ಬೆಳ್ತಂಗಡಿ: ವಿದ್ಯುತ್ ತಂತಿ ಸ್ಪರ್ಶಿಸಿ ಓರ್ವ ಮೃತ್ಯು; ಇನ್ನೋರ್ವನಿಗೆ ಗಂಭೀರ ಗಾಯ

Update: 2019-01-20 15:40 GMT

ಬೆಳ್ತಂಗಡಿ, ಜ. 20: ನೆರಿಯದಿಂದ ಗುರುವಾಯನಕೆರೆಗೆ ವಿದ್ಯುತ್ ಸಂಪರ್ಕಿಸುವುದಕ್ಕಾಗಿ ಬೆಳ್ತಂಗಡಿ ತಾಲೂಕಿನ ನಡದಲ್ಲಿ ಖಾಸಗಿ ಸಂಸ್ಥೆಯ ವಿದ್ಯುತ್ ಘಟಕದ ಕೇಬಲ್ ಅಳವಡಿಕೆ ಕಾಮಗಾರಿಯ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಓರ್ವ ಸಾವನ್ನಪ್ಪಿದ್ದು, ಇನ್ನೋರ್ವ ಗಂಭೀರ ಗಾಯಗೊಂಡ ಘಟನೆ ರವಿವಾರ ನಡೆದಿದೆ.

ಮಂಡ್ಯದ ಮದ್ದೂರು ನಿವಾಸಿ ಕಾಂತರಾಜು ಯಾನೆ ಶ್ರೀಕಾಂತ್ (24) ಮೃತರು ಎಂದು ಗುರುತಿಸಲಾಗಿದೆ. ಕುಣಿಗಲ್ ನಿವಾಸಿ ಶೇಷಾದ್ರಿ ಕುಮಾರ್ (25) ಗಂಭೀರ ಗಾಯಗೊಂಡ ಯುವಕ.

ನೆರಿಯದ ಖಾಸಗಿ  ವಿದ್ಯುತ್ ಘಟಕದಿಂದ ಗುರುವಾಯನಕೆರೆಗೆ ವಿದ್ಯುತ್ ಸಂಪರ್ಕಿಸುದಕ್ಕಾಗಿ ಕೇಬಲ್ ಹಾಕುವ ಕಾಮಗಾರಿ ನಡೆಯುತ್ತಿದ್ದು, ಇದರ ಪಕ್ಕದಲ್ಲೇ ಮೆಸ್ಕಾಂಗೆ ಸಂಬಂಧಪಟ್ಟ 33 ಕೆವಿ ವಿದ್ಯುತ್ ಲೇನ್ ಹೋಗಿದೆ. ರವಿವಾರ ನಡ ಸರಕಾರಿ ಪ್ರೌಢಶಾಲೆಯ ಹಿಂಬದಿಯಲ್ಲಿ ಕಾಮಗಾರಿ ನಡೆಯುದ್ದ ವೇಳೆ ಘಟನೆ ನಡೆದಿದ್ದು, ಕಂಬವನ್ನು ಕ್ರೈನ್ ಮೂಲಕ ಎತ್ತಿದಾಗ ಅದು ವಿದ್ಯುತ್ ತಂತಿಗೆ ತಾಗಿ, ಕಾರ್ಮಿಕರಿಗೆ ಶಾಕ್ ಹೊಡೆದಿದೆ. ಓರ್ವ ಮೃತ ಪಟ್ಟಿದ್ದು, ಇನ್ನೋರ್ವ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಮಗಾರಿಯ ಕುರಿತು ನಮಗೆ ಮಾಹಿತಿ ಇಲ್ಲ. ಲೈನ್ ಆಫ್ ಆಗಬೇಕಾದರೆ ಮೇಲಾಧಿಕಾರಿಗಳು ಅನುಮತಿ ನೀಡಬೇಕಾಗುತ್ತದೆ ಎಂದು ಮೆಸ್ಕಾಂ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News