ಪಿಲಿಕುಳ ಸಂದರ್ಶಕರ ಓಡಾಟಕ್ಕಿನ್ನು ‘ಬಗ್ಗಿ’ ವಾಹನ ಸೌಲಭ್ಯ

Update: 2019-01-21 14:27 GMT

ಮಂಗಳೂರು, ಜ.21: ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮಕ್ಕೆ ಭೇಟಿ ನೀಡುವ ಸಂದರ್ಶಕರಿಗೆ ಉದ್ಯಾನವನ ದೊಳಗೆ ಸಂಚರಿಸಲು ಬ್ಯಾಟರಿಚಾಲಿತ ‘ಬಗ್ಗಿ’ ವಾಹನ ಸೌಲಭ್ಯಕ್ಕೆ ಸೋಮವಾರ ಚಾಲನೆ ನೀಡಲಾಗಿದೆ.

ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಮಲೆನಾಡು ಅಭಿವೃದ್ಧಿ ಮಂಡಳಿಯ ಮೂಲಕ ಬಿಡುಗಡೆಯಾದ ಒಂದು ಕೋಟಿ ರೂ. ಅನುದಾನದಿಂದ ಆರಂಭಿಸಲಾದ ಈ ವಾಹನ ಸೌಲಭ್ಯಕ್ಕೆ ಶಾಸಕ ಉಮಾನಾಥ ಕೋಟ್ಯಾನ್ ಇಂದು ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಪಿಲಿಕುಳ ನಿಸರ್ಗಧಾಮದ ಅಭಿವೃದ್ಧಿಗೆ ಪೂರಕವಾಗಿ ಮಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಯಾಗುತ್ತಿದೆ. ನಾಡಿನ ಜನತೆಗೆ ರಜಾದಿನಗಳನ್ನು ಕಳೆಯಲು ಪಿಲಿಕುಳ ಇನ್ನಷ್ಟು ಸೌಲಭ್ಯಗಳೊಂದಿಗೆ ಅಭಿವೃದ್ಧಿ ಹೊಂದುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಪಿಲಿಕುಳ ಉದ್ಯಾನವನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಮಾತನಾಡಿ, ‘ಬಗ್ಗಿ’ ಸೌಲಭ್ಯದಿಂದ ಪಿಲಿಕುಳ ನಿಸರ್ಗಧಾಮದೊಳಗೆ ಸುಮಾರು ಮೂರೂವರೆ ಕಿಲೋಮೀಟರ್ ಸುತ್ತಾಡಲು ಸಂದರ್ಶಕರಿಗೆ ಅನುಕೂಲವಾಗಲಿದೆ.

ಬ್ಯಾಟರಿಚಾಲಿತ 16 ‘ಬಗ್ಗಿ’ ವಾಹನಗಳು ಪ್ರತಿದಿನ ಬೆಳಗ್ಗೆ 10ರಿಂದ ಸಂಜೆ 5:30ರವರೆಗೆ ಸಾರ್ವಜನಿಕರ ಪ್ರಯಾಣಕ್ಕೆ ಲಭ್ಯವಾಗಲಿದೆ. ಒಂದು ‘ಬಗ್ಗಿ’ಯಲ್ಲಿ 14 ಮಂದಿ ಕುಳಿತುಕೊಳ್ಳಲು ಸಾಧ್ಯವಾಗುತ್ತದೆ. ಎಲ್ಲಾ ವಾಹನಗಳು ಏಕಕಾಲದಲ್ಲಿ ಪಯಣಿಸಿದರೆ ಒಟ್ಟು 220 ಮಂದಿ ನಿಸರ್ಗಧಾಮ ಸುತ್ತಾಡಬಹುದು ಎಂದು ತಿಳಿಸಿದರು.
 
ಸಮಾರಂಭದಲ್ಲಿ ಮಂಗಳೂರು ಮನಪಾ ಸದಸ್ಯೆ ಹೇಮಲತಾ ರಘು ಸಾಲ್ಯಾನ್, ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಜಯಪ್ರಕಾಶ್ ಭಂಡಾರಿ, ಪಿಲಿಕುಳ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ.ಕೆ.ವಿ.ರಾವ್, ಸ್ಕೌಟ್ಸ್ ಆ್ಯಂಡ್ ಗೈಡ್ಸ್‌ನ ಜಿಲ್ಲಾ ಮುಖ್ಯಸ್ಥರಾದ ಮೋಹನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರದೀಪ್ ಮತ್ತಿತರರು ಉಪಸ್ಥಿತರಿದ್ದರು.

ಬಾಬು ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.


 ‘ಬಗ್ಗಿ’ಯಲ್ಲಿ ಪಿಲಿಕುಳದ ಪ್ರಧಾನ ರಸ್ತೆಯ ಮೂಲಕ ದೋಣಿ ವಿಹಾರ, ಸಾಂಸ್ಕೃತಿಕ ಕೇಂದ್ರ, ವಿಜ್ಞಾನ ಕೇಂದ್ರ, ಗುತ್ತಿನ ಮನೆ, ಜೈವಿಕ ಉದ್ಯಾನವನ ಸಂಪರ್ಕ ರಸ್ತೆಯಲ್ಲಿ ಬೆಳಗ್ಗಿನಿಂದ ಸಂಜೆಯವರೆಗೆ ಸುತ್ತಾಡಬಹುದು. ಇದಕ್ಕಾಗಿ ವಯಸ್ಕರಿಗೆ ತಲಾ 25 ರೂ., 10 ವರ್ಷದ ಮಕ್ಕಳಿಗೆ ರೂ.10 ರೂ. ಶುಲ್ಕವನ್ನು ಪಾವತಿಸಬೇಕಿದೆ. ನಿಸರ್ಗಧಾಮ ಪ್ರವೇಶದ್ವಾರದ ಬಳಿಯಿಂದಲೇ ಈ ಬ್ಯಾಟರಿ ಚಾಲಿತ ವಾಹನದಲ್ಲಿ ಸಂಚರಿಸಬಹುದು. ಒಂದು ಸಲ ಖರೀದಿಸಿದ ಟಿಕೆಟ್ ಮೂಲಕ ಒಂದೇ ಬಗ್ಗಿಯಲ್ಲಿ ಪ್ರಯಾಣಿಸಬೇಕೆಂಬ ನಿಯಮವಿಲ್ಲ. ಒಂದು ಕಡೆ ಇಳಿದು ಅಲ್ಲಿನ ವೀಕ್ಷಣೆ ಮುಗಿದ ಬಳಿಕ ಇನ್ನೊಂದು ಬಗ್ಗಿಯಲ್ಲಿ ಬೇರೆಡೆಗೆ ಸಂಚರಿಸಬಹುದಾಗಿದೆ. ಪ್ರತಿ 10 ನಿಮಿಷಕ್ಕೊಂದು ಬಗ್ಗಿ ಪಿಲಿಕುಳ ಪ್ರವೇಶ ದ್ವಾರದಿಂದ ಪಿಲಿಕುಳ ದೋಣಿ ವಿಹಾರ ಕೇಂದ್ರಕ್ಕೆ ತೆರಳಿ ಅಲ್ಲಿಂದ ಗುತ್ತಿನಮನೆಗೆ ಸಾಗಿ ಮರಳಿ ಪಿಲಿಕುಳ ಜೈವಿಕ ಉದ್ಯಾನವನದ ಕಡೆಗೆ ಬರುತ್ತದೆ. ಇದಕ್ಕೆ ಸುಮಾರು 30 ನಿಮಿಷ ತಗಲುತ್ತದೆ. ಸದ್ಯ 14 ಬಗ್ಗಿಗಳಿದ್ದು ಇನ್ನೆರಡು ಶೀಘ್ರವೇ ಸೇರ್ಪಡೆಯಾಗಲಿದೆ. ಈ ಪೈಕಿ ಏಳು ಬಗ್ಗಿಗಳನ್ನು ಮಹಿಳಾ ಚಾಲಕರು ಚಲಾಯಿಸುತ್ತಾರೆ. ಮಂಗಳೂರಿನ ಕಾವೇರಿ ಇಂಡಸ್ಟ್ರೀಸ್ ಈ ವಾಹನ ಓಡಿಸುವ ಗುತ್ತಿಗೆ ಪಡೆದಿದೆ ಎಂದು ಪಿಲಿಕುಳ ಉದ್ಯಾನವನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News