ಇವಿಎಂ ಹ್ಯಾಕಿಂಗ್ ಬಗ್ಗೆ ತಿಳಿದಿದ್ದ ಗೋಪಿನಾಥ್ ಮುಂಢೆಯವರನ್ನು ಹತ್ಯೆಗೈಯಲಾಯಿತು

Update: 2019-01-21 17:31 GMT

#“ಸರಕಾರದ ಬಣ್ಣ ಬಯಲು ಮಾಡಲು ಮುಂದಾಗಿದ್ದ ಬಿಜೆಪಿ ನಾಯಕ ಮುಂಢೆ”

ಲಂಡನ್, ಜ.21: 2014ರ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಇವಿಎಂಗಳನ್ನು ಹ್ಯಾಕ್ ಮಾಡಲಾಗಿತ್ತು ಎನ್ನುವ ವಿಷಯ ತಿಳಿದಿದ್ದ ಕಾರಣ ಬಿಜೆಪಿ ನಾಯಕರೇ ಬಿಜೆಪಿಯ ಹಿರಿಯ ನಾಯಕ ಗೋಪಿನಾಥ್ ಮುಂಢೆಯವರನ್ನು ಹತ್ಯೆಗೈದಿದ್ದಾರೆ ಎಂದು ಅಮೆರಿಕ ಮೂಲದ ಹ್ಯಾಕರ್ ಆರೋಪಿಸಿದ್ದಾರೆ.

ಲಂಡನ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “2014ರಲ್ಲಿ ಈ ಬಗ್ಗೆ ತಿಳಿದಿದ್ದ ಬಿಜೆಪಿ ನಾಯಕನನ್ನು ನಾನು ಭೇಟಿಯಾಗಿದ್ದೆ. ಬಿಜೆಪಿ ನಾಯಕರ ಭೇಟಿಯ ನಂತರ ನಮ್ಮ ತಂಡದ ಸದಸ್ಯರೊಬ್ಬರು ದಾಳಿಯೊಂದರಲ್ಲಿ ಮೃತಪಟ್ಟರು. ಗೋಪಿನಾಥ್ ಮುಂಢೆಯವರಿಗೆ ‘ಹ್ಯಾಕಿಂಗ್ ಗೆಲುವಿನ’ ಬಗ್ಗೆ ತಿಳಿದಿತ್ತು. ಅವರು ಸರಕಾರ ಬಣ್ಣ ಬಯಲು ಮಾಡುತ್ತಾರೆಂದು ಅವರನ್ನು ಹತ್ಯೆಗೈಯಲಾಯಿತು” ಎಂದು ಹ್ಯಾಕರ್ ಸೈಯದ್ ಶುಜಾ ಗಂಭೀರ ಆರೋಪ ಮಾಡಿದ್ದಾರೆ.

2014ರಲ್ಲಿ ಜೂನ್ ನಲ್ಲಿ ನಡೆದ ಅಪಘಾತವೊಂದರಲ್ಲಿ ಗೋಪಿನಾಥ್ ಮುಂಢೆ ಮೃತಪಟ್ಟಿದ್ದರು.

2009ರಿಂದ 2014ರವರೆಗೆ ಸೈಯದ್ ಶುಜಾ ಎಲೆಕ್ಟ್ರಾನಿಕ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿ. ಜೊತೆಗೆ ಕೆಲಸ ಮಾಡಿದ್ದರು ಎಂದವರು ಹೇಳುತ್ತಾರೆ. ನಾಲ್ಕು ದಿನಗ ಹಿಂದೆ ತನ್ನ ಮೇಲೆ ದಾಳಿ ನಡೆದಿತ್ತು ಎಂದವರು ಆರೋಪಿಸಿದ್ದಾರೆ. 2014ರ ಚುನಾವಣೆಯಲ್ಲಿ ಬಳಸಲಾದ ಇವಿಎಂಗಳನ್ನು ರಚಿಸಿದ್ದ ತಂಡದಲ್ಲಿ ತಾನೂ ಇದ್ದೆ ಎಂದವರು ಹೇಳಿದ್ದಾರೆ.

ಹೇಗೆ ಹ್ಯಾಕಿಂಗ್ ನಡೆಸಲಾಗುತ್ತದೆ ಎನ್ನುವುದನ್ನು ಎಲ್ಲರಿಗೂ ತೋರಿಸಲು ತಾನು ಬಯಸಿದ್ದೇನೆ ಎಂದವರು ಹೇಳಿದ್ದಾರೆ.

‘ಪ್ರತ್ಯಕ್ಷ ಪ್ರಾತ್ಯಕ್ಷಿಕೆ’ ನೀಡಿದ್ದ ‘ಆಪ್’

2017ರಲ್ಲಿ, ಆಮ್ ಆದ್ಮಿ ಪಕ್ಷದ ಶಾಸಕ ಸೌರಭ್ ಭಾರದ್ವಾಜ್, ಯಾವುದೇ ರಾಜಕೀಯ ಪಕ್ಷದ ಪರವಾಗಿ ಮತ ಯಂತ್ರಗಳನ್ನು ಹೇಗೆ ಸಿದ್ಧಗೊಳಿಸಬಹುದು ಎಂಬ ಬಗ್ಗೆ ದಿಲ್ಲಿ ವಿಧಾನಸಭೆಯಲ್ಲಿ ‘ಪ್ರತ್ಯಕ್ಷ ಪ್ರಾತ್ಯಕ್ಷಿಕೆ’ಯನ್ನು ನೀಡಿದ್ದರು.

ಆದರೆ, ಅವರ ವಾದವನ್ನು ಚುನಾವಣಾ ಆಯೋಗ ತಳ್ಳಿಹಾಕಿತ್ತು. ದಿಲ್ಲಿ ವಿಧಾನಸಭೆಯಲ್ಲಿ ಬಳಸಲಾದ ಯಂತ್ರವು ಮತ ಯಂತ್ರದಂತೆ ಕಾಣುವ ಯಂತ್ರವಾಗಿದ್ದು, ತಾನು ಬಳಸುತ್ತಿರುವ ನೈಜ ಯಂತ್ರವಲ್ಲ ಎಂದು ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News