ಅಂಗನವಾಡಿ ಶಿಕ್ಷಕಿಯರು ಮಹಾ ಮಾತೆಯರು : ರೋ/ಸಹಾಯಕ ರಾಜ್ಯಪಾಲ ಪ್ರಕಾಶ್ ಕಾರಂತ್

Update: 2019-01-20 15:04 GMT

ಮೂಡುಬಿದಿರೆ, ಜ. 20: ಪುಟಾಣಿ ಮಕ್ಕಳಲ್ಲಿರುವ ಸೃಜನಾತ್ಮಕ ಪ್ರತಿಭೆಯನ್ನು ಗುರುತಿಸಿ ಯಶಸ್ಸಿಗೆ ಪ್ರೋತ್ಸಾಹಿಸುವವರು  ಅಂಗನವಾಡಿ ಶಿಕ್ಷಕಿಯರು. ಮನೆಯಲ್ಲಿ ಒಂದು ಮಗುವವನ್ನು ಸಾಕಲು ಕಷ್ಟಪಡುವ ತಾಯಂದಿರುವ ಅಂಗನವಾಡಿಯಲ್ಲಿ ತಮ್ಮ ಮಕ್ಕಳನ್ನು ಬಿಟ್ಟು ಕೆಲಸಗಳಿಗೆ ಹೋಗುತ್ತಾರೆ. ಅಂಗನವಾಡಿಗಳಲ್ಲಿ ಸುಮಾರು 20 ರಿಂದ 30 ಮಕ್ಕಳನ್ನು ಸಂಬಾಳಿಸುವ ಅಂಗನವಾಡಿ ಶಿಕ್ಷಕಿಯರು ಮಹಾ ಮಾತೆಯರು ಎಂದು ರೋಟರಿ ಝೋನ್ 4ರ ಸಹಾಯಕ ರಾಜ್ಯಪಾಲ ಪ್ರಕಾಶ್ ಕಾರಂತ್ ಹೇಳಿದರು.

ಅವರು ರೋಟರಿ ಕ್ಲಬ್ ಮೂಡುಬಿದಿರೆ ಇದರ ವತಿಯಿಂದ ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆಯ ನಹಯೋಗದೊಂದಿಗೆ ಮೂಡುಬಿದಿರೆಯ ಸಮಾಜ ಮಂದಿರದಿಂದ ರೋಟರಿ ಶಾಲೆ ವರೆಗೆ ನಡೆದ "ಬೇಟಿ ಬಚಾವೋ ಬೇಟಿ ಪಡಾವೋ" ಜಾಗೃತಿ ಜಾಥಾವನ್ನು ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಯೋಜನಾಧಿಕಾರಿ ಶ್ಯಾಮಲಾ ಅವರ ಜತೆಗೂಡಿ ಹಸಿರು ನಿಶಾನೆ ತೋರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ನಂತರ ರೋಟರಿ ಶಾಲೆಯ ಆವರಣದಲ್ಲಿ  ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗಾಗಿ ನಡೆದ ಆಟೋಟ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಸ್ಪರ್ಧೆ "ಆಶಾ ಸ್ಪೂರ್ತಿ 2019"ನ್ನು ರೋಟರಿ ಅಧ್ಯಕ್ಷ ಡಾ/ರಮೇಶ್ ಅವರು ಉದ್ಘಾಟಿಸಿ ಶುಭ ಹಾರೈಸಿದರು.

ಸಿಡಿಪಿಒ ಶ್ಯಾಮಲಾ ಮಾತನಾಡಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಲ್ಲಿರುವ ಪ್ರತಿಭೆಗಳನ್ನು ಅನಾವರಣಗೊಳಿಸುವ ಅವಖಾಶ ವನ್ನು ಮೂಡುಬಿದಿರೆಯ ರೋಟರಿ ಕ್ಲಬ್ ನೀಡಿರುವುದು ಶ್ಲಾಘನೀಯ. ದೇಶದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಇಳಿಮುಖವಾಗುತ್ತಿದೆ. ಆದ್ದರಿಂದ ಸರಕಾರವು ಜಾರಿಗೆ ತಂದಿರುವ ಯೋಜನೆಗಳನ್ನು ಕಾರ್ಯಗತಗೊಳಿಸಲು ವಿವಿಧ ಸಂಘ ಸಂಸ್ಥೆಗಳು ಕೈಜೋಡಿಸಿದಾಗ ಜಾಗೃತಿ ಮೂಡಲು ಸಾಧ್ಯ ಎಂದರು.

ರೋಟರಿ ಕ್ಲಬ್‍ನ ಕಾರ್ಯದರ್ಶಿ ಸಿ.ಹೆಚ್.ಗಫೂರ್, ಮೂಡುಬಿದಿರೆ ವಲಯದ ಮೇಲ್ವೀಚಾರಕಿ ಕಾತ್ಯಾಯಿನಿ, ಕಲ್ಲಮುಂಡ್ಕೂರು ವಲಯದ ಭಾರತಿ, ಶಿರ್ತಾಡಿ ವಲಯದ ರತಿ ಶೆಟ್ಟಿ ಹಾಗೂ ಬೆಳುವಾಯಿ ವಲಯದ ಶುಭ ಅವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಮೂಡುಬಿದಿರೆ ವಲಯದ ಸಭಾಪತಿ ಸೂರಜ್ ಬನ್ನಡ್ಕ ಸ್ವಾಗತಿಸಿದರು. ಅವಿಲ್ ಡಿ"ಸೋಜಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News