ಮಾರ್ಚ್ ಮೊದಲ ವಾರದಲ್ಲಿ ಲೋಕಸಭಾ ಚುನಾವಣೆಯ ವೇಳಾಪಟ್ಟಿ ಪ್ರಕಟ ಸಾಧ್ಯತೆ

Update: 2019-01-18 15:57 GMT

ಹೊಸದಿಲ್ಲಿ,ಜ.18: ಲೋಕಸಭಾ ಚುನಾವಣೆಗಳ ದಿನಾಂಕಗಳು ಮಾರ್ಚ್ ಮೊದಲ ವಾರದಲ್ಲಿ ಪ್ರಕಟಗೊಳ್ಳುವ ಸಾಧ್ಯತೆಗಳಿವೆ ಎಂದು ಶುಕ್ರವಾರ ಮೂಲಗಳು ಸುಳಿವು ನೀಡಿವೆ. ಹಾಲಿ ಲೋಕಸಭೆಯ ಅವಧಿಯು ಜೂ.3ರಂದು ಅಂತ್ಯಗೊಳ್ಳುತ್ತದೆ.

ಚುನಾವಣಾ ಆಯೋಗವು ಮತದಾನದ ಹಂತಗಳು ಮತ್ತು ಮತದಾನದ ದಿನಾಂಕಗಳನ್ನು ನಿರ್ಧರಿಸುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದೆ ಎಂದು ಮೂಲಗಳು ತಿಳಿಸಿದವು. ಮತದಾನದ ಹಂತಗಳನ್ನು ನಿರ್ಧರಿಸುವ ಕಾರ್ಯ ಭದ್ರತಾ ಪಡೆಗಳು ಮತ್ತು ಇತರ ಅಗತ್ಯಗಳ ಲಭ್ಯತೆಯನ್ನೂ ಅವಲಂಬಿಸಿದೆ ಎಂದವು.

ಆಯೋಗವು ಲೋಕಸಭಾ ಚುನಾವಣೆಯೊಂದಿಗೆ ಸಿಕ್ಕಿಂ,ಅರುಣಾಚಲ ಪ್ರದೇಶ,ಒಡಿಶಾ ಮತ್ತು ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಗಳನ್ನೂ ನಡೆಸುವ ಸಾಧ್ಯತೆಯಿದೆ. ಈ ವಿಧಾನಸಭೆಗಳ ಅವಧಿ ಅನುಕ್ರಮವಾಗಿ ಮೇ 27,ಜೂ.1,ಜೂ.11 ಮತ್ತು ಜೂ.18ರಂದು ಅಂತ್ಯಗೊಳ್ಳಲಿವೆ.

ಜಮ್ಮು-ಕಾಶ್ಮೀರ ವಿಧಾನಸಭೆಯನ್ನು 2018,ನವೆಂಬರ್‌ನಲ್ಲಿ ವಿಸರ್ಜಿಸಲಾಗಿದ್ದು,ಆಯೋಗವು ಅಲ್ಲಿ ಆರು ತಿಂಗಳುಗಳಲ್ಲಿ ಹೊಸದಾಗಿ ಚುನಾವಣೆಗಳನ್ನು ನಡೆಸಬೇಕಾಗಿದೆ. ಹೀಗಾಗಿ ಆಯೋಗವು ಲೋಕಸಭಾ ಚುನಾವಣೆಯೊಂದಿಗೇ ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆಯನ್ನೂ ನಡೆಸಬಹುದು. ಆದರೆ ಎಲ್ಲವೂ ಆ ರಾಜ್ಯದಲ್ಲಿಯ ಸಂಕೀರ್ಣ ಭದ್ರತಾ ಸ್ಥಿತಿಯನ್ನು ಅವಲಂಬಿಸಿರುವುದರಿಂದ ಮೊದಲೇ ಚುನಾವಣೆಗಳನ್ನು ನಡೆಸಲೂಬಹುದು ಎಂದು ಮೂಲಗಳು ತಿಳಿಸಿದವು.

ವಿಸರ್ಜನೆಗೊಳ್ಳದಿದ್ದರೆ ಜಮ್ಮು-ಕಾಶ್ಮೀರ ವಿಧಾನಸಭೆಯ ಆರು ವರ್ಷಗಳ ಅವಧಿಯು 2021,ಮಾ.16ಕ್ಕೆ ಅಂತ್ಯಗೊಳ್ಳುತ್ತಿತ್ತು. ಇತರ ರಾಜ್ಯ ವಿಧಾನಸಭೆಗಳು ಮತ್ತು ಲೋಕಸಭೆ ಐದು ವರ್ಷಗಳ ಅವಧಿಯನ್ನು ಹೊಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News