ಡಾಟಾ ವಸಾಹತುಕರಣದ ವಿರುದ್ಧ ಕ್ರಮ ಕೈಗೊಳ್ಳಲು ಪ್ರಧಾನಿಗೆ ಅಂಬಾನಿ ಆಗ್ರಹ

Update: 2019-01-18 15:35 GMT

ಗಾಂಧಿನಗರ,ಜ.18: ಭಾರತೀಯ ಡಾಟಾ ಭಾರತೀಯರ ಒಡೆತನದಲ್ಲಿಯೇ ಇರಬೇಕು ಎಂದು ಶುಕ್ರವಾರ ಇಲ್ಲಿ ವೈಬ್ರಂಟ್ ಗುಜರಾತ್ ಜಾಗತಿಕ ಶೃಂಗದಲ್ಲಿ ಹೇಳಿದ ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಮುಕೇಶ್ ಅಂಬಾನಿ ಅವರು,ಜಾಗತಿಕ ಕಂಪನಿಗಳಿಂದ ಡಾಟಾ ವಸಾಹತುಕರಣದ ವಿರುದ್ಧ ಕ್ರಮಗಳನ್ನು ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿದರು.

ರಾಜಕೀಯ ವಸಾಹತುಕರಣದ ವಿರುದ್ಧ ಮಹಾತ್ಮಾ ಗಾಂಧೀಜಿಯವರ ಆಂದೋಲನವನ್ನು ನೆನಪಿಸಿದ ಅವರು,ಈ ಡಾಟಾ ವಸಾಹತುಕರಣದ ವಿರುದ್ಧ ಭಾರತಕ್ಕೆ ಈಗ ಹೊಸ ಸಾಮೂಹಿಕ ಆಂದೋಲನದ ಅಗತ್ಯವಿದೆ ಎಂದು ಹೇಳಿದರು.

ಈ ಹೊಸ ಜಗತಿನಲ್ಲಿ ಡಾಟಾ ಹೊಸ ಸಂಪತ್ತಾಗಿದೆ ಎಂದು ಒತ್ತಿ ಹೇಳಿದ ಅವರು,ಭಾರತದ ಡಾಟಾದ ನಿಯಂತ್ರಣ ಮತ್ತು ಒಡೆತನವನ್ನು ಭಾರತೀಯರು ಹೊಂದಿರಬೇಕೇ ಹೊರತು ಕಾರ್ಪೊರೇಟ್‌ಗಳು,ವಿಶೇಷವಾಗಿ ಜಾಗತಿಕ ಕಾರ್ಪೊರೇಟ್‌ಗಳಲ್ಲ ಎಂದರು.

ಈ ಡಾಟಾ ಚಾಲಿತ ಕ್ರಾಂತಿಯಲ್ಲಿ ಭಾರತವು ಯಶಸ್ವಿಯಾಗಬೇಕಿದ್ದರೆ ನಾವು ಭಾರತೀಯ ಡಾಟಾದ ನಿಯಂತ್ರಣ ಮತ್ತು ಒಡೆತನವನ್ನು ಮರಳಿ ಭಾರತಕ್ಕೆ ತರಬೇಕು. ಸರಳವಾಗಿ ಹೇಳುವುದಿದ್ದರೆ ಭಾರತಿಯ ಸಂಪತ್ತನ್ನು ಪ್ರತಿ ಭಾರತೀಯನಿಗೂ ಮರಳಿಸಬೇಕು ಎಂದ ಅವರು,ಇಡೀ ಜಗತ್ತೇ ಮೋದಿಯವರನ್ನು ಕ್ರಿಯಾಶೀಲ ವ್ಯಕ್ತಿ ಎಂದು ಗುರುತಿಸುತ್ತಿದೆ. ಪ್ರಧಾನಿಯವರು ಈ ವಿಷಯವನ್ನು ತನ್ನ ಡಿಜಿಟಲ್ ಭಾರತ ಅಭಿಯಾನದ ಮುಖ್ಯ ಗುರಿಗಳಲ್ಲೊಂದಾಗಿ ಮಾಡಿಕೊಳ್ಳುತ್ತಾರೆ ಎಂಬ ವಿಶ್ವಾಸ ತನಗಿದೆ ಎಂದರು.

ದಿನದ ಉತ್ತರಾರ್ಧದಲ್ಲಿ ಅಂಬಾನಿಯವರ ಪ್ರತಿಪಾದನೆಯನ್ನು ವಿರೋಧಿಸಿದ ಕಾಮನ್‌ವೆಲ್ತ್ ಆಫ್ ಕೆಂಟುಕಿಯ ರಾಜ್ಯಪಾಲ ಮ್ಯಾಥ್ಯೂ ಗ್ರಿಸವಲ್ಡ್ ಅವರು,ಭಾರತ-ಅಮೆರಿಕ ಪಾಲುದಾರಿಕೆಯಲ್ಲಿರುವ ಅಪಾರ ಅವಕಾಶವನ್ನು ಸಾಕಾರಗೊಳಿಸಲು ಇದಕ್ಕೆ ವಿರುದ್ಧವಾಗಿ ಯೋಚಿಸುವಂತೆ ಮೋದಿಯವರನ್ನು ಕೇಳಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News