ಸಾಮಾಜಿಕ ಮಾಧ್ಯಮಗಳಲ್ಲಿ ಕ್ರೇಝ್ ಹುಟ್ಟಿಸಿರುವ ‘10-ಇಯರ್ ಚಾಲೆಂಜ್’

Update: 2019-01-18 18:13 GMT

ಇಂದಿನ ದಿನಗಳಲ್ಲಿ ಅಂತರ್ಜಾಲದಲ್ಲಿ ಹಲವಾರು ಸವಾಲುಗಳು ಮತ್ತು ಖಯಾಲಿಗಳು ಕಾಣಿಸಿಕೊಳ್ಳುತ್ತಲೇ ಇವೆ ಮತ್ತು ಏನಾದರೂ ವಿಲಕ್ಷಣವಾದುದನ್ನು ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ. ನೆಟಿಝನ್‌ಗಳಿಗೆ ಎದುರಾಗುವ ಸವಾಲುಗಳಲ್ಲಿ ಹೆಚ್ಚಿನವು ಅಪಾಯಕಾರಿಯೂ ಹೌದು,ಕಿಕಿ ಚಾಲೆಂಜ್ ಇದಕ್ಕೊಂದು ಉದಾಹರಣೆ. ತೀರ ಇತ್ತೀಚಿಗೆ ಹುಟ್ಟಿಕೊಂಡಿರುವ ಸವಾಲಿನಲ್ಲಿ ಯಾವುದೇ ಅಪಾಯದ ಅಂಶವಿಲ್ಲ. ಇದುವೇ ಅಂತರ್ಜಾಲದಲ್ಲಿ ಹಿಟ್ ಆಗುತ್ತಿರುವ ‘10-ಇಯರ್ ಚಾಲೆಂಜ್(10 ವರ್ಷಗಳ ಸವಾಲು)’

#ಅಂದ ಹಾಗೆ ಈ ‘ಸವಾಲು’ ವಾಸ್ತವದಲ್ಲಿ ಯಾವುದೇ ಸವಾಲನ್ನೊಡ್ಡುತ್ತಿಲ್ಲ. ಈ ಟ್ರೆಂಡ್ ಆರಂಭಗೊಂಡ ಬಳಿಕ ಜನರು 10ಇಯರ್‌ಚಾಲೆಂಜ್ ಹ್ಯಾಷ್‌ಟ್ಯಾಗ್‌ನೊಂದಿಗೆ ತಮ್ಮ ಲಕ್ಷಗಟ್ಟಲೆ ಪೋಟೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಚಾಲೆಂಜ್ ಕುರಿತು ವಿವರಗಳಿಲ್ಲಿವೆ.

ಇಲ್ಲಿ ನೀವು ಮಾಡಬೇಕಿರುವ ಕೆಲಸವೆಂದರೆ 2009ರಲ್ಲಿನ ನಿಮ್ಮ ಫೋಟೊ ಮತ್ತು ಈಗಿನ,ಅಂದರೆ 2019ರಲ್ಲಿಯ ಫೋಟೊ ಇವುಗಳನ್ನು ಪೋಸ್ಟ್ ಮಾಡುವುದು. ಈ ಫೋಟೊಗಳಿಗೆ ನಿಮಗೆ ಇಷ್ಟ ಬಂದ ಅಡಿಬರಹವನ್ನು ನೀವು ನೀಡಬಹುದು. ಇಷ್ಟೇ ಈ ಚಾಲೆಂಜ್!

ನೀವು 10 ವರ್ಷಗಳ ಹಿಂದೆ ಎಷ್ಟು ಆಕರ್ಷಕರಾಗಿದ್ದೀರಿ ಅಥವಾ ಈಗ ಎಷ್ಟು ಆಕರ್ಷಕರಾಗಿದ್ದೀರಿ ಅಥವಾ 10 ವರ್ಷಗಳಿಂದಲೂ ನೀವು ಆಕರ್ಷಕವಾಗಿಯೇ ಇದ್ದೀರಿ ಎನ್ನುವುದನ್ನು ತಿಳಿಸುವ ಹಿತಕರ ಮತ್ತು ಸಾಮಾಜಿಕವಾಗಿ ಸ್ವೀಕಾರಾರ್ಹ ಮಾರ್ಗವು ಈ 10-ಇಯರ್ ಚಾಲೆಂಜ್‌ನ ಹಿಂದಿನ ಪರಿಕಲ್ಪನೆಯಾಗಿದೆ.

ಈ ಚಾಲೆಂಜ್‌ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಹಲವಾರು ಜನರು ಕಳೆದ ಹತ್ತು ವರ್ಷಗಳಲ್ಲಿ ತಮಗೆ ವಯಸ್ಸಾಗಿರುವ ಫೋಟೊಗಳನ್ನು ಪೋಸ್ಟ್ ಮಾಡಿದ್ದರೆ ಕೆಲವು ತೃತೀಯ ಲಿಂಗಿಗಳು ಮತ್ತು ಸಲಿಂಗಕಾಮಿಗಳು 10 ವರ್ಷಗಳ ಹಿಂದೆ ತಾವು ಹತಾಶ ಸ್ಥಿತಿಯಲ್ಲಿದ್ದಾಗಿನ ಫೋಟೊ ಮತ್ತು ಈಗಿನ ನೆಮ್ಮದಿಯ ಸಂದರ್ಭದ ಪೋಟೊಗಳನ್ನು ಪೋಸ್ಟ್ ಮಾಡಿದ್ದಾರೆ.

ಈಗ ಈ ಚಾಲೆಂಜ್ 10 ವರ್ಷಗಳಿಗೆ ಮಾತ್ರ ಸೀಮಿತವಾಗುಳಿದಿಲ್ಲ. 10-ಇಯರ್ ಚಾಲೆಂಜ್ ಸಾಮಾಜಿಕ ಮಾಧ್ಯಮಗಳಲ್ಲಿ ಸೂಪರ್ ಹಿಟ್ ಆಗುತ್ತಿದ್ದಂತೆ ಜನರು 10 ವರ್ಷಗಳ ಹಿಂದಿನದು ಮಾತ್ರವಲ್ಲ,50-60 ವರ್ಷಗಳ ಹಿಂದಿನ ಫೋಟೊಗಳನ್ನೂ ಪೋಸ್ಟ್ ಮಾಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News