ಬೋಟು ಸಹಿತ ಮೀನುಗಾರರ ನಾಪತ್ತೆ ಪ್ರಕರಣ: ನೌಕಪಡೆ ಕಾರ್ಯಾಚರಣೆ ಬಳಿಕ ಮುಂದಿನ ಹೋರಾಟಕ್ಕೆ ಸಜ್ಜು

Update: 2019-01-20 17:28 GMT

ಮಲ್ಪೆ, ಜ.20: ಬೋಟು ಸಹಿತ ಏಳು ಮಂದಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ನೌಕಪಡೆಯು ಆಳ ಸಮುದ್ರದಲ್ಲಿ ಹುಡುಕಾಟ ನಡೆಸುತ್ತಿದ್ದು, ಈ ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಮೀನುಗಾರರು ಸಭೆ ಸೇರಿ ಮುಂದಿನ ಹೋರಾಟದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.

ಕಳೆದ 36 ದಿನಗಳಿಂದ ನಾಪತ್ತೆಯಾಗಿರುವ ಬೋಟು ಸಹಿತ ಮೀನುಗಾರ ರಿಗೆ ತೀವ್ರ ಶೋಧ ನಡೆಯುತ್ತಿದ್ದು, ಕಳೆದ ಒಂದು ವಾರದಿಂದ 1000ಕ್ಕೂ ಅಧಿಕ ಆಳ ಸಮುದ್ರ ಮೀನುಗಾರಿಕಾ ಬೋಟುಗಳಲ್ಲಿಯೂ ಹುಡುಕಾಟ ನಡೆಸಲಾಗಿದೆ. ಆದರೆ ಈವೆಗೆ ಯಾವುದೇ ಸುಳಿವು ದೊರೆತಿಲ್ಲ.

ಈ ಹಿನ್ನೆಲೆಯಲ್ಲಿ ನೌಕಪಡೆಯ ಕಾರ್ಯಾಚರಣೆಯನ್ನು ಎದುರು ನೋಡು ತ್ತಿರುವ ಮೀನುಗಾರರು, ಅದರ ವರದಿಯ ಬಳಿಕ ಸಭೆಯಲ್ಲಿ ನಡೆಸಿ, ತನಿಖೆಯ ಸಾಧಕ, ಬಾಧಕಗಳ ಕುರಿತು ಚರ್ಚಿಸಿ ಮುಂದಿನ ನಿರ್ಧಾರದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮೀನುಗಾರ ಮುಖಂಡರು ತಿಳಿಸಿದ್ದಾರೆ.

ಎರಡು ದಿನಗಳಲ್ಲಿ ಕುಟುಂಬಕ್ಕೆ ಪರಿಹಾರ

ನಾಪತ್ತೆಯಾದ ಮೀನುಗಾರರ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಘೋಷಿಸಲಾದ ಒಂದು ಲಕ್ಷ ರೂ. ತಾತ್ಕಾಲಿಕ ಪರಿಹಾರ ಮೊತ್ತ ಶನಿವಾರ ಬಿಡುಗಡೆಗೊಂಡಿದ್ದು, ಎರಡು ಮೂರು ದಿನಗಳಲ್ಲಿ ಮೀನುಗಾರರ ಕುಟುಂಬಸ್ಥರಿಗೆ ನೀಡಲಾಗುವುದು ಎಂದು ಉಡುಪಿ ಜಿಲ್ಲಾಡಳಿತ ತಿಳಿಸಿದೆ.

ಮುಖ್ಯಮಂತ್ರಿ ಕಚೇರಿಯಿಂದ ಉಡುಪಿ ಜಿಲ್ಲಾಧಿಕಾರಿ ಕಚೇರಿಗೆ ಎರಡು ಲಕ್ಷ ರೂ. ಪರಿಹಾರ ಧನವು ಒಂದೇ ಚೆಕ್‌ನಲ್ಲಿ ಬಿಡುಗಡೆಯಾಗಿದೆ. ಸೋಮ ವಾರ ಜಿಲ್ಲಾಧಿಕಾರಿಗಳ ಖಾತೆಗೆ ಜಮಾ ಮಾಡಿಕೊಂಡ ಬಳಿಕ ಪ್ರತ್ಯೇಕ ಚೆಕ್ ಬರೆದು ಕುಟುಂಬಗಳಿಗೆ ಹಸ್ತಾಂತರಿಸಲಾಗುವುದು. ಮಲ್ಪೆ ಬಡನಿಡಿಯೂರು ನಿವಾಸಿ ಚಂದ್ರಶೇಖರ್ ಕೋಟ್ಯಾನ್ ಹಾಗೂ ದಾಮೋದರ್ ಸಾಲಿಯಾನ್ ಕುಟುಂಬಗಳಿಗೆ ಎರಡು ಮೂರು ದಿನಗಳಲ್ಲಿ ಪರಿಹಾರ ಮೊತ್ತ ತಲುಪಿಸ ಲಾಗುವುದೆಂದು ಅಪರ ಜಿಲ್ಲಾಧಿಕಾರಿ ಕೆ.ವಿದ್ಯಾ ಕುಮಾರಿ ಪತ್ರಿಕೆಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News