ವೇತನ ಸಿಗದ ಗುಪ್ತಚರ ಸಿಬ್ಬಂದಿಗೆ ಪಿಝಾ ನೀಡಿದ ಬುಶ್

Update: 2019-01-19 15:15 GMT

ಡಲ್ಲಾಸ್ (ಅಮೆರಿಕ), ಜ. 19: ಅಮೆರಿಕ ಸರಕಾರ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ, ವೇತನ ಸಿಗದಿದ್ದರೂ ತಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಿರುವ ತನ್ನ ಗುಪ್ತಚರ ಸಿಬ್ಬಂದಿಗೆ ಮಾಜಿ ಅಧ್ಯಕ್ಷ ಜಾರ್ಜ್ ಡಬ್ಲ್ಯು. ಬುಶ್ ಪಿಝಾಗಳನ್ನು ನೀಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬುಶ್ ತನ್ನ ಗುಪ್ತಚರ ಸಿಬ್ಬಂದಿಗೆ ಪಿಝಾಗಳನ್ನು ವಿತರಿಸುತ್ತಿರುವ ಚಿತ್ರವೊಂದನ್ನು ಅವರ ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್ ಪುಟಗಳಲ್ಲಿ ಹಾಕಲಾಗಿದೆ.

‘‘ವೇತನವಿಲ್ಲದೆಯೇ ನಮ್ಮ ದೇಶಕ್ಕಾಗಿ ಕಠಿಣ ಪರಿಶ್ರಮ ಪಡುತ್ತಿರುವ ನಮ್ಮ ಗುಪ್ತಚರ ಸಿಬ್ಬಂದಿ ಮತ್ತು ಸರಕಾರದ ಲಕ್ಷಾಂತರ ಉದ್ಯೋಗಿಗಳಿಗೆ ನಾನು ಮತ್ತು ಪತ್ನಿ ಲಾರಾ ಕೃತಜ್ಞರಾಗಿದ್ದೇವೆ’’ ಎಂಬುದಾಗಿ ಬುಶ್ ಈ ಚಿತ್ರದ ಬಗ್ಗೆ ಬರೆದಿದ್ದಾರೆ.

‘‘ರಾಜಕೀಯವನ್ನು ಬದಿಗಿಟ್ಟು, ಸರಕಾರದ ಸ್ಥಾಗಿತ್ಯವನ್ನು ಕೊನೆಗೊಳಿಸಲು ಉಭಯ ಬಣಗಳ ನಾಯಕರಿಗೆ ಇದು ಸಕಾಲ’’ ಎಂಬುದಾಗಿಯೂ ಅವರು ಹೇಳಿದ್ದಾರೆ.

ಅಮೆರಿಕ ಸರಕಾರದ ಆಂಶಿಕ ಸ್ಥಾಗಿತ್ಯ ಶನಿವಾರ 29ನೇ ದಿನವನ್ನು ಪ್ರವೇಶಿಸಿದೆ.

ತನ್ನ ಮಹತ್ವಾಕಾಂಕ್ಷೆಯ ಮೆಕ್ಸಿಕೊ ಗಡಿ ಗೋಡೆಗೆ ಸಂಸತ್ತು ಕಾಂಗ್ರೆಸ್ ಬಜೆಟ್‌ನಲ್ಲಿ ಹಣ ನೀಡಲು ನಿರಾಕರಿಸಿರುವುದಕ್ಕಾಗಿ ಸರಕಾರ ನಡೆಯಲು ಹಣ ನೀಡುವ ವೆಚ್ಚ ಮಸೂದೆಯನ್ನು ಅಂಗೀಕರಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರಾಕರಿಸಿದ್ದಾರೆ. ಹಾಗಾಗಿ, ಸರಕಾರ ನಡೆಯಲು ಅಗತ್ಯವಾದ ಹಣ ಸಿಗದೆ ಸರಕಾರ ಆಂಶಿಕವಾಗಿ ಸ್ಥಗಿತಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News