದಿಯನ್ನು ಸರಕಾರ ಕೂಡಲೇ ಜಾರಿಗೆ ತರಬೇಕು. ನಾಡಿನ ಸಾಂಸ್ಕೃತಿಕ ಉಳಿವಿಗಾಗಿ ಈ ನಿಟ್ಟಿನಲ್ಲಿ ಗಂಭೀರವಾಗಿ ಚಿಂತಿಸಬೇಕಾದ ಅಗತ್ಯವಿದೆ. ಸರಕಾರ ಪ್ರಾಯೋಜಿತ ಅಕಾಡೆಮಿಗಳ ನೇಮಕ ಮತ್ತು ಕಾರ್ಯಕ್ರಮಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ನೀಡುವ ಪ್ರಾತಿನಿಧ್ಯವನ್ನು ಉಡುಪಿ ಜಿಲ್ಲೆಗೂ ನೀಡಬೇಕು. ಇತರ ಪ್ರಾದೇಶಿಕ ಭಾಷೆಗಳು ಹಾಗೂ ಕನ್ನಡ ಭಾಷೆಯ ಬಾಂಧ್ವದ ಕುರಿತು ಅಧ್ಯಯನ ಯೋಜನೆ ಗಳನ್ನು ರೂಪಿಸಬೇಕೆಂದು ಕರೆ ನೀಡಿದರು.

ಸಾಮರಸ್ಯದ ಬದುಕು ಇರಲಿ: ಭಾರತೀಯ ಸಂಸ್ಕೃತಿಯ ಪ್ರಧಾನ ಲಕ್ಷಣ ವಾದ ಬಹುಸಂಸ್ಕೃತಿಯ ಲಕ್ಷಣಗಳನ್ನು ಈ ಜಿಲ್ಲೆ ಕಾಪಾಡಿಕೊಂಡು ಬಂದಿದೆ. ಈ ಗೌರವವನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಇದಕ್ಕೆ ಸಾಮರಸ್ಯವೇ ಅಡಿಗಲ್ಲು. ಇಲ್ಲಿನ ಕೋಮು ಸಾಮರಸ್ಯ ಇತರರಿಗೆ ಮಾದರಿ. ವಿವಿಧ ಕೋಮುಗಳ ಜನರು ಹಲವು ಶತಮಾನಗಳಿಂದ ಸಾಮರಸ್ಯದಿಂದ ಬಾಳಿದ್ದಾರೆ ಎಂದರು.

ಇಂದು ರಾಜಕೀಯ ಕಾರಣಗಳಿಗಾಗಿ ಕೋಮು ಸಾಮರಸ್ಯ ಹದಗೆಡುತ್ತಿರು ವುದನ್ನು ಕಾಣಬಹುದು. ಇದು ನಮ್ಮ ಉಡುಪಿಯನ್ನು ಪ್ರವೇಶಿಸದಂತೆ ಎಚ್ಚರ ವಹಿಸಬೇಕಾದ ಅಗತ್ಯವಿದೆ. ತಾತ್ವಿಕ ಹಾಗೂ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಪರಸ್ಪರ ಚರ್ಚೆಯ ಮೂಲಕ ಬಗೆಹರಿಸಿಕೊಳ್ಳಬೇಕಿದೆ. ಇಲ್ಲವೇ ನಮ್ಮ ಸೈದ್ಧಾಂತಿಕ ಅಭಿಪ್ರಾಯಗಳನ್ನು ಇಟ್ಟುಕೊಂಡೇ ಪರಸ್ಪರ ಗೌರವಿಸುತ್ತಾ ಬದುಕಬೇಕಿದೆ ಎಂದು ಕಿವಿಮಾತು ಹೇಳಿದರು.

ಜನಪ್ರತಿನಿಧಿಗಳ ಬದ್ಧತೆ ಕೊರತೆ

ತುಳು ಮತ್ತು ಕೊಡವ ಭಾಷೆಗೆ ಸಂವಿಧಾನದ 8ನೇ ಪರಿಚ್ಛೇಧದಲ್ಲಿ ಸ್ಥಾನಮಾನ ನೀಡಬೇಕೆಂಬ ಕೂಗು ಹಲವು ದಶಕಗಳಿಂದ ಕೇಳಿಬರುತ್ತಿದೆ. ಹಲವು ಸಾಹಿತ್ಯ ಸಮ್ಮೇಳನಗಳಲ್ಲಿ ಈ ಬಗ್ಗೆ ನಿರ್ಣಯಗಳೂ ಆಗಿವೆ. ಲೋಕಸಭೆಯಲ್ಲೂ ಹಲವಾರು ಬಾರಿ ನಮ್ಮ ಕನ್ನಡದ ಲೋಕಸಭಾ ಸದಸ್ಯರು ಈ ಬಗ್ಗೆ ಧ್ವನಿ ಎತ್ತಿದ್ದಾರೆ.

ಆದರೆ ಕೆಲವು ಅತಿ ಸಣ್ಣ ಭಾಷೆಗಳನ್ನು ಸಂವಿಧಾನದ ಎಂಟನೇ ಪರಿಚ್ಚೇಧಕ್ಕೆ ಸೇರಿಸಿರುವ ಕೇಂದ್ರ ಸರಕಾರ ಈ ಕೂಗನ್ನು ನಿರ್ಲಕ್ಷಿಸಿದೆ. ಇದಕ್ಕೆ ನಮ್ಮ ಜನಪ್ರತಿನಿಧಿಗಳ ಬದ್ಧತೆಯ ಕೊರತೆಯೂ ಕಾರಣವಿರಬಹುದು.

ಆದರೆ ಕರ್ನಾಟಕದ ಸಮಗ್ರ ಸಂಸ್ಕೃತಿಯ ದೃಷ್ಟಿಯಿಂದ ಇದು ತುರ್ತಾಗಿ ಆಗಬೇಕಾದ ಕಾರ್ಯ ಎಂದು ಡಾ.ಗಣನಾಥ ಎಕ್ಕಾರು ಅಭಿಪ್ರಾಯ ಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News