5 ಕೋಣೆ, ಖಾಸಗಿ ಅಡುಗೆಯಾಳು: ಜೈಲಿನಲ್ಲಿ ಶಶಿಕಲಾಗೆ ವಿಐಪಿ ಆತಿಥ್ಯ

Update: 2019-01-20 17:52 GMT

 ಬೆಂಗಳೂರು, ಜ.20: ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಪ್ರಕರಣದಲ್ಲಿ ನಾಲ್ಕು ವರ್ಷ ಜೈಲುಶಿಕ್ಷೆಗೆ ಗುರಿಯಾಗಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರ ಆಪ್ತ ಗೆಳತಿಯಾಗಿದ್ದ ವಿಕೆ ಶಶಿಕಲಾಗೆ ಜೈಲಿನಲ್ಲಿ ವಿಐಪಿ ಆತಿಥ್ಯ ನೀಡಲಾಗುತ್ತಿದೆ ಎಂಬುದು ಮಾಹಿತಿ ಹಕ್ಕು ಕಾಯ್ದೆ(ಆರ್‌ಟಿಐ)ಯಡಿ ಪಡೆದ ಮಾಹಿತಿಯಿಂದ ಬಹಿರಂಗಗೊಂಡಿದೆ.

 ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಶಶಿಕಲಾಗೆ ಐದು ಕೋಣೆ, ಖಾಸಗಿ ಅಡುಗೆ ಆಳು ಮತ್ತು ಅಡುಗೆ ಮನೆಗೆ ಸ್ಥಳಾವಕಾಶ ಮತ್ತು ಸಂದರ್ಶಕರಿಗೆ ತಡೆಯಿಲ್ಲದೆ ಭೇಟಿಯ ಅವಕಾಶ ಕಲ್ಪಿಸಲಾಗಿದೆ ಎಂಬುದು ಆರ್‌ಟಿಐ ಕಾರ್ಯಕರ್ತ ನರಸಿಂಹ ಮೂರ್ತಿ ಸಲ್ಲಿಸಿದ ಅರ್ಜಿಗೆ ದೊರೆತ ಮಾಹಿತಿಯಿಂದ ತಿಳಿದು ಬಂದಿದೆ. ಅಧಿಕಾರಿಗಳಿಗೆ ಲಂಚ ನೀಡಿ ಈ ಸೌಲಭ್ಯ ಪಡೆದುಕೊಳ್ಳಲಾಗಿದೆ ಎಂದು ಮೂರ್ತಿ ಆರೋಪಿಸಿದ್ದಾರೆ.

ಅದುವರೆಗೆ ಸೆಲ್‌ನಲ್ಲಿ ಐದು ಕೋಣೆಗಳಲ್ಲಿದ್ದ ಮಹಿಳಾ ಖೈದಿಗಳನ್ನು ಹೊರಗೆ ಕಳುಹಿಸಿ ಶಶಿಕಲಾಗೆ ಐದು ಕೋಣೆ ಒದಗಿಸಲಾಗಿದೆ. ಆಕೆಯನ್ನು ಭೇಟಿಯಾಗಲು ಬರುವವರಿಗೆ ಗುಂಪಿನಲ್ಲಿ ತೆರಳಿ, ಅದೂ ನೇರವಾಗಿ ಅವರಿದ್ದ ರೂಮಿನಲ್ಲಿ ಭೇಟಿಯಾಗಲು ಮತ್ತು ಸುಮಾರು ನಾಲ್ಕು ಗಂಟೆ ಅಲ್ಲಿರಲು ಅವಕಾಶವಿದೆ. ಇಲ್ಲಿ ನಿಯಮವನ್ನು ಗಾಳಿಗೆ ತೂರಲಾಗಿದೆ ಎಂದು ಮೂರ್ತಿ ಹೇಳಿದ್ದಾರೆ. ಶಶಿಕಲಾರನ್ನು 2017ರ ಫೆಬ್ರವರಿ 14ರಂದು ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಕಳುಹಿಸಲಾಗಿದೆ.

  ಅದೇ ವರ್ಷ, ಶಶಿಕಲಾಗೆ ಜೈಲಿನಲ್ಲಿ ರಾಜಾತಿಥ್ಯ ನೀಡುತ್ತಿರುವ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿ ಡಿ.ರೂಪಾ ಆರೋಪಿಸಿದ್ದರು. ಪ್ರತ್ಯೇಕ ಅಡುಗೆ ಕೋಣೆ, ಅಜಂತಾ ಎಂಬ ಹೆಸರಿನ ಅಡುಗೆ ಆಳು, ಹೆಚ್ಚುವರಿ ಕೋಣೆಗಳು, ಹೆಚ್ಚುವರಿ ಸಂದರ್ಶನದ ಅವಧಿ ಇತ್ಯಾದಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಅಧಿಕಾರಿಗಳಿಗೆ ಸುಮಾರು 2 ಕೋಟಿ ರೂ. ಮೊತ್ತದ ಲಂಚ ಪಾವತಿಸಲಾಗಿದೆ. ಆಗಿನ ಬಂದೀಖಾನೆ ಅಧೀಕ್ಷಕ ಎಚ್.ಎನ್.ಸತ್ಯನಾರಾಯಣ ರಾವ್ ಅವರೂ ಲಂಚದ ಫಲಾನುಭವಿಯಾಗಿರುವ ಸಾಧ್ಯತೆಯಿದೆ ಎಂದು ರೂಪಾ ಆರೋಪಿಸಿದ್ದರು.

ಬಳಿಕ ಅವರನ್ನು ಸಂಚಾರ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು ಮತ್ತು ರಾವ್‌ರನ್ನು ರಜೆ ಮೇಲೆ ತೆರಳುವಂತೆ ಸೂಚಿಸಲಾಗಿತ್ತು. ಪ್ರಕರಣದ ತನಿಖೆ ನಡೆಸಿದ್ದ ನಿವೃತ್ತ ಅಧಿಕಾರಿ ವಿನಯ್ ಕುಮಾರ್, ನಿಯಮಾವಳಿಗಳನ್ನು ಗಾಳಿಗೆ ತೂರಿ ಶಶಿಕಲಾಗೆ ರಾಜಾತಿಥ್ಯ ನೀಡುತ್ತಿರುವುದನ್ನು ದೃಢಪಡಿಸಿದ್ದರು. ಸಿಸಿಟಿವಿ ಫೂಟೇಜ್ ಮತ್ತು ಜೈಲಿನ ಅಧಿಕಾರಿಗಳ ದಾಖಲೆ ಪುಸ್ತಕವನ್ನು ಪರಿಶೀಲಿಸಿದಾಗ ಶಶಿಕಲಾಗೆ ವಿಐಪಿ ಸವಲತ್ತು ಒದಗಿಸಿರುವುದು ಮತ್ತು ಪ್ರತೀ ದಿನ ಸಂದರ್ಶಕರ ಭೇಟಿಗೆ ಅವಕಾಶ ನೀಡಿರುವುದು ಸಾಬೀತಾಗಿದೆ. ಬಹುತೇಕ ಅಪರಾಧಿಗಳನ್ನು ಭೇಟಿಯಾಗಲು ಸಂದರ್ಶಕರಿಗೆ 15 ದಿನಕ್ಕೊಮ್ಮೆ ಮಾತ್ರ ಅವಕಾಶವಿರುತ್ತದೆ . ಆದರೆ ಇಲ್ಲಿ ಈ ನಿಯಮವನ್ನು ಉಲ್ಲಂಘಿಸಲಾಗಿದೆ ಎಂದು ಕುಮಾರ್ ಸಲ್ಲಿಸಿದ್ದ ವರದಿಯಲ್ಲಿ ತಿಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News