ಮೂಡುಬಿದಿರೆ: ಪಾದಯಾತ್ರೆ ಖ್ಯಾತಿಯ ಡಿಎಂಪೈ ನಿಧನ

Update: 2019-01-20 15:08 GMT

ಮೂಡುಬಿದಿರೆ, ಜ. 20: ಎರಡು ದಶಕಗಳಿಂದ ಶ್ರೀ ಕ್ಷೇತ್ರ ಕಟೀಲಿಗೆ ಮತ್ತು ಹದಿನೇಳು ವರ್ಷಗಳಿಂದ ಶ್ರೀ ಕ್ಷೇತ್ರ ಇರುವೈಲು ಶ್ರೀ ದುರ್ಗಾಪರಮೇಶ್ವರಿಯ ಸನ್ನಿಧಿಗೆ ಪಾದಯಾತ್ರೆ ಸೇವೆ ಕೈಗೊಳ್ಳುವ ಮೂಲಕ ಗಮನ ಸೆಳೆದಿದ್ದ ಇರ್ವತ್ತೂರು ಡಿ.ಎಂ.ಪೈ ಯಾನೆ ದೇವದಾಸ ಮಹಾದೇವ ಪೈ ( 61) ಅವರು ಹೃದಯಾಘಾತದಿಂದ ಮುಂಬೈನ ಸಯಾನ್‍ನಲ್ಲಿ ಶನಿವಾರ ರಾತ್ರಿ ನಿಧನ ಹೊಂದಿದರು.

ಅವರು ಪತ್ನಿ, ಓರ್ವ ಪುತ್ರ, ಪುತ್ರಿಯನ್ನು ಅಗಲಿದ್ದಾರೆ. 

ಎರಡೂವರೆ ದಶಕಗಳ ಕಾಲ ಮುಂಬೈನಲ್ಲಿದ್ದ ಅವರು 1995ರಿಂದ ಮೂಡುಬಿದಿರೆಯಲ್ಲಿ ನೆಲೆಸಿ ಪೈ ಚರುಂಬುರಿ, ವಡಾಪಾವ್ ವ್ಯಾಪಾರಿಯಾಗಿದ್ದರು. ದೇವಿಯ ಭಕ್ತರಾಗಿ ವರ್ಷವೂ ನವರಾತ್ರಿಯ ಸಂದರ್ಭದಲ್ಲಿ ಈವರೆಗೆ ಮೂಡುಬಿದಿರೆಯಿಂದ  ಶ್ರೀ ಕ್ಷೇತ್ರ ಕಟೀಲಿಗೆ 20 ಬಾರಿ, ಇರುವೈಲು ಶ್ರೀ ದುರ್ಗಾಪರಮೇಶ್ವರಿಯ ಸನ್ನಿಧಿಗೆ 17 ಬಾರಿ ಪಾದಯಾತ್ರೆ ಸೇವೆ ಸಲ್ಲಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ ಸಮಾನ ಮನಸ್ಕರನ್ನೂ ಸೇರಿಸಿಕೊಂಡು ಸಾಮೂಹಿಕ ಪಾದಯಾತ್ರೆ ನಡೆಸಿದ್ದರು.

ಇತ್ತೀಚಿನ ವರ್ಷಗಳಲ್ಲಿ ಆಸ್ತಿಕರನ್ನು ವಿಶೇಷವಾಗಿ ಸೆಳೆಯುತ್ತಿರುವ ಅಮ್ಮನೆಡೆಗೆ ನಮ್ಮ ನಡಿಗೆಯಂತಹ ಪಾದಯಾತ್ರೆ ಕಾರ್ಯಕ್ರಮಗಳಿಗೂ ಮೊದಲೇ ಪೈಯವರ ಪಾದಯಾತ್ರೆ ಸೇವೆ ಆರಂಭವಾಗಿತ್ತು ಎನ್ನುವುದು ಗಮನಾರ್ಹವಾಗಿದೆ.  ಮುಂಬೈನಲ್ಲಿದ್ದಾಗಲೇ ಯಕ್ಷಗಾನ ಕಲಾ ಸಂಘಟನೆಯಲ್ಲಿ ಸಕ್ರಿಯರಾಗಿ, ಸಣ್ಣ ಪಾತ್ರಗಳ ಮೂಲಕ ಗಮನ ಸೆಳೆದಿದ್ದ ಪೈಯವರು ಯಕ್ಷಗಾನ ಕಲಾಭಿಮಾನಿಯಾಗಿ, ಸಂಘಟಕರಾಗಿ, ಪೋಷಕರಾಗಿ ವಿಶೇಷ ಕೊಡುಗೆ ಸಲ್ಲಿಸಿದ್ದರು.

ಪೈಯವರ ಒತ್ತಾಸೆಯಂತೆ ಇರುವೈಲು ಮೇಳದವರಿಂದ ಪ್ರಥಮ ಎಂಬಂತೆ ಈವರೆಗೆ ಎರಡು ಬಾರಿ ಶ್ರೀಕಟೀಲು ಕ್ಷೇತ್ರ ಮಹಾತ್ಮೆ ಪ್ರದರ್ಶನ ಮೂಡುಬಿದಿರೆ ಹಾಗೂ ಇರ್ವತ್ತೂರಿನಲ್ಲಿ ನಡೆದಿದೆ ಎನ್ನುವುದೂ ವಿಶೇಷ. ಚರುಂಬುರಿ ವ್ಯಾಪಾರಿಯಾಗಿದ್ದರೂ ಸಣ್ಣ ಸಂಪಾದನೆಯನ್ನೆಲ್ಲ ಯಕ್ಷಗಾನ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅಳಿಲ ಸೇವೆಯ ರೂಪದಲ್ಲಿ ಅವರು ವಿನಿಯೋಗಿಸಿದ್ದರು. ಸಹೋದನ ಮನೆಯವರ ಶುಭ ಸಮಾರಂಭದಲ್ಲಿ ಶನಿವಾರ ಪಾಲ್ಗೊಂಡ ಅವರು ರಾತ್ರಿ ಹೃದಯಾಘಾತಕ್ಕೊಳಗಾಗಿದ್ದು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಮೃತಪಟ್ಟರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News