ಮಂಗನ ಕಾಯಿಲೆ: ಸಾಗರದ ಮಹಿಳೆ ಮಣಿಪಾಲ ಕೆಎಂಸಿಯಲ್ಲಿ ಮೃತ್ಯು

Update: 2019-01-20 15:56 GMT

ಉಡುಪಿ, ಜ.20: ಮಂಗನ ಕಾಯಿಲೆಯಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಮಹಿಳೆಯೊಬ್ಬರು ಜ.18ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಗ್ಗೆ ವರದಿಯಾಗಿದೆ.

ಮೃತರನ್ನು ಸಾಗರ ತಾಲೂಕಿನ ಅರಳಗೋಡು ಗ್ರಾಮದ ಸುಬ್ಬರಾವ್ ಎಂಬವರ ಪತ್ನಿ ಲಕ್ಷ್ಮೀದೇವಿ ಎಂದು ಗುರುತಿಸಲಾಗಿದೆ. ಮಂಗನ ಕಾಯಿಲೆಯಿಂದ ಬಳಲುತ್ತಿದ್ದ ಲಕ್ಷ್ಮೀದೇವಿ ಜ.15ರಂದು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದು, ಈ ಕಾಯಿಲೆಯಿಂದ ಅವರಿಗೆ ಇದ್ದ ಹೃದಯ ಸಂಬಂಧಿ ಕಾಯಿಲೆ ಉಲ್ಬಣಗೊಂಡಿತ್ತು. ಇದರಿಂದ ಚಿಕಿತ್ಸೆ ಫಲಕಾರಿಯಾಗದೆ ಲಕ್ಷ್ಮೀದೇವಿ ಮೃತಪಟ್ಟರು ಎಂದು ಉಡುಪಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ವಾಸುದೇವ ಉಪಾಧ್ಯಾಯ ತಿಳಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಸಾಗರ ಹಾಗೂ ಆಸುಪಾಸಿನ ಸುಮಾರು 100 ಜನರು ಈವರೆಗೆ ಶಂಕಿತ ಮಂಗನ ಕಾಯಿಲೆಗೆ ಚಿಕಿತ್ಸೆ ಪಡೆಯಲು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದು, ಇದರಲ್ಲಿ ಸುಮಾರು 40 ಮಂದಿಗೆ ಮಂಗನ ಕಾಯಿಲೆ ಇರುವ ಬಗ್ಗೆ ಮತ್ತು 59 ಜನರಿಗೆ ಮಂಗನ ಕಾಯಿಲೆ ಇಲ್ಲದ ಬಗ್ಗೆ ವರದಿಯಾಗಿದೆ. ಓರ್ವರ ವರದಿ ಬರಲು ಬಾಕಿ ಇದೆ.

ಮಣಿಪಾಲದಲ್ಲಿ ದಾಖಲಾಗಿದ್ದ 76 ಜನ ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆ ಪಡೆದು ಈಗಾಗಲೇ ಬಿಡುಗಡೆ ಹೊಂದಿದ್ದು, 23 ಮಂದಿ ಆಸ್ಪತ್ರೆಯಲ್ಲಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 40 ಮಂಗನ ಕಾಯಿಲೆ ಪೀಡಿತರ ಪೈಕಿ ಇದು ಮೊದಲ ಮೃತಪಟ್ಟ ಪ್ರಕರಣವಾಗಿದೆ ಎಂದು ಮಣಿಪಾಲ ಕೆಎಂಸಿ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

ಈ ಹಿಂದೆ ಶಂಕಿತ ಮಂಗನ ಕಾಯಿಲೆಯಿಂದ ಕೆಎಂಸಿಗೆ ದಾಖಲಾಗಿದ್ದ ಸಾಗರ ತಾಲೂಕಿನ ಸವಿತಾ ಎಂಬವರು ಜ.14ರಂದು ಮೃತಪಟಿದ್ದರು. ಆದರೆ ಅವರಿಗೆ ಮಂಗನ ಕಾಯಿಲೆ ಇರಲಿಲ್ಲ. ಇವರ ಸಾವಿಗೆ ಬೇರೆ ಕಾಯಿಲೆ ಕಾರಣವಾಗಿತ್ತು ಎಂದು ಹೇಳಲಾಗಿತ್ತು.

ಹೆಬ್ರಿಯಲ್ಲಿ ಒಂದು ಮಂಗನ ಕಳೇಬರ ಪತ್ತೆ

ಉಡುಪಿ ಜಿಲ್ಲೆಯ ಹೆಬ್ರಿ ಸಮೀಪ ರವಿವಾರ ಒಂದು ಮಂಗ ಸತ್ತಿದ್ದು, ಇದನ್ನು ಮರಣೋತ್ತರ ಪರೀಕ್ಷೆ ನಡೆಸಿ ವಿಸೇರಾವನ್ನು ಪರೀಕ್ಷೆಗಾಗಿ ಶಿವಮೊಗ್ಗ ಹಾಗೂ ಮಣಿಪಾಲ ಕೆಎಂಸಿ ಆಸ್ಪತ್ರೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಮಂಗನ ಕಾಯಿಲೆಗೆ ಜಿಲ್ಲಾ ನೋಡಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ತಿಳಿಸಿದ್ದಾರೆ.

ಶಿವಮೊಗ್ಗಕ್ಕೆ ಕಳುಹಿಸಿದ ಮಂಗಗಳ ಅಂಗಾಂಗ ಪರೀಕ್ಷೆಯ ವರದಿಯು ವಿಳಂಬವಾಗಿ ಬರುತ್ತಿರುವುದರಿಂದ ಜ.14ರಿಂದ ಶಿವಮೊಗ್ಗದ ಜೊತೆಗೆ ಮಣಿಪಾಲ ಆಸ್ಪತ್ರೆಗೂ ಪರೀಕ್ಷೆಗಾಗಿ ಮಂಗಗಳ ಅಂಗಾಂಗಗಳನ್ನು ಕಳುಹಿಸಲಾಗುತ್ತಿದೆ. ಮಣಿಪಾಲ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿ ಮರುದಿನವೇ ವರದಿ ಯನ್ನು ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ಈವರೆಗೆ ಉಡುಪಿ ಜಿಲ್ಲೆಯಲ್ಲಿ ಪತ್ತೆಯಾದ ಒಟ್ಟು ಮಂಗಗಳ ಪೈಕಿ 22 ಮಂಗಗಳ ಮರಣೋತ್ತರ ಪರೀಕ್ಷೆ ನಡೆಸಿ ವರದಿಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದರಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಎರಡನ್ನು ತಿರಸ್ಕರಿಸಲಾಗಿತ್ತು. ಈವರೆಗೆ ಶಿವಮೊಗ್ಗ ಪ್ರಯೋಗಾಲಯದಿಂದ ಎಂಟು ಮಂಗಗಳ ದೇಹ ದಲ್ಲಿ ಕೆಎಫ್‌ಡಿ ವೈರಸ್ ಪತ್ತೆಯಾಗಿದೆ ಎಂದು ವರದಿ ನೀಡಲಾಗಿದೆ. ಆದರೆ ಉಳಿದ 12 ಮಂಗಗಳ ವರದಿ ಇನ್ನೂ ಬಂದಿಲ್ಲ ಎಂದರು.

ಮಣಿಪಾಲ ಪ್ರಯೋಗಾಲಯಕ್ಕೆ ಕಳುಹಿಸಿದ ನಾಲ್ಕು ಮಂಗಗಳ ದೇಹದಲ್ಲಿ ವೈರಸ್ ಪತ್ತೆಯಾಗಿಲ್ಲ ಎಂದು ವರದಿ ಬಂದಿದೆ. ಇನ್ನೂ ಜ.19ರಂದು ಕಳುಹಿಸಿದ ಎರಡು ಹಾಗೂ ಇಂದು ಕಳುಹಿಸಿದ ಒಂದು ಮಂಗಗಳ ವರದಿ ಮಣಿಪಾಲ ಆಸ್ಪತ್ರೆಯಿಂದ ಇನ್ನಷ್ಟೆ ಬರಬೇಕಾಗಿದೆ ಎಂದು ಅವರು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News