ಉದ್ಯಾವರ: ನಿರಂತರ್ ಕೊಂಕಣಿ ನಾಟಕೋತ್ಸವಕ್ಕೆ ಚಾಲನೆ

Update: 2019-01-19 14:05 GMT

ಉಡುಪಿ, ಜ.19: ನಾಟಕಗಳಲ್ಲಿ ಗುಣಮಟ್ಟ ಮತ್ತು ಮೌಲ್ಯಗಳಿದ್ದರೆ ಪ್ರೇಕ್ಷಕ ಕೊರತೆ ಎಂದೂ ಎದುರಾಗುವುದಿಲ್ಲ. ಇಂತಹ ನಾಟಕಗಳನ್ನು ಪಿ.ಲಂಕೇಶ್ ರಚಿಸುತ್ತಿದ್ದು, ಅವರ ನಾಟಕಗಳಿಗೆ ಇಂದಿಗೂ ಕೂಡ ಅಸಂಖ್ಯಾತ ಪ್ರೇಕ್ಷಕರು ಇದ್ದಾರೆ ಎಂದು ಉಡುಪಿ ಕೆಥೊಲಿಕ್ ಧರ್ಮಪ್ರಾಂತ್ಯದ ಕುಲಪತಿ ವಂಸ್ಟ್ಯಾನಿ ಬಿ ಲೋಬೊ ಹೇಳಿದ್ದಾರೆ.

ನಿರಂತರ್ ಉದ್ಯಾವರ ಸಂಘಟನೆ ವತಿಯಿಂದ ಉದ್ಯಾವರ ಚರ್ಚ್ ವಠಾರದಲ್ಲಿ ಆಯೋಜಿಸಲಾದ ಮೂರು ದಿನಗಳ ನಿರಂತರ್ ಕೊಂಕಣಿ ನಾಟಕೋತ್ಸವವನ್ನು ಶುಕ್ರವಾರ ಡೋಲು ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಮೊದಲು ಕೊಂಕಣಿ ನಾಟಕೋತ್ಸವಗಳು ಕೇವಲ ಮಂಗಳೂರಿಗೆ ಸೀಮಿತ ಗೊಂಡಿದ್ದವು. ಉಡುಪಿಯಲ್ಲಿ ಇತರ ಭಾಷೆಯ ನಾಟಕಗಳು ಮಾತ್ರ ಪ್ರದರ್ಶನ ಗೊಳ್ಳುತ್ತಿದ್ದವು. ಕೇವಲ ಮನೋರಂಜನೆಯ ದೃಷ್ಟಿಯನ್ನು ಇಟ್ಟುಕೊಂಡು ಮಾತ್ರವಲ್ಲ ಬದಲಾಗಿ ಕೊಂಕಣಿ ಭಾಷೆಯನ್ನು ಪ್ರೋತ್ಸಾಹಿಸುವ ಕೆಲಸ ಕೂಡ ನಾಟಕಗಳಿಂದ ಆಗಬೇಕು. ನಾಟಕಗಳಿಂದ ನಾವು ಕಲಿಯಬೇಕಾಗಿರುವುದು ಬಹಳಷ್ಟಿದೆ ಎಂದರು.

ಲೇಖಕ ಹಾಗೂ ಅನುವಾದಕಾರ ರೋಶು ಬಜ್ಪೆಮಾತನಾಡಿ, ಇಂದಿನ ಸಮಾಜ ಸಾಮಾಜಿಕ ಜಾಲತಾಣದಂತಹ ಸಂಪರ್ಕ ಮಾಧ್ಯಮದ ದಾಸರಾಗು ತ್ತಿದ್ದು ಅದರಲ್ಲಿ ಬರುವ ವಿಚಾರಗಳೇ ಸತ್ಯ ಎಂದು ನಂಬುವ ಹಂತಕ್ಕೆ ಬೆಳೆದಿದೆ. ಅದರಲ್ಲಿ ಬರುವ ವಿಚಾರಗಳನ್ನು ಕೆಲವೊಂದು ಮಾಧ್ಯಮಗಳು ವೈಭವಿಕರಿಸುವ ಕೆಲಸದಿಂದ ಸಮಾಜ ತಪ್ಪು ದಾರಿಗೆ ಸಾಗಲು ಅವಕಾಶ ಮಾಡಿ ಕೊಡಲಾಗು ತ್ತಿದೆ ಎಂದರು.

ಈ ಸಂದರ್ಭದಲ್ಲಿ ನಿರ್ದೇಶಕ ಕ್ಲ್ಯಾನ್ ವಿನ್ ಕಲಾಕುಲ್, ಲೇಖಕರಾದ ರೋಶು ಬಜ್ಪೆ, ವಿಲ್ಸನ್ ಕಟೀಲ್ ಅವರನ್ನು ಸನ್ಮಾನಿಸಲಾಯಿತು. ಲೇಖಕ ಫಾ.ಆಲ್ವಿನ್ ಸೆರಾವೊ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಮೆಲ್ವಿನ್ ನೊರೊನ್ಹಾ, ಉದ್ಯಾವರ ಚರ್ಚಿನ ಸಹಾಯಕ ಧರ್ಮಗುರು ರೋಲ್ವಿನ್ ಆರಾನ್ಹಾ, ಸಂಚಾಲಕ ರೊನಾಲ್ಡ್ ಡಿಸೋಜ ಉಪಸ್ಥಿತರಿದ್ದರು.

 ನಿರಂತರ್ ಸಂಘಟನೆಯ ಅಧ್ಯಕ್ಷ ಸ್ಟೀವನ್ ಕುಲಾಸೊ ಸ್ವಾಗತಿಸಿದರು. ಅನಿಲ್ ಡಿಸೋಜ ವಂದಿಸಿದರು. ಮೈಕಲ್ ಡಿಸೋಜ ಕಾರ್ಯಕ್ರಮ ನಿರೂ ಪಿಸಿದರು. ಬಳಿಕ ಹೋಮ್ ಸ್ವೀಟ್ ಹೋಮ್ ನಾಟಕ ಪ್ರದರ್ಶನಗೊಂಡಿತು. ಇದರ ಮೌಲ್ಯಮಾಪನವನ್ನು ವಾಲಸ್ಟನ್ ಶಂಕರಪುರ, ಮೆಲ್ವಿನ್ ಕೊಳಲಗಿರಿ ಮತ್ತು ವಂ.ರೆಜಿನಾಲ್ಡ್ ಪಿಂಟೊ ನಡೆಸಿಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News