ಪ್ರಬಲ ದಲಿತ ಚಳವಳಿ ತುರ್ತಿನ ಅಗತ್ಯ: ಮುನೀರ್ ಕಾಟಿಪಳ್ಳ

Update: 2019-01-20 15:24 GMT

ಮಂಗಳೂರು, ಜ.20: ಭಾರತದಲ್ಲಿ ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಪ್ರೋತ್ಸಾಹಿಸುವ ಮನುವಾದಿ ಸರಕಾರವು ಅಸ್ತಿತ್ವದಲ್ಲಿದ್ದು, ದಲಿತರ ಮೇಲೆ ನಿರಂತರ ದಾಳಿ, ದಬ್ಬಾಳಿಕೆ ನಡೆಯುತ್ತಿದೆ. ಈ ಬಗ್ಗೆ ಪ್ರಬಲವಾದ ದಲಿತ ಚಳವಳಿಗಳ ತುರ್ತಿನ ಆವಶ್ಯಕತೆ ಇದೆ ಎಂದು ಡಿವೈಎಫ್‌ಐ ರಾಜ್ಯ ಸಮಿತಿ ಅಧ್ಯಕ್ಷ ಮುನೀರ್ ಕಾಟಿಪಳ್ಳ ಅಭಿಪ್ರಾಯಪಟ್ಟರು.

ಯೆಯ್ಯಡಿ ಕೊಂಚಾಡಿಯಲ್ಲಿ ಇತ್ತೀಚೆಗೆ ನಡೆದ ದಲಿತ ಹಕ್ಕುಗಳ ಸಮಿತಿಯ ಜಿಲ್ಲಾ ಮಟ್ಟದ ಎರಡು ದಿನಗಳ ಅಧ್ಯಯನ ಶಿಬಿರದ ಸ್ವಾಗತ ಸಮಿತಿ ರಚನಾ ಸಭೆಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾಡುತ್ತಿದ್ದರು.

ಕೇವಲ ಸಮುದಾಯಗಳ ಮೇಲೆ ದಿನನಿತ್ಯ ವಿವಿಧ ರೀತಿಯ ಕ್ಷುಲಕ ಕಾರಣಗಳಿಗಾಗಿ ಕೊಲೆಗಳು ನಡೆಯುತ್ತಿವೆ. ಪ್ರಬಲ ದಲಿತ ಚಳವಳಿಗಳು ಗ್ರಾಮಾಂತರ ಪ್ರದೇಶದಿಂದ ಬೆಳೆದು ಬರಬೇಕಾಗಿದೆ. ಇದು ತುರ್ತಿನ ಅವಶ್ಯಕತೆ ಎಂದು ಹೇಳಿದರು.

ಸಭೆಯ ಅಧ್ಯಕ್ಷತೆಯನ್ನು ಸ್ಥಳೀಯ ಸಿಪಿಎಂ ಪಕ್ಷದ ಹಿರಿಯ ಸದಸ್ಯ ತುಕರಾಮ ಕೊಂಚಾಡಿ ವಹಿಸಿದ್ದರು. ಈ ಸಮಯದಲ್ಲಿ ಸುಮಾರು 60 ಮಂದಿಯ ಸ್ವಾಗತ ಸಮಿತಿಯನ್ನು ರಚಿಸಲಾಯಿತು.

ಸಭೆಯಲ್ಲಿ ಪ್ರಗತಿಪರ ಚಿಂತಕ ಡಾ. ಕೃಷ್ಣಪ್ಪ ಕೊಂಚಾಡಿ, ಸಮಾಜ ಸೇವಕ ಎಫ್.ಎಕ್ಸ್. ಪಿಂಟೋ, ಕಟ್ಟಡ ಕಾರ್ಮಿಕರ ಸಂಘದ ಸ್ಥಳೀಯ ಮುಂದಾಳು ದಯಾನಂದ ಶೆಟ್ಟಿಗಾರ್, ದಲಿತ ಹಕ್ಕುಗಳ ಸಮಿತಿಯ ತಿಮ್ಮಯ್ಯ ಕೊಂಚಾಡಿ ಮತ್ತಿತರರು ಇದ್ದರು.

ಎರಡು ದಿನಗಳ ಅಧ್ಯಯನ ಶಿಬಿರವು ಫೆ.17 ಮತ್ತು 18ರಂದು ಯೆಯ್ಯಡಿ ಕೊಂಚಾಡಿಯಲ್ಲಿ ಜರುಗಲಿದ್ದು, ಈ ಬಗ್ಗೆ ಸಮಗ್ರ ಮಾಹಿತಿಯನ್ನು ಸಿಪಿಎಂನ ಸ್ಥಳೀಯ ನಾಯಕ ರವಿಚಂದ್ರ ಕೊಪ್ಪಲಕಾಡು ನೀಡಿದರು.

ಕಾರ್ಯಕ್ರಮದಲ್ಲಿ ಶಶಿಕುಮಾರ್ ಗುಂಡಳಿಕೆ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News