ಟ್ರಂಪ್- ಕಿಮ್ 2ನೇ ಶೃಂಗ ಸಮ್ಮೇಳನ ಫೆಬ್ರವರಿ ಕೊನೆಯಲ್ಲಿ

Update: 2019-01-19 15:46 GMT

ವಾಶಿಂಗ್ಟನ್, ಜ. 19: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯದ ನಾಯಕ ಕಿಮ್ ಜಾಂಗ್-ಉನ್ ನಡುವಿನ ಎರಡನೇ ಶೃಂಗ ಸಮ್ಮೇಳನ ಫೆಬ್ರವರಿ ಕೊನೆಯಲ್ಲಿ ನಡೆಯುತ್ತದೆ ಎಂದು ಶ್ವೇತಭವನ ಶುಕ್ರವಾರ ಪ್ರಕಟಿಸಿದೆ.

ಮೊದಲ ಶೃಂಗ ಸಮ್ಮೇಳನ ಕಳೆದ ವರ್ಷದ ಜೂನ್‌ನಲ್ಲಿ ಸಿಂಗಾಪುರದಲ್ಲಿ ನಡೆದಿತ್ತು. ಆ ಬಳಿಕ ಉಭಯ ದೇಶಗಳ ನಡುವಿನ ಮಾತುಕತೆಯಲ್ಲಿ ಯಾವುದೇ ಪ್ರಗತಿಯಾಗಿಲ್ಲ. ಸ್ಥಗಿತಗೊಂಡಿರುವ ಮಾತುಕತೆಗಳು ಎರಡನೇ ಶೃಂಗ ಸಮ್ಮೇಳನದಲ್ಲಿ ಮುಂದುವರಿಯುವ ನಿರೀಕ್ಷೆ ಇದೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅಮೆರಿಕ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ ಹಾಗೂ ಉತ್ತರ ಕೊರಿಯದ ಉನ್ನತ ಪರಮಾಣು ಸಂಧಾನಕಾರ ಹಾಗೂ ವರ್ಕರ್ಸ್ ಪಾರ್ಟಿ ಆಫ್ ಕೊರಿಯದ ಉಪಾಧ್ಯಕ್ಷ ಹಾಗೂ ಕೊರಿಯ ಏಶ್ಯ ಪೆಸಿಫಿಕ್ ಶಾಂತಿ ಸಮಿತಿಯ ಅಧ್ಯಕ್ಷ ಕಿಮ್ ಯಾಂಗ್ ಚೊಲ್ ನಡುವೆ ಶುಕ್ರವಾರ ಶ್ವೇತಭವನದಲ್ಲಿ 90 ನಿಮಿಷ ಮಾತುಕತೆ ನಡೆದ ಬಳಿಕ ಈ ಘೋಷಣೆಯನ್ನು ಹೊರಡಿಸಲಾಗಿದೆ.

ಸಮ್ಮೇಳನ ನಡೆಯುವ ಸ್ಥಳವನ್ನು ಬಳಿಕ ಘೋಷಿಸಲಾಗುವುದು ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಸಾರಾ ಸ್ಯಾಂಡರ್ಸ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News