ಅಫ್ಘಾನ್ ಭೇಟಿಯನ್ನು ರದ್ದುಗೊಳಿಸಿದ ಪೆಲೋಸಿ

Update: 2019-01-19 15:53 GMT

ವಾಶಿಂಗ್ಟನ್, ಜ. 19: ಅಫ್ಘಾನಿಸ್ತಾನದಲ್ಲಿರುವ ಅಮೆರಿಕ ಸೈನಿಕರನ್ನು ಭೇಟಿಯಾಗಲು ವಾಣಿಜ್ಯ ವಿಮಾನವೊಂದರಲ್ಲಿ ಅಫ್ಘಾನಿಸ್ತಾನಕ್ಕೆ ಪ್ರಯಾಣಿಸುವ ತನ್ನ ಯೋಜನೆಯನ್ನು ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೊಸಿ ಶುಕ್ರವಾರ ರದ್ದುಗೊಳಿಸಿದ್ದಾರೆ.

ಈ ಪ್ರವಾಸದ ಬಗ್ಗೆ ಬಹಿರಂಗವಾಗಿ ಮಾತನಾಡುವ ಮೂಲಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭದ್ರತಾ ಅಪಾಯವನ್ನು ಉಂಟು ಮಾಡಿದ್ದಾರೆ ಎಂದು ಅವರು ಹೇಳಿದರು.

ಇದು ಅಮೆರಿಕದ ಫೆಡರಲ್ ಸರಕಾರದ ಆಂಶಿಕ ಸ್ಥಾಗಿತ್ಯಕ್ಕೆ ಸಂಬಂಧಿಸಿ ಪೆಲೋಸಿ ಮತ್ತು ಟ್ರಂಪ್ ನಡುವೆ ನಡೆಯುತ್ತಿರುವ ಮುಸುಕಿನ ಗುದ್ದಾಟದ ಇನ್ನೊಂದು ಉದಾಹರಣೆಯಾಗಿದೆ.

ಜನವರಿ 29ರಂದು ಮಾಡಬೇಕಾಗಿರುವ ‘ಸ್ಟೇಟ್ ಆಫ್ ದ ಯೂನಿಯನ್’ ಭಾಷಣವನ್ನು ಮುಂದೂಡುವಂತೆ ಈ ವಾರದ ಆರಂಭದಲ್ಲಿ ಪೆಲೋಸಿ, ಟ್ರಂಪ್‌ರನ್ನು ಕೇಳಿದ್ದರು.

ಇದಕ್ಕೆ ಅವರು ಭದ್ರತಾ ಬೆದರಿಕೆಯ ಕಾರಣವನ್ನು ನೀಡಿದ್ದರು. ಅಮೆರಿಕ ಸರಕಾರ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ವಿವಿಧ ಭದ್ರತಾ ಸಂಸ್ಥೆಗಳಿಗೆ ಹಣ ಪಾವತಿಯಾಗಿಲ್ಲದಿರುವುದನ್ನು ಸ್ಮರಿಸಬಹುದಾಗಿದೆ.

ಇದಕ್ಕೆ ಪ್ರತಿಯಾಗಿ, ಸೇನಾ ವಿಮಾನವೊಂದರಲ್ಲಿ ಪೆಲೋಸಿ ಮತ್ತು ಕಾಂಗ್ರೆಸ್ ನಿಯೋಗವೊಂದು ಅಫ್ಘಾನಿಸ್ತಾನಕ್ಕೆ ಭೇಟಿ ನೀಡುವುದಕ್ಕೆ ಟ್ರಂಪ್ ತಡೆಯೊಡ್ಡಿದ್ದರು. ಅಫ್ಘಾನಿಸ್ತಾನಕ್ಕೆ ವಾಣಿಜ್ಯ ವಿಮಾನದಲ್ಲಿ ಹೋಗಬಹುದು ಎಂಬ ಸಲಹೆಯನ್ನೂ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News