ಕಳವು ಪ್ರಕರಣ: ಲಾರಿ ಸಮೇತ ಆರೋಪಿ ವಶಕ್ಕೆ

Update: 2019-01-20 17:49 GMT

ಮಂಗಳೂರು, ಜ. 20: ಲಾರಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರಿ ಸಮೇತ ಆರೋಪಿಯನ್ನು ಸುರತ್ಕಲ್‌ನ ಮುಕ್ಕ ಟೋಲ್‌ಗೇಟ್ ಬಳಿ ಪಣಂಬೂರು ಪೊಲೀಸರು ರವಿವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕೋಟೆಕೊಪ್ಪ ನಿವಾಸಿ ಮಹೇಶ್ ಕೆ.ಎಸ್.(36) ಬಂಧಿತ ಆರೋಪಿ. ಈತನಿಂದ 7 ಲಕ್ಷ ರೂ. ಮೌಲ್ಯದ ಆರು ಚಕ್ರದ ಲಾರಿ, 9,000 ರೂ. ನಗದು, 5,000 ರೂ. ವೌಲ್ಯದ ಮೊಬೈಲ್ ಫೋನ್‌ನ್ನು ವಶಕ್ಕೆ ಪಡೆಯಲಾಗಿದೆ.

ಪ್ರಕರಣದ ವಿವರ: ಜ. 6ರಂದು ಬೆಂಗಳೂರು ಮೂಲದ ಲಾರಿ ಮಾಲಕ ಹೆಂಜಾರಪ್ಪ ಸಿದ್ದಪ್ಪ ಎಂಬವರಿಗೆ ಸೇರಿದ ಲಾರಿಯಲ್ಲಿ ಚಾಲಕ ಕೆಲಸಕ್ಕೆ ಸೇರಿದ್ದ ಮಹೇಶ್ ಎಂಬಾತನು ಬೆಂಗಳೂರಿನಿಂದ ಲೋಡ್ ಪಡೆದು ಮಂಗಳೂರು ತಲುಪಿ ಅನ್‌ಲೋಡ್ ಮಾಡಿದ್ದನು. ಬಳಿಕ ಆತ ಎಲ್ಲಿಗೂ ಬಾಡಿಗೆಗೆ ಹೋಗದೇ ಲಾರಿಯನ್ನು ಮಾರಾಟ ಮಾಡಲು ಪ್ರಯತ್ನಿಸಿದ್ದು, ನಾಲ್ಕು ದಿನಗಳು ಕಳೆದರೂ ಲಾರಿಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈ ಬಗ್ಗೆ ಪಣಂಬೂರು ಠಾಣೆಗೆ ಪ್ರಕರಣ ದಾಖಲಾಗಿತ್ತು.

ಪಣಂಬೂರು ಠಾಣಾ ಪೊಲೀಸರು ಸುರತ್ಕಲ್‌ನ ಮುಕ್ಕ ಟೋಲ್ ಗೇಟ್ ಬಳಿ ವಶಕ್ಕೆ ಪಡೆದಿದ್ದಾರೆ. ಲಾರಿಯನ್ನು ಪರಿಶೀಲಿಸಿದಾಗ ಲಾರಿ ಹಿಂಬದಿಯ ಎರಡು ಟೈರ್‌ಗಳು ಮತ್ತು ಟರ್ಪಾಲನ್ನು ಮಾರಾಟ ಮಾಡಿದ್ದು, ಲಾರಿಯನ್ನು ಮತ್ತು ಟೈರ್ ಮಾರಾಟ ಮಾಡಿದ ಹಣದಲ್ಲಿ ಖರ್ಚಾಗಿ ಉಳಿದ ಭಾಗಶಃ ನಗದನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಪಣಂಬೂರು ಪೊಲೀಸ್ ನಿರೀಕ್ಷಕ ರಫೀಕ್ ಕೆ.ಎಂ. ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪ-ನಿರೀಕ್ಷಕ ಉಮೇಶ್‌ಕುಮಾರ್ ಎಂ.ಎನ್., ಮಂಗಳೂರು ಉತ್ತರ ಉಪವಿಭಾಗ ರೌಡಿ ನಿಗ್ರಹ ದಳ ಮತ್ತು ಪಣಂಬೂರು ಪೊಲೀಸರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News