ಗುರುಪುರ ಹೊಸ ಸೇತುವೆ: ಭರದಿಂದ ಸಾಗುವ ಜಮೀನು ಸಮತಟ್ಟು ಕಾಮಗಾರಿ

Update: 2019-01-20 17:30 GMT

ಮಂಗಳೂರು, ಜ. 20: ರಾಷ್ಟ್ರೀಯ ಹೆದ್ದಾರಿ 169ರ ಮಂಗಳೂರು-ಮೂಡುಬಿದಿರೆ-ಸೊಲ್ಲಾಪುರವನ್ನು ಸಂಪರ್ಕಿಸುವ ಗುರುಪುರದ ಫಲ್ಗುಣಿ ನದಿಯಲ್ಲಿ ನಿರ್ಮಿಸಲಾದ ಸೇತುವೆಯ ಸನಿಹದಲ್ಲೇ ನಿರ್ಮಿಸಲಾಗುವ ಹೊಸ ಸೇತುವೆ ಕಾಮಗಾರಿಗೆ ಜಮೀನು ಸಮತಟ್ಟುಗೊಳಿಸುವ ಕಾರ್ಯ ಭರದಿಂದ ಸಾಗುತ್ತಿವೆ.

ಕಳೆದ ಮಳೆಗಾಲದಲ್ಲಿ ಮೂಲರಪಟ್ಣ ಸೇತುವೆ ಕುಸಿದುಬಿದ್ದ ಬಳಿಕ ಗುರುಪುರ ಸೇತುವೆಯ ದೃಢತೆಯ ಬಗ್ಗೆಯೂ ಜನರಿಗೆ ಆತಂಕ ಉಂಟಾಗಿತ್ತು. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ತಂಡ ಗುರುಪುರ ಸೇತುವೆಯ ಧಾರಣಾ ಸಾಮರ್ಥ್ಯವನ್ನು ಪರೀಕ್ಷೆ ನಡೆಸಿ ವರದಿ ಸಲ್ಲಿಸಿತ್ತು. ಈ ವರದಿಯಲ್ಲಿ ವಾಹನಗಳ ತೂಕ(ಸಾಂದ್ರತೆ)ಕ್ಕೆ ತಕ್ಕಂತೆ ಸೇತುವೆಯು ಧಾರಣೆಯ ಶಕ್ತಿ ಹೊಂದಿಲ್ಲ ಎಂದು ತಿಳಿಸಿತ್ತು.

ಮಂಗಳೂರಿನಿಂದ ಮೂಡುಬಿದಿರೆಗೆ ಸಾಗುವ ಸೇತುವೆಯ ಎಡಭಾಗದಲ್ಲಿ ಈ ನೂತನ ಸೇತುವೆಯು ನಿರ್ಮಾಣಗೊಳ್ಳಲಿದೆ. ಅದರಂತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿರುವ ಮೊಗರೋಡಿ ಕನ್ಸ್‌ಸ್ಟ್ರಕ್ಷನ್ ಕಂಪೆನಿಯು ಸೇತುವೆಯ ಎರಡೂ ಭಾಗದಲ್ಲಿ ಮಣ್ಣು ಸಮತಟ್ಟುಗೊಳಿಸಿ ಪಿಲ್ಲರ್‌ಗಳಿಗೆ ಗುರುತು ಹಾಕುವ ಕೆಲಸ ಆರಂಭಿಸಿದೆ.

ಹಳೆ ಸೇತುವೆಯು ಕೇವಲ 4.5 ಮೀಟರ್ ಮಾತ್ರ ಅಗಲವಿರುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿತ್ತು. ಹೊಸ ಸೇತುವೆಯು 11 ಮೀ.ಅಗಲವಿರಲಿದ್ದು, ಪಾದಚಾರಿಗಳ ಓಡಾಟಕ್ಕೂ ಫುಟ್‌ಪಾತ್ ವ್ಯವಸ್ಥೆಯಾಗಲಿದೆ.

ಸೇತುವೆಯ ಉದ್ದವು 175 ಮೀಟರ್ ಇರಲಿದ್ದು, ಸುಮಾರು 7ರಿಂದ 9 ಪಿಲ್ಲರ್‌ಗಳನ್ನು ಹೊಂದಲಿದೆ. ಮುಂದಿನ ವರ್ಷಕ್ಕೆ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಗುತ್ತಿಗೆ ವಹಿಸಿಕೊಂಡ ಕಂಪೆನಿಯ ಮೂಲಗಳು ತಿಳಿಸಿವೆ.

ಸುಮಾರು 96 ವರ್ಷ ಹಿಂದೆ ಅಂದರೆ 1936ರಲ್ಲಿ ಬ್ರಿಟಿಷರು ಕುದುರೆಗಾಡಿ ಹಾದು ಹೋಗಲೆಂದು ಗುರುಪುರ ಸೇತುವೆಯನ್ನು ನಿರ್ಮಿಸಿದ್ದರು. ಇತ್ತೀಚಿನ ದಿನಗಳಲ್ಲಿ ಈ ಸೇತುವೆಯು ಶಿಥಿಲಗೊಂಡಿತ್ತು. ಕಳೆದ ವರ್ಷ ಮೂಲರಪಟ್ಣ ಸೇತುವೆ ಕುಸಿದ ಬಳಿಕ ಗುರುಪುರ ಸೇತುವೆಯೂ ಅಪಾಯದ ಭೀತಿ ಎದುರಿಸುತ್ತಿದೆ ಎಂಬ ಕೂಗಿನೊಂದಿಗೆ ಹೊಸ ಸೇತುವೆ ನಿರ್ಮಿಸಬೇಕು ಎಂಬ ಆಗ್ರಹವು ಕೇಳಿ ಬಂದಿತ್ತು. ಇದಕ್ಕಾಗಿ ಹೋರಾಟ ಸಮಿತಿಯೂ ರೂಪುಗೊಂಡಿತ್ತು. ಇದೀಗ ಹಳೆಯ ಸೇತುವೆಯ ಪಕ್ಕವೇ ಹೊಸ ಸೇತುವೆಯ ನಿರ್ಮಾಣಗೊಳ್ಳಲಿರುವುದು ಸ್ಥಳೀಯರ ಸಂತಸ ಹೆಚ್ಚಿಸಿವೆ. ಅಲ್ಲದೆ, ಈ ಸೇತುವೆಯನ್ನು ಬಳಸುವ ವಾಹನಿಗರೂ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿವೆ.

ಕುದುರೆಗಾಡಿಗಾಗಿ ನಿರ್ಮಿಸಲಾದ ಈ ಸೇತುವೆಯು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿದ ಬಳಿಕವಂತೂ ದಿನಂಪ್ರತಿ ಸಾವಿರಾರು ವಾಹನಗಳು ಈ ಸೇತುವೆಯನ್ನು ಬಳಸುತ್ತಿರುವುದು ಗಮನಾರ್ಹ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News